ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ಕಾಡುಕೋಣ ತಿವಿತಕ್ಕೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.ಗ್ರಾಮದ ತಿಮ್ಮಪ್ಪ(70) ಮೃತ ವ್ಯಕ್ತಿ. ಸೋಮವಾರ ಮುಂಜಾನೆ ಕಾಫಿತೋಟಕ್ಕೆ ತೆರಳುವ ವೇಳೆ ಏಕಾಏಕಿ ಎದುರಾದ ಕಾಡುಕೋಣ ವ್ಯಕ್ತಿಯ ಮೇಲೆ ದಾಳಿ ನಡೆಸಿ ಹಿಗ್ಗಾಮುಗ್ಗ ತಿವಿದಿದ್ದರಿಂದ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಘಟನೆ ತಿಳಿದ ಗ್ರಾಮಸ್ಥರು ಸ್ಥಳದಲ್ಲಿ ಪ್ರತಿಭಟನೆ ನಡೆಸಿ ಅರಣ್ಯ ಇಲಾಖೆವಿರುದ್ದ ಆಕ್ರೋಶ ವ್ಯಕ್ತಪಡಿಸಿ, ಹೆತ್ತೂರು ಹೋಬಳಿಯ ಹಲವು ಗ್ರಾಮಗಳು ಕಾಡಾನೆ ಕಾಟದಿಂದ ಬೆಳೆ ಬೆಳೆಯದಂತ ಪರಿಸ್ಥಿತಿ ನಿರ್ಮಾಣವಾಗಿದ್ದರೆ ಮತ್ತೆ ಹಲವೆಡೆ ಕಾಟಿ, ಚಿರತೆ ಹಾವಳಿಯಿಂದ ತೋಟಗಳಿಗೆ ನಿರ್ಭಯವಾಗಿ ಸಂಚರಿಸುವುದು ದುಸ್ತರವಾಗಿದೆ. ಕಾಡಾನೆಗಿಂತ ಕಾಟಿಗಳು ಕಾಫಿಗಿಡಗಳಿಗೆ ಮಾರಕವಾಗಿದ್ದು, ಹತ್ತಾರು ವರ್ಷ ಬೆಳೆಸಿದ ಗಿಡಗಳನ್ನು ಕೋಡುಗಳಿಂದ ಕಿತ್ತು ಹಾಕುವ ಮೂಲಕ ನಷ್ಟ ಉಂಟು ಮಾಡುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು ಯಾವುದೆ ಪ್ರಯೋಜವಾಗಿಲ್ಲ. ಸ್ಥಳಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಆಗಮಿಸಬೇಕು ಎಂದು ಪಟ್ಟುಹಿಡಿದರು.
ಸ್ಥಳಕ್ಕಾಮಿಸಿದ ಶಾಸಕ ಸಿಮೆಂಟ್ ಮಂಜು, ಬಿಸ್ಲೆ ಅರಣ್ಯದಂಚಿನ ಗ್ರಾಮಗಳಲ್ಲಿ ಕಾಟಿಗಳ ಸಂಖ್ಯೆ ಅತಿಯಾಗಿದ್ದು, ಅಭಯಾರಣ್ಯದಲ್ಲಿ ಮೇವಿನ ಕೊರತೆ ಇರುವ ಕಾರಣ ನಾಡಿಗೆ ನುಗ್ಗುತ್ತಿವೆ. ಆದ್ದರಿಂದ, ಕಾಟಿಗಳು ಗ್ರಾಮಗಳಿಗೆ ಪ್ರವೇಶಿಸದಂತೆ ಅರಣ್ಯ ಇಲಾಖೆ ಜಾಗೃತೆವಹಿಸಬೇಕು. ಮೃತ ಕುಟುಂಬಕ್ಕೆ ತಕ್ಷಣವೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಈ ವೇಳೆ ಸ್ಥಳಕ್ಕಾಮಿಸಿದ ಡಿಎಫ್‌ಒ ಸೌರಭಕುಮಾರ್ ಮೃತ ಕುಟುಂಬಕ್ಕೆ ೨೦ ಲಕ್ಷ ಚೆಕ್ ವಿತರಿಸಿ ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕುಳಿಸದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದೆ ಪಡೆಯಲಾಯಿತು. ಹೆತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ನಡೆಸಿ ವಾರಸುದಾರರಿಗೆ ಮೃತ ದೇಹ ಹಸ್ತಾಂತರಿಸಲಾಯಿತು.ಈ ವೇಳೆ ಉಪವಿಭಾಗಾಧಿಕಾರಿ ಶೃತಿ. ಹಾಸನ ಎಸಿಎಫ್ ಮೋಹನ್, ಜಗದೀಶ್‌ಗೊದ್ದು,ಸತೀಶ್ ವನಗೂರು,ತಮ್ಲಾಗೇರಿ ಗ್ರಾಮದ ಗಗನ್,ಸಂಪತ್ತ್ ಮುಂತಾದವರಿದ್ದರು.