ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಲೆಯ ಪುಟಾಣಿ ಮಕ್ಕಳು ಕನ್ನಡದ ಹಲವು ಹಾಡುಗಳಿಗೆ ನೃತ್ಯ ಪ್ರದರ್ಶನ ಮಾಡುವ ಮೂಲಕ ಪೋಷಕರು, ಪ್ರೇಕ್ಷಕರ ಗಮನ ಸೆಳೆದರು. ಇದೇ ವೇಳೆ ಅಗಲಿದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಪಾಂಡವಪುರ
ಪ್ರಸ್ತುತ ಮಕ್ಕಳಿಗೆ ಮನುಷ್ಯರನ್ನು ಮಾನವೀಯ ನೆಲೆಯಲ್ಲಿ ನೋಡುವ, ಪ್ರೀತಿಸುವ ಶಿಕ್ಷಣ ನೀಡಬೇಕಾಗಿದೆ ಎಂದು ಚಿತ್ರನಟ ಅರುಣ್ ಸಾಗರ್ ಹೇಳಿದರು.ತಾಲೂಕಿನ ಚಿನಕುರಳಿ ಗ್ರಾಮದ ಎಸ್‌ಟಿಜಿ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಸಂಜೆ ನಡೆದ ಸಂಸ್ಕೃತಿ ಸಮಾಗಮ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ತಾಂತ್ರಿಕತೆ, ಟಿವಿ ಮಾಧ್ಯಮ ಹಾಗೂ ಸೋಷಿಯಲ್ ಮೀಡಿಯಾ ಹಾವಳಿಗೆ ಮಕ್ಕಳು ಸಿಲುಕಿ ಮಾನವೀಯ ಮೌಲ್ಯಗಳ ಜತೆಗೆ ಪರಸ್ಪರ ಪ್ರೀತಿಸುವುದನ್ನೇ ಮರೆಯುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಪೋಷಕರು ಹಣದ ಹಿಂದೆ ಓಡುವುದನ್ನು ಬಿಟ್ಟು ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಅವರೊಳಗಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕು. ಮಕ್ಕಳನ್ನು ಬೆಳೆಸುವ ಜತೆಗೆ ಪೋಷಕರು ಬೆಳೆಯುವ ಕೆಲಸಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಜನರನ್ನು ಪ್ರೀತಿಸುವ ಹೃದಯವಂತಿಕೆ ಬೆಳೆಸಿಕೊಂಡಿದ್ದಾರೆ. ತಾವು ಹುಟ್ಟಿದ ಊರಿನಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಉತ್ತಮ ಪರಿಸರದಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಕೆಲಸ ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.
ಮಾಜಿ ಸಚಿವ, ಸಂಸ್ಥೆ ಅಧ್ಯಕ್ಷ ಸಿ.ಎಸ್.ಪುಟ್ಟರಾಜು ಮಾತನಾಡಿ, ನನ್ನ ಸ್ನೇಹಿತರು ತಮ್ಮ ಮಕ್ಕಳನ್ನು ಓದಿಸುವ ಸಲುವಾಗಿ ಮೈಸೂರಿಗೆ ಹೋಗುತ್ತಿರುವುದನ್ನು ನೋಡಿ ಮನಸ್ಸಿಗೆ ನೋವಾಗಿ, ನಮ್ಮ ತಂದೆ- ತಾಯಿ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿದೆ. 63 ಮಕ್ಕಳಿಂದ ಆರಂಭಗೊಂಡ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ 4 ಸಾವಿರ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪ್ರತಿ ವರ್ಷವೂ ವಿಭಿನ್ನವಾಗಿ ಶಾಲಾ ವಾರ್ಷಿಕೋತ್ಸವದ ಆಚರಣೆ ಮಾಡಲಾಗುತ್ತಿದೆ ಎಂದರು.ನಾನು ಸಾರ್ವಜನಿಕ ಕ್ಷೇತ್ರದಲ್ಲಿ ಶಾಸಕನಾಗಿ ಕೆಲಸಮಾಡುವ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಕೆಲಸ ಮಾಡಿದ್ದೇನೆ, ತಾಲೂಕಿಗೆ 12 ಪ್ರೌಢಶಾಲೆ, 5 ಪದವಿ ಪೂರ್ವ ಕಾಲೇಜು, 3 ಡಿಗ್ರಿ ಕಾಲೇಜು, ಹೋಬಳಿಗೆ ಎರಡು ವಸತಿ ಶಾಲೆಗಳನ್ನು ಆರಂಭಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವಾಗಿದ್ದೇನೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಲೆಯ ಪುಟಾಣಿ ಮಕ್ಕಳು ಕನ್ನಡದ ಹಲವು ಹಾಡುಗಳಿಗೆ ನೃತ್ಯ ಪ್ರದರ್ಶನ ಮಾಡುವ ಮೂಲಕ ಪೋಷಕರು, ಪ್ರೇಕ್ಷಕರ ಗಮನ ಸೆಳೆದರು. ಇದೇ ವೇಳೆ ಅಗಲಿದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮಕ್ಕಳು ಸಾಲುಮರದ ತಿಮ್ಮಕ್ಕ ಅವರ ಕುರಿತ ಹಾಡಿಗೆ ಹೆಜ್ಜೆಯಾಗುವ ಮೂಲಕ ಗೌರವ ಸಲ್ಲಿಸಿದರು. ಉತ್ತಮ ಶಿಕ್ಷಕರು, ವಾಹನ ಚಾಲಕರು, ಮಹಿಳಾ ಸಿಬ್ಬಂದಿಯ ಉತ್ತಮ ಸೇವೆ ಗುರುತಿಸಿ ಅಭಿನಂದಿಸಿದರು.ಇದೇ ವೇಳೆ ಚಿತ್ರನಟ ಅರುಣ್ ಸಾಗರ್ ಅವರನ್ನು ಅಭಿನಂದಿಸಲಾಯಿತು. ಸಮಾರಂಭದಲ್ಲಿ ಸಂಸ್ಥೆಯ ಸಿಇಒ ಸಿ.ಪಿ.ಶಿವರಾಜು, ಆಡಳಿತಾಧಿಕಾರಿ ನಿವೇದಿತ ನಾಗೇಶ್, ಪ್ರಾಂಶುಪಾಲರಾದ ಮಾಚಮ್ಮ, ಉಪಪ್ರಾಂಶುಪಾಲ ಲಿಂಗರಾಜು, ಅನಂತು, ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ಮನ್ ಮುಲ್ ನಿರ್ದೇಶಕ ಸಿ.ಶಿವಕುಮಾರ್ ಸೇರಿದಂತೆ ಹಲವರು ಇದ್ದರು.