ಶಿಕ್ಷಕರು ಅಕ್ಷರ ಕಲಿಸುವ ಜತೆಯಲ್ಲಿ ಬದುಕುವ ದಾರಿಯನ್ನು ತೋರಿಸುತ್ತಾರೆ ಎಂದು ಹನುಮಾಪುರ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅಶೋಕ ಭಗವಂತಗೌಡ್ರ ಹೇಳಿದರು.

ರಾಣಿಬೆನ್ನೂರು: ಶಿಕ್ಷಕರು ಅಕ್ಷರ ಕಲಿಸುವ ಜತೆಯಲ್ಲಿ ಬದುಕುವ ದಾರಿಯನ್ನು ತೋರಿಸುತ್ತಾರೆ ಎಂದು ಹನುಮಾಪುರ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಅಶೋಕ ಭಗವಂತಗೌಡ್ರ ಹೇಳಿದರು.

ತಾಲೂಕಿನ ವೈಟಿ ಹೊನ್ನತ್ತಿ (ಯಲ್ಲಾಪುರ) ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೇವಾ ನಿವೃತ್ತಿ ಹೊಂದಿದ ಕೆ.ಆರ್.ಟೊಣ್ಣೆಪ್ಪನವರ ಅವರಿಗೆ ಹಳೆ ವಿದ್ಯಾರ್ಥಿಗಳು, ಗ್ರಾಮಸ್ಥರು, ಶಿಕ್ಷಕ ವೃಂದದ ವತಿಯಿಂದ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಟೊಣ್ಣೆಪ್ಪನವರ ಗುರುಗಳು ಮಕ್ಕಳಿಗೆ ಅಮ್ಮನಂತೆ ಪ್ರೀತಿ ತೋರಿ ಅಪ್ಪನಂತೆ ಶಿಸ್ತು ಕಲಿಸಿದ ಗುರುಗಳಾಗಿದ್ದರು. ಶಿಕ್ಷಕರ ವೃತ್ತಿ ಕೇವಲ ಕೆಲಸವಲ್ಲ, ಅದೊಂದು ಪವಿತ್ರ ಸೇವೆಯೆಂದು ಭಾವಿಸಿ ತಮ್ಮ ಸೇವಾ ಅವಧಿಯಲ್ಲಿ ಅವರು ಕಲ್ಲು ಬಂಡೆಯಂತಿದ್ದ ನೂರಾರು ಮಕ್ಕಳನ್ನು ಶಿಲ್ಪಿಯಂತೆ ಕೆತ್ತಿ ಸುಂದರ ಮೂರ್ತಿಯನ್ನಾಗಿ ಮಾಡಿದ್ದಾರೆ. ಇದಕ್ಕೆ ಗ್ರಾಮದಲ್ಲಿ ಇಂದು ಹಬ್ಬದ ರೀತಿಯ ವಾತಾವರಣ ನಿರ್ಮಾಣವಾಗಿರುವುದು ಸಾಕ್ಷಿಯಾಗಿದೆ ಎಂದರು.

ಡಯಟ್ ನಿವೃತ್ತ ಪ್ರಾಚಾರ್ಯ ಜಿ.ಎಂ. ಮುಂದಿನಮನಿ ಮಾತನಾಡಿ, ಕರ್ತವ್ಯದ ಒತ್ತಡದಿಂದ ಮುಕ್ತಿ ಪಡೆದು ವಿಶ್ರಾಂತಿ ಪಡೆಯುವ ಸಮಯವಿದು. ನಿಮ್ಮ ಮುಂದಿನ ದಿನಗಳು ಸುಖ, ಶಾಂತಿ ಮತ್ತು ನೆಮ್ಮದಿಯಿಂದ ಕೂಡಿರಲಿ ಎಂದು ಹಾರೈಸಿದರು.

ಕೆ.ಬಿ. ಸಾವಂತಲವರ ಮಾತನಾಡಿ, ಇಲ್ಲಿನ ವಿದ್ಯಾರ್ಥಿಗಳಿಗೆ ನೀವು ನೀಡಿದ ಜ್ಞಾನದ ಬೆಳಕು ಸದಾ ಅವರನ್ನು ಮುನ್ನಡೆಸುತ್ತದೆ. ಇವರ ಕೈಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದರು.

ಸನ್ಮಾನಿತ ಕೆ.ಆರ್. ಟೊಣ್ಣೆಪ್ಪನವರ ಮಾತನಾಡಿ, ತಮ್ಮ ಸೇವಾ ಅವಧಿಯಲ್ಲಿ ಗ್ರಾಮಸ್ಥರ ಸಹಕಾರ ಸದಾ ಸ್ಮರಣೀಯ. ನಾನು ಇಲ್ಲಿಗೆ ಸೇವೆ ಸಲ್ಲಿಸಲು ಬಂದ ನಂತರ ಶಾಲೆಯ ಪ್ರಗತಿಗೆ ಸಾಕಷ್ಟು ಶ್ರಮಿಸಿರುವೆ. ಭವಿಷ್ಯದಲ್ಲಿ ಸುಂದರವಾದ ಮಾತು, ನಡೆ, ನುಡಿ ಅಳವಡಿಸಿಕೊಂಡು ಜೀವನದಲ್ಲಿ ಉತ್ತಮ ವ್ಯಕ್ತಿಗಳಾಗಿ ಬಾಳಬೇಕು. ಗ್ರಾಮದ ಜನರು ಎಲ್ಲರೂ ಒಂದೇ ಎಂಬ ಭಾವನೆಯಿಂದ ಬಾಳುತ್ತಿರುವುದು ಹೆಮ್ಮೆಯ ಸಂಗತಿ. ಮುಂದಿನ ದಿನಗಳಲ್ಲಿ ಗ್ರಾಮ ಮತ್ತಷ್ಟು ಅಭಿವೃದ್ದಿ ಸಾಗಿಸುವಂತಾಗಲಿ ಎಂದು ಹಾರೈಸಿದರು.

ಶಾಲೆಯ ಪ್ರಧಾನ ಗುರುಗಳು, ಶಿಕ್ಷಕ ವೃಂದ, ಸಿಬ್ಬಂದಿ ವರ್ಗ, ಹಳೆ ವಿದ್ಯಾರ್ಥಿಗಳು, ಗ್ರಾಮಸ್ಥರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಇದಕ್ಕೂ ಪೂರ್ವದಲ್ಲಿ ಯಲ್ಲಾಪುರ ಗ್ರಾಮದಲ್ಲಿ ನಿವೃತ್ತ ಶಿಕ್ಷಕ ಕೆ.ಆರ್. ಟೊಣ್ಣೆಪ್ಪನವರ ಅವರನ್ನು ಪತ್ನಿ ಸಮೇತ ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಲಾಯಿತು.