ಸ್ವಾಮಿ ವಿವೇಕಾನಂದರು ಕೇವಲ ಒಬ್ಬ ವ್ಯಕ್ತಿಯಲ್ಲ. ಅವರು ಯುವಶಕ್ತಿ. ವೀರ ಸನ್ಯಾಸಿಯಾಗಿದ್ದು ಎಲ್ಲ ಯುವಜನತೆಗೆ ಮಾದರಿಯಾಗಿದ್ದಾರೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಶಿವಮೊಗ್ಗ: ಸ್ವಾಮಿ ವಿವೇಕಾನಂದರು ಕೇವಲ ಒಬ್ಬ ವ್ಯಕ್ತಿಯಲ್ಲ. ಅವರು ಯುವಶಕ್ತಿ. ವೀರ ಸನ್ಯಾಸಿಯಾಗಿದ್ದು ಎಲ್ಲ ಯುವಜನತೆಗೆ ಮಾದರಿಯಾಗಿದ್ದಾರೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.ಇಲ್ಲಿನ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಸೋಮವಾರ ಸ್ವಾಮಿ ವಿವೇಕಾನಂದರ ಜಯಂತಿ ಪ್ರಯುಕ್ತ ರಾಷ್ಟ್ರೀಯ ಯುವ ದಿನ ಹಾಗೂ ಯುವ ಸಪ್ತಾಹ ಅಂಗವಾಗಿ ಏರ್ಪಡಿಸಲಾಗಿದ್ದ ಯುವಜನತೆಗೆ ಐಎಎಸ್ ಮತ್ತು ಐಪಿಎಸ್ ಕಾರ್ಯಾಗಾರ ಹಾಗೂ ಮಾದಕ ವ್ಯಸನದ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾಮಿ ವಿವೇಕಾನಂದ ಅವರು ಆಧ್ಯಾತ್ಮಿಕ ಗುರುಗಿಂತ ಹೆಚ್ಚಾಗಿ ವೀರ ಸನ್ಯಾಸಿಯಾಗಿದ್ದರು. ಅವರನ್ನು ನೆನೆದರೆ ಸಾಕು ನಮ್ಮ ಹಿಂದೂ ಸಂಸ್ಕೃತಿ, ಪರಂಪರೆ ಕಣ್ಣ ಮುಂದೆ ಬರುತ್ತದೆ. ಭಾರತ ದೇಶ ಮಾತ್ರವಲ್ಲ ಇದು ಪುಣ್ಯಭೂಮಿ, ಮಾತೃಭೂಮಿ ಎಂಬ ಅರಿವನ್ನು ನೀಡಿದವರು ಅವರು. ನಮ್ಮ ಮಣ್ಣು, ನೆಲ, ಜಲ, ದೇಶದ ಕುರಿತು ಅಪಾರ ಪ್ರೇಮ ಹೊಂದಿದ್ದ ಅವರು ಯುವಜನತೆಯಲ್ಲಿರುವ ಅಪಾರ ಶಕ್ತಿಯ ಕುರಿತು ಒತ್ತಿ ಹೇಳಿ ಅವರಿಗೆ ಪ್ರೇರಕ ಶಕ್ತಿಯಾಗಿದ್ದಾರೆ ಎಂದರು. ಸ್ವಾಮಿ ವಿವೇಕಾನಂದರು ತಮ್ಮ ಜೀವನವನ್ನೇ ದೇಶಕ್ಕಾಗಿ ಸಮರ್ಪಿಸಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಅವರೊಂದು ವಿಶ್ವವಿದ್ಯಾಲಯವಾಗಿದ್ದರು. ಅವರು ದೇಶಭಕ್ತಿ, ಪ್ರಾಮಾಣಿಕತೆ ಮತ್ತು ನಂಬಿಕೆಯ ಪ್ರತೀಕ ಎಂದು ಬಣ್ಣಿಸಿದರು.ವಿಧಾನ ಪರಿಷತ್ ಶಾಸಕಿ ಬಲ್ಕೀಶ್ ಬಾನು ಮಾತನಾಡಿ, ಯುವಜನತೆ ಒಳ್ಳೆಯ ವ್ಯಕ್ತಿತ್ವ ಬೆಳೆಸಿಕೊಂಡರೆ ಅದೇ ದೇಶಕ್ಕೆ ದೊಡ್ಡ ಕೊಡುಗೆ. ಇಂದಿನ ಯುವಜನತೆಗೆ ಎಲ್ಲ ರೀತಿಯ ಸೌಲಭ್ಯಗಳು ಸಿಗುತ್ತಿದ್ದು, ಒಳ್ಳೆಯ ಶಿಕ್ಷಣ ಪಡೆದುಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆಯನ್ನು ಯುವಕರೆಲ್ಲ ಓದಿ ತಿಳಿದುಕೊಂಡು ಅವರ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಾಗೂ ಯಾವುದೇ ರೀತಿಯ ಮಾದಕ ವಸ್ತುಗಳಿಂದ ದೂರ ಇರಲು ದೃಢ ನಿರ್ಧಾರ ತೆಗೆದುಕೊಳ್ಳಬೇಕು ಎಂದರು. ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ಯುವಜನತೆ ಸದಾ ಕಲಿಕೆಯಲ್ಲಿ ಉತ್ಸುಕರಾಗಿರಬೇಕು. ಯಾವುದು ಸರಿ ಮತ್ತು ತಪ್ಪು ಎಂದು ನಿರ್ಧರಿಸುವ ಅನಲಿಟಿಕಲ್ ಬುದ್ಧಿ ಇರುವ ಕಾಲಘಟ್ಟ ಇದಾಗಿದ್ದು ಈ ವಯಸ್ಸಿನಲ್ಲಿ ಧೈರ್ಯ ಹೆಚ್ಚಿರುವ ಕಾರಣ ತಾವು ತಮ್ಮ ನೆಚ್ಚಿನ ಕ್ಷೇತ್ರಗಳಲ್ಲಿ ಮುಂದೆ ಬರಬೇಕು ಎಂದು ಸಲಹೆ ನೀಡಿದರು.ಐಎಎಸ್ ಪ್ರೊಬೇಷನರಿ ಅಧಿಕಾರಿ ನಾಗೇಂದ್ರ ಕುಮಾರ್ ಬಾಬು, ಪಿಪಿಟಿ ಪ್ರದರ್ಶನ ಮೂಲಕ ಐಎಎಸ್ ಪರೀಕ್ಷೆಗೆ ತಯಾರಿ, ಪರೀಕ್ಷೆ, ಸಂದರ್ಶನ ಮತ್ತು ಆಯ್ಕೆ ಪ್ರಕ್ರಿಯೆ ಕುರಿತು ವಿದ್ಯಾರ್ಥಿಗಳಿಗೆ ಸವಿವರವಾದ ಮಾಹಿತಿ ನೀಡಿದರು.
ಐಪಿಎಸ್ ಪ್ರೊಬೇಷನರಿ ಅಧಿಕಾರಿ ಮೇಘಾ ಅಗರ್ವಾಲ್, ಐಪಿಎಸ್ ಪರೀಕ್ಷೆಗೆ ತಯಾರಿ, ಪರೀಕ್ಷೆ, ಸಂದರ್ಶನ, ಆಯ್ಕೆ ಪ್ರಕ್ರಿಯೆ ಕುರುತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.ಸೈಬರ್ ಕ್ರೈಮ್ ವಿಭಾಗದ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ ಮಾದಕ ವಸ್ತುಗಳ ದುಷ್ಪರಿಣಾಮಗಳು, ಎನ್‌ಡಿಪಿಎಸ್ ಕಾಯ್ದೆ, ಮಾದಕ ವಸ್ತುಗಳಿಂದ ದೂರು ಇರುವ ಬಗ್ಗೆ ಕುರಿತು ವಿದ್ಯಾರ್ಥಿಗಳಿಗೆ ಕಾರ್ಯಾಗಾರದಲ್ಲಿ ಮಾಹಿತಿ ನೀಡಿದರು.ಯುವ ಸಪ್ತಾಹದ ಅಂಗವಾಗಿ ತಾಲೂಕು ಮಟ್ಟದಲ್ಲಿ ಏರ್ಪಡಿಸಲಾಗಿದ್ದ ಕ್ರೀಡೆ ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅಪರ ಜಿಲ್ಲಾಧಿಕಾರಿವಿ.ಅಭಿಷೇಕ್ ,ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲೇಶಪ್ಪ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಶೋಭಾ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಮತ್ತಿತರರಿದ್ದರು.