ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂತಾಮಣಿ
ಹೆಚ್ಚಿನ ಗ್ರಾಹಕರನ್ನು ಹೊಂದಿರುವ ಕೆನರಾಬ್ಯಾಂಕ್ ಗ್ರಾಹಕರಿಗೆ ಸರ್ಕಾರಿ ಸವಲತ್ತುಗಳನ್ನು ಒದಗಿಸುವುದರ ಜೊತೆಗೆ ಗ್ರಾಹಕರಿಗೆ ಅನುಕೂಲಕರವಾದಂತಹ ರೀತಿಯಲ್ಲಿ ಸಾಲ ಸೌಲಭ್ಯಗಳನ್ನು ವಿತರಿಸುತ್ತಿದೆ. ಅದರ ಸದ್ಬಳಕೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮನವಿ ಮಾಡಿದರು.ನಗರದ ಮಾಳಪ್ಪಲ್ಲಿ (ಮಾತೃಶ್ರೀ ಆಸ್ಪತ್ರೆಯ ಬಳಿ) ಯಲ್ಲಿ ಕೆನರಾ ಬ್ಯಾಂಕ್‌ನ ನೂತನ ಶಾಖೆಯ ಜಿಲ್ಲಾಧಿಕಾರಿ ಉದ್ಘಾಟನೆ ನೆರವೇರಿಸಿ ಮಾತನಾಡಿ, ಕೆನರಾ ಬ್ಯಾಂಕು ಜಿಲ್ಲೆಯ ಲೀಡ್ ಬ್ಯಾಂಕ್ ಆಗಿದ್ದು ಗ್ರಾಹಕರಿಗೆ ಉತ್ತಮ ಸೇವಾ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ಮತ್ತೊಂದು ಶಾಖೆಯನ್ನು ಪ್ರಾರಂಭಿಸಿರುವುದು ಸಂತಸ ವಿಚಾರವಾಗಿದೆಯೆಂದರು.
ಸೌಲಭ್ಯಗಳ ಮಾಹಿತಿ ನೀಡಿಬ್ಯಾಂಕಿನ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ಗ್ರಾಹಕರೊಂದಿಗೆ ಉತ್ತಮ ವ್ಯವಹಾರವನ್ನು ಹೊಂದಿದ್ದು ಅದರ ಮೂಲಕ ಗ್ರಾಹಕರಿಗೆ ಸರ್ಕಾರದ ವತಿಯಿಂದ ನೀಡಲಾಗುವ ವಿವಿಧ ರೀತಿಯ ಸೌಲಭ್ಯಗಳು ಹಾಗೂ ಬ್ಯಾಂಕು ನೀಡುವ ವಿವಿಧ ಉಳಿತಾಯ ಮತ್ತು ಅವಧಿಯ ಠೇವಣಿಗಳಿಗೆ ನೀಡುವ ಬಡ್ಡಿ ದರಗಳ ಮಾಹಿತಿಯನ್ನು ನೀಡಬೇಕು ಹಾಗೂ ಹಿರಿಯ ಗ್ರಾಹಕರಿಗೆ ವಿಶಿಷ್ಟ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕೆಂದು ಸೂಚಿಸಿದರು.
ಕೇವಲ ಬ್ಯಾಂಕಿನಿಂದ ಸಾಲ ಮಾತ್ರ ಪಡೆಯುವುದಲ್ಲದೆ ಉಳಿತಾಯ ಮಾಡುವುದರ ಮೂಲಕ ಬ್ಯಾಂಕುಗಳನ್ನು ಉಳಿಸಬೇಕಾದಂತಹ ಜವಾಬ್ದಾರಿಯು ಪ್ರತಿಯೊಬ್ಬ ಗ್ರಾಹಕರ ಮೇಲಿದ್ದು ಗ್ರಾಹಕರು ತಾವು ಪಡೆದಂತಹ ಸಾಲಗಳನ್ನು ಸಕಾಲಕ್ಕೆ ಮರುಪಾವತಿಸುವುದರ ಮೂಲಕ ಮತ್ತೊಬ್ಬರಿಗೆ ಸಾಲವನ್ನು ನೀಡಲು ಅವಕಾಶ ಕಲ್ಪಿಸಬೇಕೆಂದರು.ಆರ್ಥಿಕ ಅಭಿವೃದ್ಧಿಗೆ ನೆರವಾಗಿ
ಚಿನ್ನದ ಮೇಲಿರುವ ಸಾಲಗಳನ್ನು ನೀಡುವುದರ ಮೂಲಕ ಬ್ಯಾಂಕುಗಳು ಖಾಸಗಿ ಬ್ಯಾಂಕುಗಳಿಗಿಂತ ಭಿನ್ನವಾಗಿ ಸೌಲಭ್ಯಗಳನ್ನು ನೀಡುತ್ತಿದೆಯೆಂದರು. ಹತ್ತು ಹಲವು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರುವಲ್ಲಿ ಬ್ಯಾಂಕುಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕೆಂದರು ಹಾಗೂ ಜನಸಾಮಾನ್ಯರು ಬ್ಯಾಂಕ್‌ಗೆ ಭೇಟಿ ನೀಡಿದಾಗ ವ್ಯವಸ್ಥಾಪಕರು ಸರಿಯಾದ ಮಾಹಿತಿಯನ್ನು ನೀಡುವುದರ ಮೂಲಕ ಅವರ ಅಭಿವೃದ್ಧಿಗೆ ಶ್ರಮಿಸಬೇಕೆಂದರು.ಚಿಂತಾಮಣಿ ತಾಲ್ಲೂಕು ವಿವಿದ ವ್ಯಾಪಾರ, ವ್ಯವಹಾರಗಳಿಗೆ ಹೆಸರುವಾಸಿಯಾಗಿದ್ದು ಇಲ್ಲಿ ಬ್ಯಾಂಕುಗಳು ಅಭಿವೃದ್ಧಿಯಾಗುವುದರ ಜೊತೆಗೆ ಗ್ರಾಹಕರಿಗೂ ಅನುಕೂಲವಾಗುತ್ತದೆ. ತಾಲ್ಲೂಕು ಶರವೇಗದಲ್ಲಿ ಅಭಿವೃದ್ಧಿ ಹೊಂದುತ್ತಿದ್ದು ವಿವಿಧ ಗ್ರಾಮಗಳಿಂದ ಹಾಗೂ ಸುತ್ತಮುತ್ತಲ ಗ್ರಾಮಗಳು ನಗರಕ್ಕೆ ಸೇರ್ಪಡೆಯಾಗುತ್ತಿದ್ದು ಪ್ರತಿನಿತ್ಯ ಸಾವಿರಾರು ಮಂದಿ ನಗರಕ್ಕೆ ಭೇಟಿ ನೀಡುವುದರ ಮೂಲಕ ಅಭಿವೃದ್ಧಿಗೆ ಸಹಾಯಕವಾಗಲಿದೆಯೆಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಸುದರ್ಶನ್ ಯಾದವ್, ಕೆನರಾ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಮಹೇಶ್ ಎಂ ಪೈ, ಸಹಾಯಕ ಜನರಲ್ ಮ್ಯಾನೇಜರ್ ಎಂ.ಅಶೋಕ್ ಕುಮಾರ್, ಶಾಖಾ ವ್ಯವಸ್ಥಾಪಕ ಪಿ. ಗೋವಿಂದ್ ರಾವ್, ಕೆನರಾ ಬ್ಯಾಂಕಿನ ವ್ಯವಸ್ಥಾಪಕ ಶಂಕರ್‌ಲಾಲ್, ಕಸಬಾ ರಾಜಸ್ವನಿರೀಕ್ಷಕ ಗೋಕುಲ್, ನೂತನ ಶಾಖಾ ಸಿಬ್ಬಂದಿ, ಭಾರತ್ ಗ್ಯಾಸ್‌ನ ನರಸಿಂಹ, ವಕೀಲ ಪ್ರಸಾದ್, ಗುಪ್ತಾ ಸೇರಿದಂತೆ ಹಿರಿಯ ಗ್ರಾಹಕರು ಉಪಸ್ಥಿತರಿದ್ದರು.