ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ಸಂಸ್ಥೆಯ (ಕೆಎಸ್‌ಡಿಎಲ್) ಉತ್ಪನ್ನಗಳ ಮಾರುಕಟ್ಟೆ ಬಲವರ್ಧನೆಗಾಗಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ಎರಡು ವರ್ಷಗಳ ಅವಧಿಯ ಪ್ರಚಾರ ರಾಯಭಾರಿಯನ್ನಾಗಿ ನೇಮಿಸಲಾಗಿದ್ದು, ಮಂಗಳವಾರದಿಂದ ಅವರ ಕಾರ್ಯ ಆರಂಭವಾಗಲಿದೆ.
ಬೆಂಗಳೂರು : ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ಸಂಸ್ಥೆಯ (ಕೆಎಸ್‌ಡಿಎಲ್) ಉತ್ಪನ್ನಗಳ ಮಾರುಕಟ್ಟೆ ಬಲವರ್ಧನೆಗಾಗಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ಎರಡು ವರ್ಷಗಳ ಅವಧಿಯ ಪ್ರಚಾರ ರಾಯಭಾರಿಯನ್ನಾಗಿ ನೇಮಿಸಲಾಗಿದ್ದು, ಮಂಗಳವಾರದಿಂದ ಅವರ ಕಾರ್ಯ ಆರಂಭವಾಗಲಿದೆ.
ನವನವೀನ ರೂಪದೊಂದಿಗೆ ಬಿಡುಗಡೆ
ಅದರ ಜತೆಗೆ ಮೈಸೂರು ಸ್ಯಾಂಡಲ್ ಸೋಪ್ ಅನ್ನು ನವನವೀನ ರೂಪದೊಂದಿಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಮಾಧ್ಯಮಗಳಿಗೆ ಮಾಹಿತಿ
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, ಕೆಎಸ್‌ಡಿಎಲ್ ವಾರ್ಷಿಕ ವಹಿವಾಟನ್ನು 2030ರ ವೇಳೆಗೆ 5 ಸಾವಿರ ಕೋಟಿ ರು.ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಕೆಎಸ್‌ಡಿಎಲ್ ಉತ್ಪನ್ನಗಳ ಕುರಿತು ವ್ಯಾಪಕ ಪ್ರಚಾರ ಆಂದೋಲನ ನಡೆಸಲಾಗುತ್ತಿದೆ. ಅದರ ಭಾಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ 30 ಲಕ್ಷಕ್ಕೂ ಹೆಚ್ಚಿನ ಫಾಲೋವರ್ಸ್‌ಗಳನ್ನು ಹೊಂದಿರುವ ಬಹುಭಾಷಾ ನಟಿ ತಮನ್ನಾ ಅವರನ್ನು ಮುಂದಿನ ಎರಡು ವರ್ಷಕ್ಕೆ ಪ್ರಚಾರ ರಾಯಭಾರಿಯನ್ನಾಗಿ ನೇಮಿಸಲಾಗಿದೆ. ಆ ಮೂಲಕ ಉತ್ತರ ಭಾರತದಲ್ಲಿಯೂ ಪ್ರತಿಷ್ಠಿತ ಮೈಸೂರು ಸ್ಯಾಂಡಲ್ ಸೋಪ್ ಸೇರಿದಂತೆ ಕೆಎಸ್‌ಡಿಎಲ್‌ನ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಸೃಷ್ಟಿಸಲಾಗುವುದು ಎಂದು ವಿವರಿಸಿದ್ದಾರೆ.
ಕೆಎಸ್‌ಡಿಎಲ್ ಅಧ್ಯಕ್ಷ ಅಪ್ಪಾಜಿ ಸಿ.ಎಸ್.ನಾಡಗೌಡ ಅವರು ಮಾತನಾಡಿ, ನಮ್ಮ ಉತ್ಪನ್ನಗಳು ಸದ್ಯ ದಕ್ಷಿಣ ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿವೆ. ದೇಶದ ಎಲ್ಲೆಡೆ ಮಾರುಕಟ್ಟೆ ವಿಸ್ತರಣೆಗೆ ಒತ್ತು ನೀಡಲಾಗಿದೆ. ಜತೆಗೆ, ಯೂರೋಪ್, ಮಧ್ಯ ಪ್ರಾಚ್ಯ ದೇಶಗಳ ಮಾರುಕಟ್ಟೆಯಲ್ಲೂ ಕೆಎಸ್‌ಡಿಎಲ್ ಉತ್ಪನ್ನ ತಲುಪಿಸುವ ಉದ್ದೇಶ ಹೊಂದಲಾಗಿದೆ. 2025-26ನೇ ಸಾಲಿನಲ್ಲಿ ಸಂಸ್ಥೆಯ ವಹಿವಾಟು 2 ಸಾವಿರ ಕೋಟಿ ರು. ತಲುಪುವ ನಿರೀಕ್ಷೆಯಿದೆ ಎಂದು ಹೇಳಿದರು.