ತಾಲೂಕಿನಲ್ಲಿ ಅಧಿಕಾರಿಗಳ ನೆರವಿನಿಂದಲೇ ಅಕ್ರಮವಾಗಿ ಮರಳು ಸಾಗಣೆ, ಬಂಡೆ ಗಣಿಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದ್ದು, ಅಕ್ರಮದಲ್ಲಿ ತಹಸೀಲ್ದಾರ್ ಅವರು ಶಾಮೀಲಾಗಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಗಂಭೀರ ಆರೋಪ ಮಾಡಿದರು.
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ತಾಲೂಕಿನಲ್ಲಿ ಅಧಿಕಾರಿಗಳ ನೆರವಿನಿಂದಲೇ ಅಕ್ರಮವಾಗಿ ಮರಳು ಸಾಗಣೆ, ಬಂಡೆ ಗಣಿಗಾರಿಕೆ ಎಗ್ಗಿಲ್ಲದೇ ನಡೆಯುತ್ತಿದ್ದು, ಅಕ್ರಮದಲ್ಲಿ ತಹಸೀಲ್ದಾರ್ ಅವರು ಶಾಮೀಲಾಗಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಗಂಭೀರ ಆರೋಪ ಮಾಡಿದರು.ದಬ್ಬಣಗದ್ದೆ ಮರಳು ಕ್ವಾರಿಯಿಂದ ಮೇ ಆರನೇ ತಾರೀಕಿನಂದು ನಸುಕಿನಿಂದ ಅಧಿಕಾರಿಗಳ ನೆರವಿನಿಂದ ಸುಮಾರು 200 ಲಾರಿ ಲೋಡು ಮರಳನ್ನು ಅಕ್ರಮವಾಗಿ ಸಾಗಿಸಲಾಗಿದೆ. ಇದರಲ್ಲಿ ತಹಸೀಲ್ದಾರ್, ಭೂ ಮತ್ತು ಗಣಿ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದು, ಅಕ್ರಮವನ್ನು ತಡೆಯುವಲ್ಲಿ ನನ್ನದು ಒಂಟಿ ಧ್ವನಿಯಾಗಿದೆ ಎಂದು ಬಿ.ಎಸ್.ಯಡಿಯೂರಪ್ಪ ಅಭಿಮಾನೋತ್ಸವಕ್ಕೆ ಸಂಬಂಧಿಸಿದ ಶುಕ್ರವಾರ ಪಟ್ಟಣದ ಪಕ್ಷದ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮರಳು ಸಾಗಣೆದಾರರೊಂದಿಗೆ ಅಧಿಕಾರಿಗಳು ಸೇರಿ ಲೂಟಿ ಹೊಡೆಯುತ್ತಿದ್ದಾರೆ. ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ನಾನು ಮರಳು ಕ್ವಾರಿಗೆ ಭೇಟಿ ನೀಡಿದ ವೇಳೆ ಸುಮಾರು 50ಕ್ಕೂ ಹೆಚ್ಚು ಲಾರಿಗಳು ಪಲಾಯನ ಮಾಡಿದವು. ಮರಳು ಸಾಗಣೆಯಲ್ಲಿ ತೊಡಗಿದ್ದ 5 ಜೆಸಿಬಿಗಳ ಮೇಲೆ ಮಾಳೂರು ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದರು.ಮುಂಡಳ್ಳಿ ಕ್ವಾರಿಯಲ್ಲೂ ಇದೇ ರೀತಿ ಅಕ್ರಮ ನಡೆದಿದೆ. ಕುರುವಳ್ಳಿ ಬಂಡೆಯಲ್ಲೂ ಅಕ್ರಮವಾಗಿ ಗಣಿಗಾರಿಕೆ ನಡೆದಿದ್ದು, ಇದರಲ್ಲೂ ತಹಸೀಲ್ದಾರ್ ಮತ್ತು ಸ್ಥಳೀಯ ಪೊಲೀಸರು ಶಾಮೀಲಾಗಿದ್ದಾರೆ. ತಾಲೂಕಿನಲ್ಲಿ ನಡೆದಿರುವ ಅಕ್ರಮ ಮರಳು ಸಾಗಣೆಯನ್ನು ನಿಯಂತ್ರಿಸಬೇಕಿದ್ದ ಇಲ್ಲಿನ ತಹಸೀಲ್ದಾರ್‌ರವರೇ ಇದಕ್ಕೆ ಬೆಂಬಲವಾಗಿದ್ದು, ಅವರ ವಿರುದ್ದ ದೂರು ದಾಖಲಿಸಬೇಕಿದೆ. ಬಗರ್‌ಹುಕುಂ ಸಮಿತಿ ಸಭೆಗಳಿಗೂ ಸಹಕರಿಸುತ್ತಿಲ್ಲ ಎಂದು ಆರೋಪಿಸಿದರು.
ದಬ್ಬಣಗದ್ದೆ ಮರಳು ಕ್ವಾರಿಯಿಂದ ಕಳೆದ ವರ್ಷ ಸಾಗಿಸಬೇಕಿದ್ದ 28 ಸಾವಿರ ಟನ್ ಬದಲಿಗೆ ಕೇವಲ 57 ಟನ್ ಮಾತ್ರ ಬಿಲ್ ಹಾಕಲಾಗಿದ್ದು, ಬಿಲ್ ಹಾಕದೇ ಮರಳನ್ನು ಕದ್ದು ಸಾಗಿಸಿದ್ದು, ಸರ್ಕಾರಕ್ಕೆ ಕೋಟ್ಯಾಂತರ ರು. ರಾಯಲ್ಟಿ ಹಣವನ್ನು ವಂಚಿಸಲಾಗಿದೆ. ಈ ಬಗ್ಗೆ ಗುತ್ತಿಗೆದಾರರಿಗೆ ಹಾಕಲಾಗಿದ್ದ 1.08 ಕೋಟಿ ರು. ದಂಡದ ಹಣವನ್ನು ಈವರೆಗೂ ಪಾವತಿಸಲಾಗಿಲ್ಲ ಎಂದು ದೂರಿದರು.ತಾಲೂಕಿನ ಸಮಗ್ರ ಅಭಿವೃದ್ಧಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕೊಡುಗೆ ಅಪಾರವಾಗಿದ್ದು, ಅವರ ಜೀವನ ಮುಂದಿನ ತಲೆಮಾರಿಗೆ ಪಠ್ಯದಂತಿದೆ. ಜನಪರ ಹೋರಾಟ ಸೈದ್ದಾಂತಿಕ ನೆಲೆಯಲ್ಲಿ ಬಂದಿರುವ ಬಿಎಸ್‍ವೈ ಅಧಿಕಾರವಧಿಯಲ್ಲಿ ಈ ಕ್ಷೇತ್ರಕ್ಕೆ ನೂರಾರು ಕೋಟಿ ಅನುದಾನ ಹರಿದು ಬಂದಿದೆ. ಚಿತ್ರದುರ್ಗದಲ್ಲಿ ಶನಿವಾರ ನಡೆಯಲಿರುವ ಬಿಎಸ್‍ವೈ ಅಭಿಮಾನೋತ್ಸವಕ್ಕೆ ತಾಲೂಕಿನಿಂದ 5 ಸಾವಿರ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದರು.
ಮಂಡಲ ಬಿಜೆಪಿ ಅಧ್ಯಕ್ಷ ಹೆದ್ದೂರು ನವೀನ್, ಬೇಗುವಳ್ಳಿ ಸತೀಶ್, ಚಂದವಳ್ಳಿ ಸೋಮಶೇಖರ್, ಸಂದೇಶ್ ಜವಳಿ, ಸಂತೋಷ್ ದೇವಾಡಿಗ, ಸೊಪ್ಪುಗುಡ್ಡೆ ರಾಘವೇಂದ್ರ ಇದ್ದರು.