ಸರ್ವಾಧಿಕಾರದ ಪ್ರಜಾಪ್ರಭುತ್ವದ ಕಡೆ ಸರ್ಕಾರ ಹೋಗುತ್ತಿದೆ

| Published : Aug 18 2024, 01:56 AM IST

ಸರ್ವಾಧಿಕಾರದ ಪ್ರಜಾಪ್ರಭುತ್ವದ ಕಡೆ ಸರ್ಕಾರ ಹೋಗುತ್ತಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಆಳುವಂತಹ ತತ್ವ ಯಾವುದು ಎಂಬುದನ್ನು ಆರಿಸಿಕೊಳ್ಳುವ ಸಾಮರ್ಥ್ಯ ನಮಗೆ ಬರಬೇಕಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ದೇಶದಲ್ಲಿ ಜನ ಪರವಾದ ಪ್ರಜಾಪ್ರಭುತ್ವ ಇರಬೇಕಿದೆ ಹೊರತು, ಸರ್ವಾಧಿಕಾರದ ಪ್ರಜಾಪ್ರಭುತ್ವದ ಕಡೆ ಸರ್ಕಾರ ಹೋಗುತ್ತಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿಸುಂದರಂ ಕಳವಳ ವ್ಯಕ್ತಪಡಿಸಿದರು.ನಗರದ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಕಾರ್ಮಿಕ ನಾಯಕ ಸೂರ್ಯನಾರಾಯಣ ರಾವ್ (ಸೂರಿ) ಜನ್ಮ ಶತಮಾನೋತ್ಸವ ಪ್ರಯುಕ್ತ ಶನಿವಾರ ಸಿಐಟಿಯು ಆಯೋಜಿಸಿದ್ದ ಪ್ರಸ್ತುತ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಇರುವ ಸವಾಲುಗಳು ಕುರಿತ ವಿಚಾರಸಂಕಿರಣವನ್ನು ಅವರು ಉದ್ಘಾಟಿಸಿ ಮಾತನಾಡಿದರು.ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಆಳುವಂತಹ ತತ್ವ ಯಾವುದು ಎಂಬುದನ್ನು ಆರಿಸಿಕೊಳ್ಳುವ ಸಾಮರ್ಥ್ಯ ನಮಗೆ ಬರಬೇಕಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜ್ಞೆಯ ಕೊರತೆ ಅಪಾಯಕಾರಿಯಾಗಿದ್ದು, ಸಮಂಜಸತೆಯ ಮನೋಭಾವವಿಲ್ಲದಿದ್ದರೆ, ಪ್ರಜಾಪ್ರಭುತ್ವ ಜನಸಮೂಹದ ಆಡಳಿತಕ್ಕೆ ಅವನತಿ ಹೊಂದುತ್ತದೆ ಎಂದು ಅವರು ಹೇಳಿದರು.ಕಾನೂನುಗಳು ಜನರ ಪರವಾಗಿ ಇರುವುದನ್ನು ಹೊರತುಪಡಿಸಿ, ಜನರು ಆಯ್ಕೆ ಮಾಡಿದ ಜನಪ್ರತಿನಿಧಿಗಳ ಪರವಾಗಿ ಇರುತ್ತವೆ. ಇಡೀ ದೇಶದಲ್ಲಿನ ಸಂಪತ್ತು ಕೇವಲ 5 ಕುಟುಂಬಗಳಿಗೆ ಮಾತ್ರ ಸೇರುತ್ತಿದ್ದು, ದೊಡ್ಡ ಪ್ರಮಾಣದಲ್ಲಿ ಕಾರ್ಪೊರೇಟ್ ಪರವಾಗಿ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಅವರು ಆರೋಪಿಸಿದರು.ಅನೇಕ ಪ್ರಜಾಸತ್ತಾತ್ಮಕ ದೇಶಗಳಲ್ಲಿ ರಾಜಕೀಯ ನಾಯಕರು, ಅಧಿಕಾರಿಗಳು, ಭ್ರಷ್ಟರು, ಅಪ್ರಾಮಾಣಿಕರು ಮತ್ತು ಅಸಮರ್ಥರಾಗಿದ್ದಾರೆ. ಇದರಿಂದ ನಾಗರೀಕರಲ್ಲಿ ವಿಶ್ವಾಸದ ಕೊರತೆ ಉಂಟಾಗುತ್ತಿದ್ದು, ಇದರಿಂದ ದೇಶದಲ್ಲಿ ಪ್ರಜಾಪ್ರಭುತ್ವದ ಕಾರ್ಯನಿರ್ವಹಣೆಯ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತದೆ ಎಂದರು.ಸಂವಿಧಾನ ಎಂಬುದು ದೇಶದ ರಚನಾತ್ಮಕ ಅಸ್ತಿಪಂಜರವಿದ್ದಂತೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸರ್ಕಾರದಲ್ಲಿ ಜನರ ಪಾಲ್ಗೊಳ್ಳುವಿಕೆ ಮತ್ತು ಜನಪ್ರತಿನಿಧಿಗಳು, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಸಾರ್ವಜನಿಕರಿಗೆ ಹೊಂದಿರುವ ಹೊಣೆಗಾರಿಕೆ ಬಹಳ ಮಹತ್ವದ್ದು. ಈ ಮಹತ್ವದ ಕಾರ್ಯಗಳಿಗೆ ಸಂವಿಧಾನವು ಸ್ಥಿರತೆಯನ್ನು ಒದಗಿಸುತ್ತದೆ. ಸಾಂವಿಧಾನಿಕ ಸಮಗ್ರತೆಯೇ ಪ್ರಜಾಪ್ರಭುತ್ವದ ಮೈಲುಗಲ್ಲು ಎಂದು ಅವರು ಹೇಳಿದರು.ಸಮಾಜದಲ್ಲಿ ಮೌಢ್ಯತೆ ಸೃಷ್ಟಿ ಮಾಡುವ ಸ್ವಾಮೀಜಿಗಳಿಗೆ ಸರ್ಕಾರ ಉತ್ತಮ ಸೌಲಭ್ಯ ನೀಡುತ್ತದೆ. ಆದರೆ, ಕಾರ್ಮಿಕರಿಗೆ ಯಾವ ಸೌಲಭ್ಯವೂ ಇಲ್ಲದೇ ವಂಚಿಸುತ್ತಿದ್ದು, ಸರ್ಕಾರ ಯಾರ ಪರ ಇದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ಗ್ರಾಹಕ ಬೆಲೆ ಸೂಚ್ಯಾಂಕ ಹೆಚ್ಚಾಗದಿದ್ದರೆ ವೇತನ ಕೂಲಿ ಜಾಸ್ತಿ ಆಗುವುದಿಲ್ಲ. ಅಲ್ಲದೆ, ಸರ್ಕಾರ ವ್ಯವಸ್ಥಿತವಾಗಿ ಆಂಕಿ ಅಂಶಗಳನ್ನು ಸರಿಯಾಗಿ ನೀಡದೆ ಜನರಿಗೆ ಕೊಡಬೇಕಾದ ಹಣವನ್ನು ಬೇರೆ ಕಡೆಗೆ ಬಳಸಿ ತಪ್ಪು ಅಂಕಿ ಅಂಶಗಳನ್ನು ಹೇಳುತ್ತಿದೆ ಎಂದು ಅವರು ದೂರಿದರು.ಇದೇ ವೇಳೆ ಮಂಡ್ಯದ ವಿಮಲಾ ರಣದಿವೆ ತಂಡದಿಂದ ಡಾ. ರಾಜಪ್ಪ ದಳವಾಯಿ ಅವರ ರಚನೆಯ, ಕೆ.ಆರ್. ಸುಮತಿ ನಿರ್ದೇಶನದಲ್ಲಿ ನ್ಯಾಯ ಕೇಳಿದ ನಿಂಗವ್ವ ನಾಟಕ ಹಾಗೂ ಸೂರ್ಯ ನಾರಾಯಣರಾವ್ ಜೀವನ ಚರಿತ್ರೆ ಆಧಾರಿತ ಕಾಮ್ರೇಡ್ ಸೂರಿ ಎಂಬ ನಾಟಕ ಪ್ರದರ್ಶನವಾಯಿತು.ಸಿಐಟಿಯು ಜಿಲ್ಲಾಧ್ಯಕ್ಷ ಜಿ. ಜಯರಾಮ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಕೆ. ಬಾಲಾಜಿ ರಾವ್, ಎಚ್.ಎಸ್. ಸುನಂದಾ, ಪುಷ್ಪಾವತಿ, ಜಗದೀಶ್ ಸೂರ್ಯ ಮೊದಲಾದವರು ಇದ್ದರು.----ಕೋಟ್...ಸಂಸತ್ತಿಗೆ ಆಯ್ಕೆಯಾದ ಪ್ರತಿಯೊಬ್ಬ ಅಭ್ಯರ್ಥಿಯು 100 ಕೋಟಿಗೂ ಜಾಸ್ತಿ ಹಣವನ್ನು ಹೊಂದಿರುವವರೇ ಆಗಿರುತ್ತಾರೆ. ಬಡವರು ಆಯ್ಕೆ ಆಗುವುದಕ್ಕೆ ಸಾಧ್ಯವೇ ಇಲ್ಲದಂತಾಗಿದೆ. ಯಾಕೆಂದರೆ ಅವರು ಆರ್ಥಿಕತೆಯಲ್ಲಿ ಹಿಂದುಳಿದಿದ್ದು, ಆ ಮಟ್ಟಿಗೆ ಪ್ರಜಾಪ್ರಭುತ್ವ ಕುಸಿದಿರುವುದಕ್ಕೆ ನಾವೇ ಕಾರಣರಾಗಿದ್ದೇವೆ.- ಮೀನಾಕ್ಷಿಸುಂದರಂ, ರಾಜ್ಯ ಪ್ರಧಾನ ಕಾರ್ಯದರ್ಶಿ, ಸಿಐಟಿಯು