ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನದಲ್ಲಿ ಭಾಗವಹಿಸಿದ್ದ ಖಾಸಗಿ ಶಾಲಾ ವಿದ್ಯಾರ್ಥಿಗೆ ಶಿಕ್ಷೆ ನೀಡಿರುವ ಘಟನೆಯ ವರದಿ ಎಲ್ಲ ಮಾಧ್ಯಮಗಳಲ್ಲಿ ಹೊರಬರುತ್ತಿದ್ದಂತೆ ನನ್ನಿಂದ ತಪ್ಪಾಗಿದೆ ದಯವಿಟ್ಟು ಕ್ಷಮಿಸಿ ಎಂದು ಶಾಲೆಯ ಶಿಕ್ಷಕಿ ಪತ್ರದ ಮೂಲಕ ಕ್ಷಮೆಯಾಚನೆ ಮಾಡಿದ್ದಾರೆ.ನಾನು ಯಾವುದೇ ಅವಮಾನಕಾರಿ ಟಿಪ್ಪಣಿ ಮಾಡಿಲ್ಲ. ಯಾವುದೇ ವಿದ್ಯಾರ್ಥಿ, ಸಮುದಾಯ, ಸಂಸ್ಥೆ ಅಥವಾ ಮಗುವಿನ ಭಾವನೆಗಳಿಗೆ ನೋವುಂಟು ಮಾಡುವ, ಹಾನಿ ಮಾಡುವ ಉದ್ದೇಶ ನನ್ನದಲ್ಲ. ಯಾರಾದರೂ ಭಾವನೆಗೆ ನೋವುಂಟಾದರೆ ಅದರ ಕುರಿತು ನನಗೆ ತುಂಬಾ ವಿಷಾದವಿದೆ. ಮತ್ತು ಕ್ಷಮೆಯಾಚಿಸುತ್ತೇನೆ. ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ಖಚಿತಪಡಿಸುತ್ತೇನೆ ಎಂದು ಆಂಗ್ಲ ಮಾಧ್ಯಮ ಶಾಲೆ ಶಿಕ್ಷಕಿ ಕಾವೇರಿ ಎಂದು ಕ್ಷಮಾಪಣಾ ಪತ್ರ ಕಳುಹಿಸಿದ್ದಾರೆ.ಏನಿದು ಘಟನೆ?:ಪ್ರತಿಷ್ಠಿತ ಖಾಸಗಿ ಶಾಲೆಯೊಂದರ ವಿದ್ಯಾರ್ಥಿ ಕಳೆದ ಭಾನುವಾರ ಬೆಳಗಾವಿ ನಗರದಲ್ಲಿ ಆಯೋಜಿಸಲಾಗಿದ್ದ ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗವಹಿಸಿದ್ದ ಮರುದಿನ ಶಾಲೆಗೆ ಹೋದ ವೇಳೆ ಶಿಕ್ಷಕಿ ವಿದ್ಯಾರ್ಥಿಯ ಗಣವೇಶದ ಫೋಟೋಗಳನ್ನು ಸಾರ್ವಜನಿಕವಾಗಿ ತೋರಿಸಿ ಅವಮಾನ ಮಾಡಿದ್ದರು. ಅಲ್ಲದೆ, ತರಗತಿಯಿಂದ ಆಚೆ ಹಾಕಿ ಶಿಕ್ಷೆ ನೀಡಿದ್ದರು. ಶಿಕ್ಷಕಿಯ ಈ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತನ್ನಿಂದ ತಪ್ಪಾಗಿದೆ ಎಂದು ಶಿಕ್ಷಕಿ ಕ್ಷಮೆಯಾಚಿಸಿದ್ದಾರೆ.