ಸಾರಾಂಶ
ಹಾವೇರಿ: ನಕಲಿ ಕಾರ್ಮಿಕರ ಕಾರ್ಡ್‌ಗಳ ರದ್ದತಿಯಿಂದಾಗಿ ಜಿಲ್ಲೆಯಲ್ಲಿರುವ ನೈಜ ಕಾರ್ಮಿಕರಿಗೆ ಯಾವುದೇ ಸರ್ಕಾರಿ ಸೌಲಭ್ಯಗಳು ಸಿಗದೇ ಬಹಳಷ್ಟು ಅನ್ಯಾಯವಾಗುತ್ತಿದೆ. ಸರ್ಕಾರ ಕಾರ್ಮಿಕ ಇಲಾಖೆಗೆ ವಿಶೇಷ ಅಧಿಕಾರಿಯನ್ನು ನೇಮಿಸಿ ನೈಜ ಕಾರ್ಮಿಕರ ಕಾರ್ಡುಗಳನ್ನು ಪುನರ್ ಪರಿಶೀಲಿಸಿ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅನುಕೂಲ ಕಲ್ಪಿಸಿಕೊಡಬೇಕೆಂದು ಹಾವೇರಿ ಜಿಲ್ಲಾ ಬಿಲ್ಡಿಂಗ್ ಕಟ್ಟಡ ಕಟ್ಟುವ ಕಾರ್ಮಿಕರ ಸಂಘದ ಅಧ್ಯಕ್ಷ ದಾವಲಸಾಬ ಹಿರೇಮುಗದೂರ ಒತ್ತಾಯಿಸಿದರು.ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹತ್ತಾರು ವರ್ಷಗಳಿಂದ ಬಿಲ್ಡಿಂಗ್ ಕಟ್ಟಡ ಕಟ್ಟುವ ಕಾರ್ಮಿಕರ ಸಂಘ ಇಲಾಖೆಯಲ್ಲಿ ನೋಂದಣಿಯಾಗಿ ಅಸ್ತಿತ್ವದಲ್ಲಿದ್ದು, ಕಾರ್ಮಿಕರ ಹಿತ ಕಾಯುತ್ತಾ ಬಂದಿದೆ. ಸಂಘದಲ್ಲಿ ೨,೭೫೨ ಕಟ್ಟಡ ಮತ್ತು ಇತರೆ ನಿರ್ಮಾಣದಲ್ಲಿ ತೊಡಗಿಸಿಕೊಂಡ ಕಾರ್ಮಿಕರು ಇದ್ದಾರೆ. ಇಲಾಖೆ ವತಿಯಿಂದ ಕಾರ್ಮಿಕರ ಕಾರ್ಡುಗಳನ್ನು ಕೂಡ ನೀಡಿದೆ. ಆದರೆ ಇತ್ತಿಚೇಗೆ ಜಿಲ್ಲೆಯಲ್ಲಿ ನಕಲಿ ಕಾರ್ಮಿಕರು ಕಾರ್ಮಿಕರ ಕಾರ್ಡುಗಳನ್ನು ಹೊಂದಿದ್ದಾರೆ ಎಂಬ ಆರೋಪದ ಹಿನ್ನೆಲೆ ರದ್ದುಪಡಿಸಿದ ವೇಳೆ ಸುಮಾರು ೨೦೦೦ ನೈಜ ಕಾರ್ಮಿಕರ ಕಾರ್ಡುಗಳು ರದ್ದಾಗಿದ್ದು, ಯಾವುದೇ ಸೌಲಭ್ಯಗಳು ಸಿಗದೇ ವಂಚಿತರಾಗಿದ್ದೇವೆ. ಅಧಿಕಾರಿಗಳು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸದೇ ಕಚೇರಿಯಲ್ಲಿ ಕುಳಿತು ರದ್ದು ಮಾಡಲಾಗಿದ್ದು, ಈ ಕೂಡಲೇ ನೈಜ ಕಾರ್ಮಿಕರ ಮನೆಗೆ ಭೇಡಿ ನೀಡಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.ಕಾರ್ಮಿಕ ಇಲಾಖೆ ಸಚಿವರು ಜಿಲ್ಲೆ ಹಾಗೂ ತಾಲೂಕ ಕೇಂದ್ರಗಳಲ್ಲಿ ಕಾರ್ಮಿಕರಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಅಹವಾಲು ಸ್ವೀಕರಿಸಬೇಕು. ಕಾರ್ಮಿಕರ ಕಾರ್ಡುಗಳನ್ನು ಮಾಡಿಸುವ ಏಜೆಂಟರ್ ಹಾವಳಿಯನ್ನು ತಪ್ಪಿಸಬೇಕು. ಸ್ಥಗಿತಗೊಂಡಿರುವ ಕಾರ್ಮಿಕರ ಎಲ್ಲಾ ಯೋಜನೆಗಳನ್ನು ಪುನರ್ ಕಲ್ಪಿಸಬೇಕೆಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ನಾಗೇಶ ಮಲಗೋಡ ಮಾತನಾಡಿದರು. ಸಂಜೀವಪ್ಪ ಹರಪನಹಳ್ಳಿ, ನಜೀರಸಾಬ್ ಪಟೇಲ್, ಹಸನಸಾಬ್ ಗಣಜೂರ, ಬಸಯ್ಯ ಕುಲಕರ್ಣಿ, ಮಹ್ಮದಸಾಬ್ ದೇವಿಹೊಸೂರ, ಪ್ರಕಾಶ ಅರಸನಾಳ, ಮಾರುತಿ ಮುಳಗುಂದ, ಸುಭಾನಿ ಪಟೇಲ, ಖಾಸೀಂ ಗುತ್ತಲ ಸೇರಿದಂತೆ ಇತರರು ಇದ್ದರು. ನೈಜ ಕಾರ್ಮಿಕರಿಗೆ ಸಮಸ್ಯೆ: ನಮ್ಮ ಸಂಘದ ವ್ಯಾಪ್ತಿಯಲ್ಲಿ ೧೪ ಜನ ಪಿಂಚಣಿ ಪಡೆಯುತ್ತಿದ್ದು, ಇವರಿಗೆ ಕಳೆದ ಆರೇಳು ತಿಂಗಳಿನಿಂದ ಪಿಂಚಣಿ ಬಂದಿಲ್ಲ. ೨೦೨೨ರಲ್ಲಿ ಮದುವೆ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿದ್ದ ೨೭ ಅರ್ಜಿಗಳು ತಿರಸ್ಕೃತಗೊಂಡಿವೆ. ಅನಾರೋಗ್ಯಕ್ಕೆ ತುತ್ತಾದ ಕಾರ್ಮಿಕರು ಸಹಾಯಧನಕ್ಕೆ ಸಲ್ಲಿಸಿದ್ದ ಅರ್ಜಿಗಳನ್ನು ಕೂಡ ತಿರಸ್ಕರಿಸಲಾಗಿದೆ. ಕಾರ್ಮಿಕರ ಮಕ್ಕಳ ಸ್ಕಾಲರ್‌ಶಿಪ್ ಕೂಡ ನಿಂತಿದೆ. ಇದರಿಂದ ನೈಜ ಕಾರ್ಮಿಕರು ಕಂಗಾಲಾಗುವಂತಾಗಿದ್ದು, ಸರ್ಕಾರ ಈ ಕೂಡಲೇ ಕಾರ್ಮಿಕ ಇಲಾಖೆಗೆ ವಿಶೇಷ ಅಧಿಕಾರಿಯನ್ನು ನೇಮಿಸಿ ಕಾರ್ಡುಗಳನ್ನು ಪುನರ್ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.