ಟ್ಯಾಕ್ಸಿ ವಿತರಣೆ, ಸ್ವಯಂ ಉದ್ಯೋಗ ಸೃಷ್ಟಿಗೆ ಐತಿಹಾಸಿಕ ದಾಖಲೆ

| Published : Nov 17 2024, 01:15 AM IST

ಸಾರಾಂಶ

ಟ್ಯಾಕ್ಸಿ ಪಡೆದ ಯುವಕರು ಪ್ರಾಮಾಣಿಕವಾಗಿ ಶ್ರಮವಹಿಸಿ ದುಡಿದು ಉತ್ತಮ ಜೀವನ ನಡೆಸಿ ರಾಷ್ಟ್ರ ಕಟ್ಟುವಲ್ಲಿ ಭಾಗವಹಿಸಿ ಸಮಾಜಕ್ಕೆ ಮಾದರಿ ಆಗಬೇಕು

ಗದಗ: ಜಿಲ್ಲೆಯಲ್ಲಿ 200 ಟ್ಯಾಕ್ಸಿಗಳನ್ನು ಪ್ರವಾಸೋಧ್ಯಮ ಇಲಾಖೆಯ ಮೂಲಕ ವಿತರಣೆ ಮಾಡಲಾಗಿದ್ದು, ಇದು ಸ್ವಯಂ ಉದ್ಯೋಗ ಸೃಷ್ಟಿಸುವಲ್ಲಿ ಗದಗ ಜಿಲ್ಲೆಯಲ್ಲಿ ಐತಿಹಾಸಿಕ ದಾಖಲಾಗಿದೆ ಎಂದು ಕಾನೂನು, ಪ್ರವಾಸೋಧ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಅವರು ಶನಿವಾರ ಗದಗ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋಧ್ಯಮ ಇಲಾಖೆಯ ಸಹಯೋಗದಲ್ಲಿ ಕರ್ನಾಟಕ ಸಂಭ್ರಮ 50 ರ ಅಂಗವಾಗಿ ಪ್ರವಾಸಿ ಟ್ಯಾಕ್ಸಿ ವಿತರಣಾ ಕಾರ್ಯಕ್ರಮವನ್ನು ಬಲೂನ್ ಹಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಟ್ಯಾಕ್ಸಿ ಪಡೆದ ಯುವಕರು ಪ್ರಾಮಾಣಿಕವಾಗಿ ಶ್ರಮವಹಿಸಿ ದುಡಿದು ಉತ್ತಮ ಜೀವನ ನಡೆಸಿ ರಾಷ್ಟ್ರ ಕಟ್ಟುವಲ್ಲಿ ಭಾಗವಹಿಸಿ ಸಮಾಜಕ್ಕೆ ಮಾದರಿ ಆಗಬೇಕು. ಗದಗ ಜಿಲ್ಲೆಯೂ ಪ್ರವಾಸೋಧ್ಯಮ ತಾಣ ಆಗಬೇಕು ರಾಜಧಾನಿ ಬೆಂಗಳೂರಿನಿಂದ ದೂರ ಇರುವ ಕಾರಣಕ್ಕೆ ಪಾರಂಪರಿಕ ಸಂಪತ್ತಾದ ಐತಿಹಾಸಿಕ ದೇವಸ್ಥಾನ ಹೊಂದಿದ ಜಿಲ್ಲೆಯನ್ನು ಪ್ರವಾಸೋಧ್ಯಮ ತಾಣವಾಗಿಸಲು ಪ್ರವಾಸೋಧ್ಯಮ ಇಲಾಖೆಯಿಂದ ಕೆಲಸ ಪ್ರಾರಂಭವಾಗಿದೆ, ಯುವಕರು ಸ್ವಯಂ ಉದ್ಯೋಗ ಮಾಡಿ ಪ್ರವಾಸೋಧ್ಯಮಕ್ಕೆ ಒತ್ತು ನೀಡಬೇಕು ಎನ್ನುವ ಹಂಬಲದಿಂದ 200 ಯುವ ಜನಕ್ಕೆ ಟ್ಯಾಕ್ಸಿ ವಿತರಣೆ ಮಾಡಲಾಗಿದೆ. ಯುವಕರು ಶ್ರದ್ಧೆಯಿಂದ ಟ್ಯಾಕ್ಸಿಯನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಜೀವನ ನಡೆಸಬೇಕು ಎಂದರು.

ಪ್ರವಾಸೋಧ್ಯಮ ನಿಗಮದ ಅಧಿಕಾರಿ ರ್ರಾಜೇಂದ್ರ ಮಾತನಾಡಿ, ಗದಗ ಜಿಲ್ಲೆಯ ಯುವಕರು ಉತ್ಸಾಹದಿಂದ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಬೇಕು. ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಸಂಚಾರಕ್ಕಾಗಿ ಬಳಸುವ ಟ್ಯಾಕ್ಸಿಗಳನ್ನು ಜಿಲ್ಲೆಯಲ್ಲಿ ಪಡೆದುಕೊಂಡಿರುವ ಯುವಕರು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ವಿಧಾನ ಪರಿಷತ್ ಶಾಸಕ ಎಸ್.ವಿ.ಸಂಕನೂರು ಮಾತನಾಡಿ, ಟ್ಯಾಕ್ಸಿಗಳನ್ನು ಪಡೆದ ಯುವಕರು ಗದಗ ಜಿಲ್ಲೆಯನ್ನು ಪ್ರವಾಸೋಧ್ಯಮ ತಾಣವನ್ನಾಗಿಸಿ ಅಭಿವೃದ್ಧಿ ಪಡಿಸುವ ಗುರಿ ಹೊಂದಬೇಕು. ಟ್ಯಾಕ್ಸಿ ಪಡೆದ ಯುವಕರು ಗದಗ ಜಿಲ್ಲೆಗೆ ಸೀಮಿತವಾಗದೆ ರಾಜ್ಯದಲ್ಲಿರುವ ವಿವಿಧ ದೊಡ್ಡ ದೇವಾಲಯ, ಸ್ಮಾರಕ, ನಿಸರ್ಗ ಧಾಮ ಅಲ್ಲಿನ ವಸತಿ, ಊಟ ವ್ಯವಸ್ಥೆ, ಐತಿಹಾಸಿಕ ಹಿನ್ನೆಲೆ ಬಗ್ಗೆ ಮಾಹಿತಿ ಹೊಂದಿರಬೇಕು. ಮುಖ್ಯವಾಗಿ ಯಾವುದೇ ದುಶ್ಚಟಕ್ಕೆ ಬಲಿಯಾಗದೇ ಆರೋಗ್ಯಯುತ ಜೀವನ ನಡೆಸಬೇಕು ಎಂದರು.

ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ರೋಣ ಶಾಸಕ ಜಿ.ಎಸ್. ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅದ್ಯಕ್ಷ ಅಕ್ಬರ್ ಸಾಬ ಬಬರ್ಚಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ಕೆಡಿಪಿ ಸದಸ್ಯ ಡಿ.ಆರ್.ಪಾಟೀಲ, ಬಿ.ಬಿ.ಅಸೂಟಿ, ಅಶೋಕ ಮಂದಾಲಿ, ಐಯ್ಯಪ್ಪಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ, ನಗರಸಭೆ ಸದಸ್ಯರು, ಪ್ರವಾಸೋಧ್ಯಮ ಇಲಾಖೆ ನಿರ್ದೇಶಕ ರಾಜೇಂದ್ರ, ಕೆನರಾ ಬ್ಯಾಂಕ್ ಮ್ಯಾನೇಜರ್ ವಿಜಯಕುಮಾರ, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಪಂ ಸಿಇಓ ಭರತ್ ಎಸ್, ಎಸ್ಪಿ ಬಿ.ಎಸ್. ನೇಮಗೌಡ, ಪ್ರವಾಸೋಧ್ಯಮ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ವಿಭೂತಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶರಣು ಗೊಗೇರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಅತೀವ ಸಂತಸ: ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡಿದ್ದ ವಿಪ ಸದಸ್ಯ ಎಸ್.ವಿ.ಸಂಕನೂರ ಮಾತನಾಡುವ ವೇಳೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಹೊಗಳಿದ್ದೇ ಹೊಗಳಿದ್ದು, ಮಾತಿನ ಭರದಲ್ಲಿ ಇಷ್ಟೊಂದು ದೊಡ್ಡ ಕ್ರೀಡಾಂಗಣದಲ್ಲಿ ಇಷ್ಟೊಂದು ಸಂಖ್ಯೆಯ ಕಾರುಗಳನ್ನು ನಾನು ನೋಡಿಯೇ ಇಲ್ಲ, ಇಷ್ಟೊಂದು ಸಂಖ್ಯೆಯಲ್ಲಿ ಟ್ಯಾಕ್ಸಿ ವಿತರಣೆ ಮಾಡಿದ್ದು ದಾಖಲೆ ಎಂದು ಮೆಚ್ಚುಗೆಯ ಸುರಿಮಳೆಯನ್ನೇ ಸುರಿಸಿದರು.

ಕುರ್ಚಿಯೇ ಇರಲಿಲ್ಲ: ಗದಗ ಜಿಲ್ಲಾಡಳಿತ ಐತಿಹಾಸಿಕ ಕಾರ್ಯಕ್ರಮ ಎಂದು ಶನಿವಾರ ಕಾರ್ಯಕ್ರಮ ಬಣ್ಣಿಸಿದೆ, ಆದರೆ ವಾಸ್ತವದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಕುಳಿತುಕೊಳ್ಳಲು ಕುರ್ಚಿಗಳೇ ಇರಲಿಲ್ಲ. ಅದರಲ್ಲಿಯೂ ವೇದಿಕೆಯಲ್ಲಿ ಅತಿಥಿಗಳಿಗೆ ಮಾತ್ರ ಕುರ್ಚಿಗಳ ವ್ಯವಸ್ಥೆ ಮಾಡಿದ ಹಿನ್ನೆಲೆಯಲ್ಲಿ ಹಲವಾರು ಅಧಿಕಾರಿಗಳು, ಸಚಿವರ ಹಿಂಬಾಲಕರು, ಪ್ರಮುಖರು ಕೂಡಾ ನಿಂತುಕೊಂಡೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಾಗಿತ್ತು. ಇಷ್ಟೊಂದು ದೊಡ್ಡ ಕಾರ್ಯಕ್ರಮ ಆಯೋಜಿಸಿದ್ದ ಜಿಲ್ಲಾಡಳಿತಕ್ಕೆ ಅದ್ಯಾವ ಕಾರಣಕ್ಕೆ ಕುರ್ಚಿಗಳು ಕಡಿಮೆ ಬಿದ್ದಿದ್ದವೋ ಎನ್ನುವುದರ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೇ ಗಮನ ಹರಿಸಬೇಕಿದೆ.