ಸಾರಾಂಶ
ಪಟ್ಟಣದ ದೇವಿಕಾ ಸುಬ್ಬರಾವ ಫೌಂಡೇಶನ್ ವತಿಯಿಂದ ಮತಕ್ಷೇತ್ರದ 70 ಸಾವಿರ ಕುಟುಂಬದ ಸದಸ್ಯರಿಗೆ ಮೈಸೂರು ಸ್ಯಾಂಡಲ್ ಸೋಪ್ ಅನ್ನು ಫೌಂಡೇಷನ್ ಮುಖ್ಯಸ್ಥೆ ಪಲ್ಲವಿ ನಾಡಗೌಡ ಅವರು ಸಾಬೂನು ವಿತರಿಸುವ ಮೂಲಕ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಪಟ್ಟಣದ ದೇವಿಕಾ ಸುಬ್ಬರಾವ ಫೌಂಡೇಶನ್ ವತಿಯಿಂದ ಮತಕ್ಷೇತ್ರದ 70 ಸಾವಿರ ಕುಟುಂಬದ ಸದಸ್ಯರಿಗೆ ಮೈಸೂರು ಸ್ಯಾಂಡಲ್ ಸೋಪ್ ಅನ್ನು ಫೌಂಡೇಷನ್ ಮುಖ್ಯಸ್ಥೆ ಪಲ್ಲವಿ ನಾಡಗೌಡ ಅವರು ಸಾಬೂನು ವಿತರಿಸುವ ಮೂಲಕ ಗುರುವಾರ ಚಾಲನೆ ನೀಡಿದರು.ಈ ವೇಳೆ ದೇವಿಕಾ ಫೌಂಡೇಶನ್ ಮುಖ್ಯಸ್ಥೆ ಪಲ್ಲವಿ ನಾಡಗೌಡ ಮಾತನಾಡಿ, ಇಂದು ಸಾಬೂನು ಸೇರಿದಂತೆ ಸೌಂಧರ್ಯವರ್ಧಕಗಳಿಗೆ ಕಲುಷಿತ ರಾಸಾಯನಿಕ ಬಳಸಲಾಗುತ್ತಿದೆ. ಇದರಿಂದ ಮನುಷ್ಯನ ದೇಹದ ಮೇಲೆ ವ್ಯಾಪಕ ಪರಿಣಾಮ ಬೀರುತ್ತಿದೆ. ಆದಕಾರಣ ಮೈಸೂರು ಸ್ಯಾಂಡಲ್ ಸೋಪ್ ಕಂಪನಿಯಿಂದ ನೈಸರ್ಗಿಕ ಗಿಡಮೂಲಿಕೆಗಳನ್ನು ಬಳಸಿ ಸಾಬೂನುಗಳನ್ನು ತಯಾರಿಸುತ್ತದೆ ಎಂದರು.ಇಂತಹ ನೈಸರ್ಗಿಕವಾದ ಸೋಪ್‌ಗಳನ್ನು ಬಳಸುವುದರಿಂದ ಜನರ ಆರೋಗ್ಯದ ಮೇಲೆಯೂ ಹೆಚ್ಚು ಪರಿಣಾಮ ಬೀರದು. ಜತೆಗೆ ರಾಜ್ಯದ ಸಾಬೂನನ್ನೇ ಬಳಸಿದಂತಾಗುತ್ತದೆ. ಹೀಗಾಗಿ ಸ್ಥಳೀಯವಾಗಿರುವ ಸೋಪ್ ಅನ್ನೇ ಬಳಸಬೇಕು. ಇದರಿಂದ ರಾಜ್ಯಕ್ಕೆ ಮತ್ತು ದೇಶಕ್ಕೂ ಹೆಚ್ಚು ಲಾಭ ತಂದುಕೊಟ್ಟಂತೆ ಆಗುತ್ತದೆ ಎಂದು ಹೇಳಿದರು.
ಈ ನಿಟ್ಟಿನಲ್ಲಿ ನಮ್ಮ ತಂದೆಯವರಾದ ಶಾಸಕರು ಹಾಗೂ ಕರ್ನಾಟಕ ಮಾರ್ಜಕ ಮತ್ತು ಸಾಬೂನು ನಿಗಮ ಅಧ್ಯಕ್ಷ ಸಿ.ಎಸ್.ನಾಡಗೌಡ (ಅಪ್ಪಾಜಿ) ಅವರು ಮತಕ್ಷೇತ್ರದವರಿಗೆ ಈ ಸಂಸ್ಥೆಯ ಒಂದು ವಸ್ತುವನ್ನು ಉಚಿತವಾಗಿ ಕೊಡಬೇಕು ಎಂಬ ಉದ್ದೇಶ ಹೊಂದಿದ್ದರು. ಈ ನಿಟ್ಟಿನಲ್ಲಿ ನಾವು ನಮ್ಮ ದೇವಿಕಾ ಸುಬ್ಬರಾವ್ ಫೌಂಡೇಶನ್ ವತಿಯಿಂದ ಸುಮಾರು 70 ಸಾವಿರ ಕುಟುಂಬದ ಜನರಿಗೆ ₹40 ಲಕ್ಷ ವೆಚ್ಚದಲ್ಲಿ ಸ್ವಯಂಪ್ರೇರಿತವಾಗಿ ಸ್ವಂತ ಖರ್ಚಿನಿಂದ ತರಿಸುವ ಮೂಲಕ ವಿತರಿಸಲಾಗುತ್ತಿದೆ ಎಂದು ಹೇಳಿದರು.