ಗದಗ: ಟಾಗೋರ್ ಅವರ ದೃಷ್ಟಿಯಲ್ಲಿ ಸ್ವರಾಜ್ಯ ಎಂದರೆ ಕೇವಲ ರಾಜಕೀಯ ಸ್ವಾತಂತ್ರ‍್ಯವಲ್ಲ. ಅದು ವ್ಯಕ್ತಿಯ ಆಂತರಿಕ ಸ್ವಾತಂತ್ರ‍್ಯ, ಆತ್ಮಶಕ್ತಿ ಮತ್ತು ನೈತಿಕ ಬೆಳವಣಿಗೆಯ ಸಂಕೇತ ಎಂದು ಪಿ.ಸಿ. ಜಾಬಿನ್ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಸಂಧ್ಯಾ ಕುಲಕರ್ಣಿ ತಿಳಿಸಿದರು.

ನಗರದ ಕೆ.ಎಲ್.ಇ. ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐ.ಸಿ.ಪಿ.ಆರ್. ಸಹಯೋಗದಲ್ಲಿ ರವೀಂದ್ರನಾಥ ಠ್ಯಾಗೋರ ಅವರ ಸ್ವರಾಜ್ಯ ಪರಿಕಲ್ಪನೆ ವಿಷಯದ ಕುರಿತು ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವರಾಜ್ಯ ಎಂದರೆ ಇತರ ರಾಷ್ಟ್ರಗಳ ವಿರುದ್ಧ ದ್ವೇಷ ಬೆಳೆಸುವುದು ಅಲ್ಲ, ಅದು ಮಾನವೀಯತೆ, ಸಹಬಾಳ್ವೆ ಮತ್ತು ವಿಶ್ವಸೌಹಾರ್ದ ಒತ್ತಿ ಹೇಳುವ ಪರಿಕಲ್ಪನೆ. ಸ್ವರಾಜ್ಯ ಕೇವಲ ಶಕ್ತಿ ಅಲ್ಲ, ನಮ್ಮ ಮನಸ್ಸು, ಚಿಂತನೆ ಮತ್ತು ಜೀವನಮೌಲ್ಯಗಳು ಸ್ವತಂತ್ರವಾಗಬೇಕು. ದೇಶದ ಪ್ರಗತಿ ಜನರ ಒಳಗಿನ ಶಕ್ತಿಯನ್ನು ಜಾಗೃತಗೊಳಿಸುವುದರಲ್ಲಿದೆ ಎಂದು ಅವರು ನಂಬಿದ್ದರು ಎಂದರು.

ಡಾ. ಭೀಮಸೇನ್ ಉಗ್ರದ ಮಾತನಾಡಿ, ಟಾಗೋರ್ ಅವರ ಅಭಿಪ್ರಾಯದಲ್ಲಿ ಸ್ವರಾಜ್ಯ ಚಳವಳಿಯಲ್ಲಿ ಕೆಲವೊಮ್ಮೆ ಕೇವಲ ಸೀಮಿತ ರಾಷ್ಟ್ರವಾದದ ದೃಷ್ಟಿಕೋನ ಬೆಳೆಯುವ ಅಪಾಯವಿತ್ತು. ಅತಿಯಾದ ರಾಷ್ಟ್ರಭಾವನೆ ಕೆಲವೊಮ್ಮೆ ಹಿಂಸೆಗೆ ದಾರಿ ಮಾಡಿಕೊಡಬಹುದು ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದರು.

ದೇಶಪ್ರೇಮ ಮಾನವೀಯ ಮೌಲ್ಯಗಳನ್ನು ಮೀರಬಾರದು. ಇತರ ರಾಷ್ಟ್ರಗಳ ವಿರುದ್ಧ ದ್ವೇಷ ಹುಟ್ಟಿಸುವ ರೀತಿಯ ರಾಷ್ಟ್ರವಾದ ಸ್ವರಾಜ್ಯದ ನಿಜವಾದ ಆತ್ಮಕ್ಕೆ ವಿರುದ್ಧವೆಂದು ಅವರು ನಂಬಿದ್ದರು. ಇದಲ್ಲದೆ, ಪಾಶ್ಚಾತ್ಯ ವೈಜ್ಞಾನಿಕ ಚಿಂತನೆ ಮತ್ತು ತಾರ್ಕಿಕತೆಯನ್ನು ಸಂಪೂರ್ಣವಾಗಿ ತಳ್ಳಿಹಾಕುವ ಮನೋಭಾವವನ್ನೂ ಟಾಗೋರ್ ಒಪ್ಪಲಿಲ್ಲ. ಅವರ ದೃಷ್ಟಿಯಲ್ಲಿ ಭಾರತ ತನ್ನ ಸಾಂಸ್ಕೃತಿಕ ಮೌಲ್ಯಗಳನ್ನು ಕಾಪಾಡಿಕೊಳ್ಳಬೇಕು. ಆದರೆ ವಿಶ್ವದ ಉತ್ತಮ ವಿಚಾರಗಳನ್ನು ಸ್ವೀಕರಿಸುವ ಮನಸ್ಸು ಇರಬೇಕು. ಪಾಶ್ಚಾತ್ಯ ಜ್ಞಾನವನ್ನು ವಿರೋಧಿಸುವುದಕ್ಕಿಂತ, ಅದನ್ನು ಸಮತೋಲನದಿಂದ ಅಳವಡಿಸಿಕೊಳ್ಳುವುದೇ ಪ್ರಗತಿಯ ಮಾರ್ಗ ಎಂದು ಅವರು ತಿಳಿಸಿದ್ದರು ಎಂದರು.


ಡಾ. ವೀಣಾ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು. ಪ್ರೊ. ವಿಶಾಲ ತೆಳಗಡೆ ಸ್ವಾಗತಿಸಿದರು. ದೀಪಾ ಬಾಚನಹಳ್ಳಿ ನಿರೂಪಿಸಿದರು.