ಕನ್ನಡ ನಾಡು, ನುಡಿ, ಸಂಸ್ಕೃತಿ, ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡುಗೆ ಅಪಾರ. ಜಿಲ್ಲೆ, ತಾಲೂಕು, ಹೋಬಳಿ ಘಟಕಗಳಲ್ಲಿಯೂ ಸಾಹಿತ್ಯ ಪರಿಷತ್ ನಿರಂತರವಾಗಿ ಕನ್ನಡಪರ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ.

ಕನ್ನಡಪ್ರಭ ವಾರ್ತೆ ಸೊರಬ

ಕನ್ನಡ ನಾಡು, ನುಡಿ, ಸಂಸ್ಕೃತಿ, ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೊಡುಗೆ ಅಪಾರ. ಜಿಲ್ಲೆ, ತಾಲೂಕು, ಹೋಬಳಿ ಘಟಕಗಳಲ್ಲಿಯೂ ಸಾಹಿತ್ಯ ಪರಿಷತ್ ನಿರಂತರವಾಗಿ ಕನ್ನಡಪರ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ಆದರೆ ಸಾರ್ವಜನಿಕರು ನಮ್ಮ ನೆಲದ ಭಾಷೆಯಾದ ಕನ್ನಡದ ಬಗ್ಗೆ, ಕನ್ನಡಪರ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರ ಸಂಖ್ಯೆ ನೋಡಿದರೆ ಬೇಸರವಾಗುತ್ತಿದೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವೈದ್ಯ ಡಾ. ಎಂ.ಕೆ. ಭಟ್ ಹೇಳಿದರು.

ಪಟ್ಟಣದ ಕನ್ನಡ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್‌ನ ೧೧೨ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್‌ನ ಹುಟ್ಟು, ಬೆಳವಣಿಗೆ ಕುರಿತು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕಿ ಎ.ವಿ. ಪವಿತ್ರಾ ಉಪನ್ಯಾಸ ನೀಡಿ, ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಏಕೀಕರಣದ ಹೋರಾಟಗಾರರು, ಸಾಹಿತಿಗಳು, ವಿದ್ಯಾಂಸರು, ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್, ಎಚ್.ವಿ. ನಂಜುಂಡಯ್ಯ, ಗಂಗಾಧರರಾವ್ ದೇಶಪಾಂಡೆ, ಆಲೂರು ವೆಂಕಟರಾಯರು, ಸರ್ ಎಂ. ವಿಶ್ವೇಶ್ವರಯ್ಯ, ಕುವೆಂಪು ಸೇರಿದಂತೆ ಅಧ್ಯಾಪಕರು, ಸಾರ್ವಜನಿಕ ಗಣ್ಯರು ಹೀಗೆ ಹಲವಾರು ಗಣ್ಯ ವ್ಯಕ್ತಿಗಳ ನಾಡು, ನುಡಿ ಸೇವಕರ ಗುಂಪಿನ ಶ್ರಮ ತ್ಯಾಗಗಳ ಫಲವಾಗಿ ರೂಪಗೊಂಡಿದ್ದೇ ಕನ್ನಡ ಸಾಹಿತ್ಯ ಪರಿಷತ್ತು ಎಂದರು.

ಸೊರಬ ತಾಲೂಕಿನಲ್ಲಿ ಏಳುನೂರು ಜನ ಆಜೀವ ಸದಸ್ಯರಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಜೀವ ಸದಸ್ಯರಾಗಬೇಕು. ಆ ಮೂಲಕ ಪರಿಷತ್ತನ್ನು ಉಳಿಸಿ ಬೆಳೆಸಲು ಮುಂದಾಗಬೇಕು. ಇದರಿಂದ ನಾಡಿನ ಭಾಷೆ, ಸಂಸ್ಕೃತಿ ಇತಿಹಾಸ, ಪರಂಪರೆ ಉಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಸೊರಬ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಷಣ್ಮುಖಾಚಾರ್ ಮತ್ತು ಅವರ ತಂಡವು ಅತ್ಯುತ್ತಮ ಕೆಲಸ ಮಾಡುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿಕಟಪೂರ್ವ ಅಧ್ಯಕ್ಷರಾದ ಶಿವಾನಂದ ಪಾಣಿ, ಮಾಜಿ ಅಧ್ಯಕ್ಷ ಮಧುರಾಯ್ ಜಿ. ಶೇಟ್ ಮಾತನಾಡಿದರು.

ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಷಣ್ಮುಖಾಚಾರ್‌ ಮಾತನಾಡಿ, ಕನ್ನಡ ಕಟ್ಟುವ ಕೆಲಸ ಅಷ್ಟು ಸುಲಭವಲ್ಲ. ಸಾರ್ವಜನಿಕರನ್ನು ಒಳಗೊಂಡ ಅನೇಕ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಕಣಹಬ್ಬ, ಆಲೆಮನೆ ಹಬ್ಬ, ಸಾಹಿತ್ಯ ಸಮ್ಮೇಳನ, ತಾಲೂಕು ಮತ್ತು ಜಿಲ್ಲಾ ಮಟ್ಟದ ಕಥೆ, ಕವಿಗೋಷ್ಠಿಗಳು, ಮನೆಯಂಗಳದಲ್ಲಿ ಸಾಹಿತ್ಯ ಸಂಭ್ರಮ, ಬೃಹತ್ ಆಹಾರ ಮೇಳಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಸಾರ್ವಜನಿಕರನ್ನು ಒಳಗೊಂಡು ಯಶಸ್ವಿಯಾಗಿ ನಡೆಸುತ್ತಾ ಬಂದಿದ್ದೇವೆ. ಆದರೆ ಸಾರ್ವಜನಿಕರು ನಿರೀಕ್ಷಿತ ಮಟ್ಟದಲ್ಲಿ ಕನ್ನಡಪರ ಚಟುವಟಿಕೆಗಳಲ್ಲಿ ಭಾಗವಹಿಸದಿರುವುದು ಆತಂಕದ ಸಂಗತಿ ಎಂದರು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಶಿವಾನಂದ ಎಸ್. ಬಿಳಗಿ, ಎಸ್.ಆರ್. ಕುಮಾರಸ್ವಾಮಿ, ತಾಲೂಕು ಸುಗಮ ಸಂಗೀತ ಪರಿಷತ್ ಅಧ್ಯಕ್ಷ ಗುರುಮೂರ್ತಿ, ನಿವೃತ್ತ ನೌಕರ ಸಂಘದ ಅಧ್ಯಕ್ಷ ಕಲ್ಲಪ್ಪ ಚಿತ್ರಟ್ಟೆಹಳ್ಳಿ, ಪರಿಷತ್ ಹಿರಿಯ ಸದಸ್ಯರು, ಶಿಕ್ಷಕಿ ಕೆ.ಇ. ಸುನಂದ, ಸಮಾಜ ಸೇವಕ ರಾಜು ಹಿರಿಯಾವಲಿ ಮೊದಲಾದವರು ಹಾಜರಿದ್ದರು.