ಕನ್ನಡಪ್ರಭ ವಾರ್ತೆ ಬೆಂಗಳೂರು
ಮುಜರಾಯಿ ಇಲಾಖೆಗೆ ಸ್ವಂತ ಕಟ್ಟಡ ಹೊಂದುವ ಉದ್ದೇಶದೊಂದಿಗೆ ಎಂ.ಎಸ್. ಬಿಲ್ಡಿಂಗ್ ಆವರಣದಲ್ಲಿನ ಮುಜರಾಯಿ ಇಲಾಖೆ ಜಾಗದಲ್ಲಿ ಧಾರ್ಮಿಕ ಸೌಧ ನಿರ್ಮಾಣಕ್ಕೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಸೋಮವಾರ ಭೂಮಿ ಪೂಜೆ ನೆರವೇರಿಸಿದರು.ಧಾರ್ಮಿಕ ದತ್ತಿ ಇಲಾಖೆಗೆ ಸದ್ಯ ಸ್ವಂತ ಕಟ್ಟಡವಿಲ್ಲದ ಕಾರಣ ಚಾಮರಾಜಪೇಟೆಯಲ್ಲಿನ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದನ್ನು ಮನಗಂಡು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ಮುಜರಾಯಿ ಇಲಾಖೆಗೆ ಸ್ವಂತ ಕಟ್ಟಡ ನಿರ್ಮಿಸುವ ಉದ್ದೇಶದೊಂದಿಗೆ ಧಾರ್ಮಿಕ ಸೌಧ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಅದಕ್ಕೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು.
ಅದರಂತೆ ಎಂ.ಎಸ್. ಬಿಲ್ಡಿಂಗ್ ಆವರಣದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ರಾಮಾಂಜನೇಯ ಸ್ವಾಮಿ ದೇವಸ್ಥಾನದ 919 ಚದರ ಮೀ. ಜಮೀನಿನಲ್ಲಿ 27.70 ಕೋಟಿ ರು. ವೆಚ್ಚದಲ್ಲಿ ಧಾರ್ಮಿಕ ಸೌಧ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಈ ಧಾರ್ಮಿಕ ಸೌಧವು ಹೊಯ್ಸಳ ಶೈಲಿ ವಾಸ್ತುಶಿಲ್ಪದಲ್ಲಿ ನಿರ್ಮಾಣವಾಗುತ್ತಿರುವುದು ವಿಶೇಷವಾಗಿದೆ.ಒಟ್ಟು ನಾಲ್ಕು ಅಂತಸ್ತಿನ ಧಾರ್ಮಿಕ ಸೌಧ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ. ನೆಲಮಹಡಿಯಲ್ಲಿ ವಾಹನ ನಿಲುಗಡೆ ವ್ಯವಸ್ಥೆ, ಡಿಜಿಟಲ್ ಗ್ರಂಥಾಲಯ, ಆರ್‌ಡಿಪಿಆರ್, ರೆಕಾರ್ಡ್ಸ್ ಕೊಠಡಿ ಇರಲಿದೆ. ಮೊದಲನೇ ಮಹಡಿಯಲ್ಲಿ ಕೋರ್ಟ್ ಹಾಲ್, ಆಯುಕ್ತರ ಕಚೇರಿ, ಸರ್ವೇ ವಿಭಾಗದ ಕಚೇರಿಗಳಿರಲಿವೆ. ಎರಡನೇ ಮಹಡಿಯಲ್ಲಿ ಆಗಮ ವಿಭಾಗದ ಅಧಿಕಾರಿಗಳು, ಐಟಿ ವಿಭಾಗ, ಎಂಜಿನಿಯರಿಂಗ್ ವಿಭಾಗದ ಕಚೇರಿ, ಮೀಟಿಂಗ್ ಹಾಲ್‌ಗಳಿರಲಿವೆ. ಮೂರನೇ ಮಹಡಿಯಲ್ಲಿ ಓಪನ್ ಆಫೀಸ್ ಹಾಲ್, ಸೂಪರಿಟೆಂಡೆಂಟ್ ಕಚೇರಿ ಇರಲಿದ್ದು, ನಾಲ್ಕನೇ ಮಹಡಿಯಲ್ಲಿ ಸಭಾಂಗಣವನ್ನು ನಿರ್ಮಿಸಲಾಗುತ್ತದೆ.
ಶಂಕುಸ್ಥಾಪನೆ ನಂತರ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಮುಜರಾಯಿ ಇಲಾಖೆ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರಣ, ಸ್ವಂತ ಕಟ್ಟಡ ಇರಬೇಕು ಎಂದು ಧಾರ್ಮಿಕ ಸೌಧ ಕಟ್ಟಲು ನಿರ್ಧರಿಸಲಾಗಿದೆ. ಇಲಾಖೆಗೆ ಕೇಂದ್ರ ಸರ್ಕಾರದಿಂದ ಬರುವ ಅನುದಾನ ಬಳಸಿ ಧಾರ್ಮಿಕ ಸೌಧ ನಿರ್ಮಾಣಕ್ಕೆ ಯೋಜಿಸಲಾಗಿದೆ. 27 ಕೋಟಿ ರು. ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಲಿದೆ. ಹೊಯ್ಸಳ ಶೈಲಿಯಲ್ಲಿ ಧಾರ್ಮಿಕ ಸೌಧ ನಿರ್ಮಾಣವಾಗಲಿದೆ. ಕಟ್ಟಡದಲ್ಲಿ ಇಲಾಖೆ ಕಾರ್ಯನಿರ್ವಹಣೆಗೆ ಅಗತ್ಯವಿರುವ ಎಲ್ಲ ರೀತಿಯ ವ್ಯವಸ್ಥೆಗಳೂ ಇರಲಿವೆ ಎಂದು ತಿಳಿಸಿದರು.