ಬಳ್ಳಾರಿ: ಒತ್ತಡದ ಬದುಕಿನ ನಡುವೆಯೂ ಅರಳಿದ ಪ್ರೀತಿ, ಒಲುಮೆ ಹಾಗೂ ಸಾಮಾಜಿಕ ಕಳಕಳಿಯ ಭಾವಗಳು ಕವಯಿತ್ರಿ
ಟಿ.ಲೀಲಾವತಿ ಅವರ ಕವನಗಳಲ್ಲಿ ಒಡಮೂಡಿದ್ದು ಉದ್ಯೋಗ ಹಾಗೂ ಕೌಟುಂಬಿಕ ಜವಾಬ್ದಾರಿಗಳ ನಡುವೆಯೂ ಸಾಹಿತ್ಯದ ಮೇಲಿನ ಪ್ರೀತಿಯನ್ನು ಬೆಳೆಸಿಕೊಂಡಿರುವ ಟಿ. ಲೀಲಾವತಿ ಅವರ ಪ್ರಯತ್ನ ಶ್ಲಾಘನೀಯ ಎಂದು ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್ ಅವರು ತಿಳಿಸಿದರು.ನಗರದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ಹಾಗೂ ಸಂಡೂರಿನ ಬಸವ ಪಬ್ಲಿಕೇಷನ್ಸ್ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಕವಯಿತ್ರಿ ಟಿ. ಲೀಲಾವತಿ (ಸಾಯಿಲೀಲಾ) ಅವರ ‘ಒಲವು ಮೂಡಿದಾಗ’ ಕವನ ಸಂಕಲನದ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಿ ನೌಕರರಿಗೆ ವೃತ್ತಿಯ ಜೊತೆಗೆ ಪ್ರವೃತ್ತಿಯೂ ಮುಖ್ಯ. ಅನೇಕರು ಸರ್ಕಾರಿ ನೌಕರಿ ಸಿಕ್ಕ ಕೂಡಲೇ ಪ್ರವೃತ್ತಿಯಿಂದ ದೂರ ಉಳಿದು, ಸೃಜನಶೀಲತೆಯನ್ನು ಕಳೆದುಕೊಳ್ಳುತ್ತಾರೆ. ಆದರೆ, ಟಿ. ಲೀಲಾವತಿ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಒತ್ತಡದ ಕೆಲಸಗಳ ನಡುವೆಯೂ ಬರವಣಿಗೆ ಎಂಬ ಸೃಜನಶೀಲತೆಯನ್ನು ಉಳಿಸಿಕೊಂಡು ಹೋಗುತ್ತಿರುವುದು ನಿಜಕ್ಕೂ ಶ್ಲಾಘನೀಯ. ಕಚೇರಿಯಲ್ಲೂ ಉತ್ತಮ ಕೆಲಸಗಾರ್ತಿ, ಮಿತಭಾಷಿ ಎಂದು ಹೆಸರು ಪಡೆದಿರುವ ಲೀಲಾವತಿ ಅವರು ಸಾಹಿತ್ಯ ಕೃಷಿಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳುವಂತಾಗಲಿ. ಇನ್ನು ಹತ್ತಾರು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಲಿ ಎಂದು ಹಾರೈಸಿದರು.ಒಲವು ಮೂಡಿದಾಗ ಕವನ ಸಂಕಲನ ಕುರಿತು ಮಾತನಾಡಿದ ಕುರುಗೋಡು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ವೇಣುಗೋಪಾಲ ಎನ್.ಅವರು, ಉದ್ಯೋಗ ಮತ್ತು ಸಂಸಾರದ ನಡುವೆಯೂ ಸಾಹಿತ್ಯದೊಂದಿಗೆ ಬೆಳೆಸಿಕೊಂಡಿರುವ ಒಡನಾಟದ ಪ್ರತಿಫಲವಾಗಿ ಟಿ. ಲೀಲಾವತಿ ಅವರ ಕೃತಿ ಓದುಗರ ಕೃತಿಯಾಗಿ ರೂಪುಗೊಂಡಿದೆ. ಇದರಲ್ಲಿ ಒಟ್ಟು 35 ಕವನಗಳಿದ್ದು ಒಲುಮೆ, ಪುಸ್ತಕ ಪ್ರೀತಿ, ದೈವಸ್ಮರಣೆ, ಹಸಿವು, ವಿಧಿ, ಸ್ನೇಹ, ವ್ಯಕ್ತಿಚಿತ್ರಣ, ನಿರಾಸೆ ಹಾಗೂ ಛಲ ಸೇರಿದಂತೆ ವಿವಿಧ ಭಾವನೆಗಳು ಅಭಿವ್ಯಕ್ತಿಗೊಂಡಿವೆ. ಒಲುಮೆಗೆ ಸಂಬಂಧಿಸಿದ ಕವನಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ‘ಒಲವು ಮೂಡಿದಾಗ’ ಎಂಬ ಶೀರ್ಷಿಕೆ ಅರ್ಥಪೂರ್ಣವಾಗಿದೆ. ಬದುಕಿನ ಸಂಕಷ್ಟಗಳು, ಹಸಿದವರು ತೊಳಲಾಟಗಳು. ಪರಿಸರ ನೀಡುವ ಅಗಾಧತೆ ಸೇರಿದಂತೆ ನಮ್ಮ ಸುತ್ತಮುತ್ತಲಿನಲ್ಲಿ ಕಂಡು ಬರುವ ಅನೇಕ ಸಂಗತಿಗಳಿಗೆ ಕಾವ್ಯದ ರೂಪ ನೀಡಿರುವ ಟಿ.ಲೀಲಾವತಿ ಅವರು ಮೊದಲ ಪ್ರಯತ್ನದಲ್ಲಿಯೇ ಕವಯಿತ್ರಿಯಾಗಿ ಗಮನ ಸೆಳೆದಿದ್ದಾರೆ. ಎಂದರಲ್ಲದೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಬುದ್ಧ ಕೃತಿಗಳು ಹೊರಬರಲಿ ಎಂದು ಆಶಿಸಿದರು.
ಕುರುಗೋಡು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ಶಾಂತಲಾ ಮಾತನಾಡಿ, ಲೇಖಕಿ ಟಿ. ನೀಲಾವತಿ ಅವರ ಸಂಕಲನದಲ್ಲಿರುವ ಬಹುತೇಕ ಕವನಗಳು ಸುತ್ತಮುತ್ತಲಿನ ಬದುಕು ಹಾಗೂ ಘಟನೆಗಳಿಗೆ ಸಂಬಂಧಿಸಿವೆ. ಕೌಟುಂಬಿಕ ಸಾಮರಸ್ಯ, ಒಲವು ಮತ್ತು ಸಾಮಾಜಿಕ ಕಳಕಳಿ ಕವನಗಳ ಜೀವಾಳವಾಗಿವೆ ಎಂದರು ತಿಳಿಸಿದರು.
ಲೇಖಕಿ ಟಿ. ಲೀಲಾವತಿ ಅವರು ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ, ಜಿಲ್ಲಾ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ಅಧಿಕಾರಿ ಶಾಶು, ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ರಮೇಶ ಬುಜ್ಜಿ, ಮಹಾನಗರ ಪಾಲಿಕೆ ಸದಸ್ಯ ಹನುಮಂತಪ್ಪ ಹಾಗೂ ಮಠಂ ತಿಪ್ಪೇಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.ಬಸವ ಪ್ರಕಾಶನದ ಡಾ. ತಿಪ್ಪೇರುದ್ರ ಸಂಡೂರು, ನಯನಾ ಹಾಗೂ ರೇಣುಕಾ ಎಸ್. ಕಾರ್ಯಕ್ರಮ ನಿರ್ವಹಿಸಿದರು. ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ, ಸಾಹಿತ್ಯಾಸಕ್ತರು ಹಾಗೂ ಲೇಖಕಿ ಟಿ. ಲೀಲಾವತಿ ಅವರ ಕುಟುಂಬ ಸದಸ್ಯರು ಸಮಾರಂಭದಲ್ಲಿ ಹಾಜರಿದ್ದರು.