ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಆಡಳಿತದಲ್ಲಿ ಕನ್ನಡ ಭಾಷೆಯನ್ನು ಶೇಕಡ ನೂರಕ್ಕೆ ನೂರರಷ್ಟು ಬಳಸುವ ಮೂಲಕ ಕನ್ನಡ ಅನುಷ್ಠಾನಕ್ಕೆ ಒತ್ತು ನೀಡಿ ಕನ್ನಡ ಭಾಷೆ ಬಳಸಿ ಉಳಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಅವರು ಅಧಿಕಾರಿಗಳಿಗೆ ತಿಳಿಸಿದರು.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಸರ್ಕಾರ ಕಾಲಕಾಲಕ್ಕೆ ಅನೇಕ ಆದೇಶಗಳನ್ನು ಪ್ರಕಟಿಸಿದೆ. ಆದರೆ ಆಡಳಿತದಲ್ಲಿ ಶೇಕಡ ನೂರರಷ್ಟು ಅನುಷ್ಠಾನಕ್ಕೆ ಸಾಧ್ಯವಾಗಿಲ್ಲ, ಇದಕ್ಕೆ ಅನೇಕ ಕಾರಣಗಳಿವೆ ಎಂದು ಅವರು ಅಧಿಕಾರಿಗಳು ಸೃಜನಶೀಲತೆಯಿಂದ ಸಮರ್ಪಕವಾಗಿ ಅನುಷ್ಠಾನ ಮಾಡಲು ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು ಎಂದು ತಿಳಿಸಿದರು. ಕನ್ನಡ ಪರವಾದ ಕೆಲಸ ಮಾಡಲು ಬದ್ಧರಾಗಿ, ಭಾಷಾಂಧತೆ ಹುಟ್ಟುಹಾಕಬಾರದು ಭಾಷೆ ಪ್ರೇಮ ಇರಬೇಕು ಎಂದು ತಿಳಿಸಿದರು.೨೦೧೧ ರ ಜನಗಣತಿಯ ಪ್ರಕಾರ ೧೯,೫೬೯ ಮಾತೃಭಾಷೆಗಳಿವೆ ದೇಶದ ಶಕ್ತಿ ಬಹುಭಾಷಿಕತೆಯಾಗಿದೆ. ಕನ್ನಡ ಭಾಷೆ ಸೃಜನಶೀಲತೆ ಕಳೆದುಕೊಂಡು ಬರಡು ಭೂಮಿ ಆಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಭಾಷೆಯನ್ನು ಬಳಸುವ ಉಳಿಸುವ ಹಕ್ಕು ಹಾಗೂ ಕರ್ತವ್ಯ ನಿಮ್ಮದಾಗಿದೆ ಎಂದರು. ಜಿಲ್ಲೆಯಲ್ಲಿ ಕನ್ನಡ ಭಾಷೆಯನ್ನು ಬಳಸುವ ಮೂಲಕ ಉಳಿಸಿ ರಾಜ್ಯದಲ್ಲಿ ಮಾದರಿ ಆಗಬೇಕು ಎಂದು ಹೇಳಿದರು. ಪ್ರಾಧಿಕಾರದ ಮೂಲ ಆಶಯ ಕನ್ನಡ ಭಾಷೆಯನ್ನು ಅಳಿಸಿ ಹಾಕದಂತೆ ಬೆಳೆಸಬೇಕು ಎಂಬುದಾಗಿ ಎಂದರು.ರಾಜ್ಯದಲ್ಲಿ ಶತಮಾನ ಕಂಡ 3300 ಶಾಲೆಗಳಿವೆ. ಒಟ್ಟು 4900 ಶಾಲೆಗಳಲ್ಲಿ ಕೆಲ ಶಾಲೆಗಳಿಗೆ ಹಕ್ಕು ಪತ್ರವಿಲ್ಲ, ಹಿಂದೆ ಶಾಲೆಗಳಿಗೆ ಗ್ರಾಮಸ್ಥರು ಜಾಗವನ್ನು ದಾನವಾಗಿ ನೀಡಿದ್ದಾರೆ. ಅವುಗಳ ಖಾತೆಯಾಗದೆ ಈಗ ತಕಾರಾರು ಆಗುವ ಸಾಧ್ಯತೆಗಳಿವೆ ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಅಂತಹ ಶಾಲೆಗಳ ಬಗ್ಗೆ ನಿಗಾವಹಿಸಲು ತಿಳಿಸಿದರಲ್ಲದೆ, ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಪಹಣಿ ಪತ್ರವನ್ನು ಫಲಕದ ರೂಪದಲ್ಲಿ ಹಾಕಲು ತಿಳಿಸಿದರು. ಬ್ಯಾಂಕ್ ಗಳಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಸ್ಥಳೀಯ ಭಾಷೆ ಬಳಸಿ ವ್ಯವಹಾರ ಮಾಡಲು ನೆರವಾಗಲು ಬ್ಯಾಂಕ್‌ನಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳೀಯ ಭಾಷೆಯಾದ ಕನ್ನಡ ವನ್ನು ಕಡ್ಡಾಯವಾಗಿ ಬಳಸುವಂತೆ ಕ್ರಮವಹಿಸಲು ಸೂಚಿಸಿದರು.
ಜಿಲ್ಲಾಧಿಕಾರಿ ಸತ್ಯಭಾಮ ಅವರು ಮಾತನಾಡಿ ಬ್ಯಾಂಕ್ ಹಾಗೂ ಕೇಂದ್ರೀಯ ವಿದ್ಯಾಲಯ ಹೊರತು ಪಡಿಸಿ ಜಿಲ್ಲೆಯಲ್ಲಿ ಎಲ್ಲಾ ಕಡೆ ಶೇ.99ರಷ್ಟು ಕನ್ನಡ ಭಾಷೆ ಅನುಷ್ಠಾನ ಮಾಡಲಾಗಿದೆ ಎಂದು ತಿಳಿಸಿದರು. ಇ-ಆಫೀಸ್‌ನಲ್ಲಿಯೂ ಕೂಡ ಕನ್ನಡ ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಸರ್ಕಾರಿ ಶಾಲೆಗಳಿಗೆ ದಾನವಾಗಿ ನೀಡಿರುವಂತಹ ಜಾಗಗಳ ಖಾತೆಗೆ ಈಗಾಗಲೇ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.ಅಧ್ಯಕ್ಷರು ನೀಡಿರುವ ಸೂಚನೆಗಳನ್ನು ಪಾಲನೆ ಮಾಡಲಾಗುವುದು ಎಂದು ಹೇಳಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಟಿ.ಗುರುರಾಜ್, ಕಾರ್ಯದರ್ಶಿ ಸಂತೋಷ್ ಹಾನಗಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ, ಆಪ್ತ ಕಾರ್ಯದರ್ಶಿ ಫಣಿಕುಮಾರ್, ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.