ಕನ್ನಡಪ್ರಭ ವಾರ್ತೆ ನಾಲತವಾಡ

ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗಮನಕ್ಕೆ ತರಲು ಕರೆ ಮಾಡಿದರೂ ತಾಲೂಕಿನ ಹಲವು ಅಧಿಕಾರಿಗಳು ಕರೆ ಸ್ವೀಕರಿಸುತ್ತಿಲ್ಲ. ಅಂತಹ ಅಧಿಕಾರಿಗಳನ್ನು ಅಮಾನತುಗೊಳಿಸಿ ಎಂದು ಸಾಬೂನು ಮತ್ತು ಮಾರ್ಜಕ ನಿಗಮ ಅಧ್ಯಕ್ಷರು ಹಾಗೂ ಶಾಸಕ ಅಪ್ಪಾಜಿ ನಾಡಗೌಡ ಅವರಿಗೆ ಸಾರ್ವಜನಿಕರು ಒತ್ತಾಯಿಸಿದರು.

ಸಮೀಪದ ನಾಗರಬೆಟ್ಟ ಮಾರುತೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯಲ್ಲಿ ವಿವಿಧ ಸಮಸ್ಯೆಗಳ ಬಗ್ಗೆ ಶಾಸಕರ ಗಮನ ಸೆಳೆದ ಸ್ಥಳೀಯರು, ನಾಗರಬೆಟ್ಟ ಗುಡ್ಡದಲ್ಲಿ ನಿರ್ಮಿಸಲಾದ ಬಹುಹಳ್ಳಿ ಕುಡಿಯುವ ನೀರು ಸರಬರಾಜು ಘಟಕದಲ್ಲಿ ನೀರು ಶುದ್ಧೀಕರಣ ನಡೆಯುತ್ತಿಲ್ಲ.ಈ ಕುರಿತು ಮೇಲಧಿಕಾರಿ ಹಿರೇಗೌಡ್ರ ಅವರಿಗೆ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ ಎಂದು ದೂರಿದರು.

ಗ್ರಾಮದ ರೈತರ ಜಮೀನುಗಳಿಗೆ ಈವರೆಗೂ ಸರಿಯಾದ ರಸ್ತೆಗಳಿಲ್ಲ, ಕೆಲವರು ಗುಡ್ಡ ಅತಿಕ್ರಮಿಸಿಕೊಂಡು ಉಳುಮೆ ಮಾಡುತ್ತಿದ್ದಾರೆ. ನೀರಾವರಿಗೆ ಜಮೀನು ಕಳೆದುಕೊಂಡ ಹಲವು ರೈತರಿಗೆ ಅವಾರ್ಡ್‌ ನೀಡಿಲ್ಲ, ಜಮೀನು ಪರಿಹಾರ ದರ ಹೆಚ್ಚಿಸಿ ಎಂದು ಒತ್ತಾಯಿಸಿದರು.

ಗ್ರಾಪಂ ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ಕ್ರಿಯಾಯೋಜನೆ ಮಾಡುತ್ತಾರೆ, ಶಿರಾಡೋಣ ರಸ್ತೆಯನ್ನು ರೈತರು ಅತಿಕ್ರಮಣ ಮಾಡಿಕೊಂಡಿದ್ದು, ಪಿಡಬ್ಲುಡಿ ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ ಎಂದು ರೈತ ಪರ ಹೋರಾಟಗಾರ ಮಲ್ಲನಗೌಡ ಸಿದ್ದರಡ್ಡಿ ಆರೋಪಿಸಿದರು.


ರೈತರಿಗೆ ಗೊಬ್ಬರದ ದರ ಹೊರೆಯಾಗುತ್ತಿದ್ದು, ಕಡಿಮೆ ಮಾಡಬೇಕು. ಟಿಸಿ ಸುಟ್ಟರೆ 2-3 ದಿನ ಕತ್ತಲಲ್ಲೇ ಕಳೆಯಬೇಕಿದೆ, ಶುದ್ಧ ಕುಡಿಯುವ ನೀರು ಗಗನ ಕುಸುಮವಾಗಿದ್ದು, ನಾಲತವಾಡಕ್ಕೆ ಹೋಗಿ ತರುತ್ತೇವೆ, ರಸ್ತೆಗಳಿಲ್ಲ, ಚರಂಡಿಗಳ ಸ್ವಚ್ಛತೆಯಿಲ್ಲ ಎಂದು ನಾನಾ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತರಲಾಯಿತು.

ಜನರ ಸಮಸ್ಯೆಗಳಿಗೆ ಶಾಸಕರ ಸ್ಪಂದನೆ: ನಾಗರಿಕರ ಸಮಸ್ಯೆಗಳನ್ನು ಆಲಿಸಿದ ಶಾಸಕರು, ಪರಸ್ಪರ ಸಹಕಾರದಿಂದ ಸಾರ್ವಜನಿಕರ ಸಮಸ್ಯೆ ಬಗೆಹರಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬಳಿಕ ರೈತರೊಂದಿಗೆ ಚರ್ಚಿಸಿದ ಶಾಸಕ ನಾಡಗೌಡ ಅವರು, ಸುಮಾರು ವರ್ಷಗಳಿಂದ ಅಲ್ಲಲ್ಲಿ ನನೆಗುದಿಗೆ ಬಿದ್ದ ಕಾಲುವೆ ಕಾಮಗಾರಿಗೆ ತಾವು ಸಹಕರಿಸಿದರೆ ಶೀಘ್ರ ಪೂರ್ಣಗೊಳಿಸಿ ನೀರು ಹರಿಸಲಾಗುವುದು. ಕೆಬಿಜೆಎನ್‌ಎಲ್ ಅಧಿಕಾರಿಗಳು ಒಂದು ವಾರದಲ್ಲಿ ಜಮೀನುಗಳ ಸಮಸ್ಯೆ ಇತ್ಯರ್ಥ ಹಾಗೂ ಅವಾರ್ಡ್ ವಿತರಣೆಗೆ ಸಭೆ ಕರೆಯಲಿದ್ದಾರೆ. ನೀರು ಹರಿಸುವ ಕನಸು ನನಗೂ ಇದೆ, ಇದರಲ್ಲಿ ಯಾವುದೇ ಸಂಶಯ ಬೇಡ. ರೈತರ ಅಡೆ ತಡೆಗಳಿಂದ ಯೋಜನೆ ವಿಳಂಬಗೊಳ್ಳುತ್ತಿದೆ. ಈ ಭಾಗಕ್ಕೆ ಈಗಾಗಲೇ ಸುಮಾರು ₹220 ಕೋಟಿ ಭೂಪರಿಹಾರ ಬಂದಿದ್ದು, ಶೀಘ್ರ ವಿತರಿಸಲಾಗುತ್ತದೆ. ರೈತರು ಸಹಕರಿಸಿದರೆ ಆಗಸ್ಟ್‌ನಲ್ಲೇ ಕಾಲುವೆಗಳಿಗೆ ನೀರು ಹರಿಸುತ್ತಾರೆ ಎಂದು ಭರವಸೆ ನೀಡಿದರು.

ಅರಣ್ಯೀಕರಣಕ್ಕೆ ಒತ್ತು ಕೊಡಿ: ಸರಕಾರಿ ಸ್ಥಳಗಳಲ್ಲಿ ಮರಗಳನ್ನು ಬೆಳಸಬೇಕು. ಒಂದು ವೇಳೆ ಅರಣ್ಯ ಇಲಾಖೆಯವರಿಗೆ ಸಸಿ ನೆಡಲು ಬಂದಾಗ ತೊಂದರೆ ಉಂಟು ಮಾಡಿದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸಿ ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ಗ್ಯಾರಂಟಿ ಯೋಜನೆಯ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡ್ರ, ಮಲ್ಲನಗೌಡ ಸಿದರಡ್ಡಿ, ಬಿಇಓ ಬಸವರಾಜ ಸಾವಳಗಿ, ಕೃಷಿ ಅಧಿಕಾರಿ ಸುರೇಶ ಬಾವಿಕಟ್ಟಿ, ಅಶೋಕ ಕಾಂಬ್ಳೆ, ಆಹಾರ ಇಲಾಖೆಯ ಗುಮ್ಮತಿಮಠ, ತೋಟಗಾರಿಕೆ ಇಲಾಖೆಯ ಶಾಲಿನಿ, ಪಿಡಿಓ ನಾರಾಯಣ, ಕೆಬಿಜೆಎನ್‌ಎಲ್‌ನ ಎಇಇ ಅಮರೇಗೌಡ, ಶಿವರಾಜ, ಅಬುಬಕರ್ ಬಾಗವಾನ್, ಸಿಡಿಪಿಓ ಶಿವಮೂರ್ತಿ ಕುಂಬಾರ, ಅಬಕಾರಿ ಇಲಾಖೆ ಮಹೇಶ ಮಳವಾಡಕರ್ ತಾಪಂ ಇಓ ಸಂಗನಗೌಡ, ಸಮಾಜ ಕಲ್ಯಾಣ ಇಲಾಖೆಯ ಬಸಂತಿ ಮಠ, ಕಂದಾಯ ಇಲಾಖೆಯ ಎನ್.ಬಿ. ದೊರೆ, ಹೆಸ್ಕಾಂನ ಗುರಡ್ಡಿ, ಜಿಪಂ ಎಂಜಿನಿಯರ್‌ ಮುರಾಳ, ಅರಣ್ಯ ಇಲಾಖೆಯ ಗಿರೀಶ ಬಿರಾದಾರ, ಪಿಎಸೈ ಸಂಜಯ್ ತಿಪ್ಪಾರಡ್ಡಿ, ಎಂ.ಎಂ. ಬೆಳಗಲ್ ಸೇರಿ ಅಧಿಕಾರಿಗಳಿದ್ದರು.