ದೇಶವ್ಯಾಪಿ ಬಲಿಷ್ಠವಾದ ಸಂಘ ನಿಷೇಧಿಸಲು ಸಾಧ್ಯವಿಲ್ಲ: ಡಾ. ವೀರಣ್ಣ ಚರಂತಿಮಠ

| Published : Oct 17 2025, 01:03 AM IST / Updated: Oct 17 2025, 01:04 AM IST

ದೇಶವ್ಯಾಪಿ ಬಲಿಷ್ಠವಾದ ಸಂಘ ನಿಷೇಧಿಸಲು ಸಾಧ್ಯವಿಲ್ಲ: ಡಾ. ವೀರಣ್ಣ ಚರಂತಿಮಠ
Share this Article
  • FB
  • TW
  • Linkdin
  • Email

ಸಾರಾಂಶ

ದೇಶವ್ಯಾಪಿ ಬಲಿಷ್ಠವಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನಿಷೇಧಿಸಲು ಯಾರಿಂದಲೂ ಸಾಧ್ಯವಿಲ್ಲ. ಕೆಲವರು ಮಂತ್ರಿಗಿರಿ ಕಳೆದುಕೊಳ್ಳುವ ಭೀತಿಯಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ಗೆ ಹತ್ತಿರವಾಗಲು ಇಂತಹ ವಿವಾದ ಹುಟ್ಟುಹಾಕುತ್ತಿದ್ದಾರೆ. ಅಂಥವರಿಗೆ ಪ್ರಾಮುಖ್ಯತೆ ನೀಡುವ ಅವಶ್ಯಕತೆಯಿಲ್ಲ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ತೀಕ್ಷ್ಣವಾಗಿ ಉತ್ತರಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ದೇಶವ್ಯಾಪಿ ಬಲಿಷ್ಠವಾಗಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನಿಷೇಧಿಸಲು ಯಾರಿಂದಲೂ ಸಾಧ್ಯವಿಲ್ಲ. ಕೆಲವರು ಮಂತ್ರಿಗಿರಿ ಕಳೆದುಕೊಳ್ಳುವ ಭೀತಿಯಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ಗೆ ಹತ್ತಿರವಾಗಲು ಇಂತಹ ವಿವಾದ ಹುಟ್ಟುಹಾಕುತ್ತಿದ್ದಾರೆ. ಅಂಥವರಿಗೆ ಪ್ರಾಮುಖ್ಯತೆ ನೀಡುವ ಅವಶ್ಯಕತೆಯಿಲ್ಲ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ತೀಕ್ಷ್ಣವಾಗಿ ಉತ್ತರಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಲಿಷ್ಟಕರ ಪರಿಸ್ಥಿತಿ ಹೊಂದಿರುವ ಕೇರಳದಲ್ಲೇ ಆರ್‌ಎಸ್‌ಎಸ್ ಅನ್ನು ಅಲ್ಲಾಡಿಸಲು ಅಲ್ಲಿನ ಕಮ್ಯೂನಿಸ್ಟ್ ಹಾಗೂ ಕಾಂಗ್ರೆಸ್ ಮಿತ್ರಪಕ್ಷಗಳಿಗೆ ಸಾಧ್ಯವಾಗಿಲ್ಲ. ದೇಶದ 19 ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದೆ. ಬಲಿಷ್ಠ ಪ್ರಧಾನಿ ದೇಶ ಆಳುತ್ತಿರುವಾಗ ಕೇವಲ ಪ್ರಚಾರದ ತೆವಲಿಗೆ ಪ್ರಿಯಾಂಕ್ ಖರ್ಗೆ ಅಂಥವರು ಈ ರೀತಿ ಹೇಳಿಕೆ ನೀಡಬಹುದೇ ವಿನಃ ಅವರ ತಂದೆ ಮಲ್ಲಿಕಾರ್ಜುನ ಖರ್ಗೆ ಅವರಿಂದಲೂ ಸಾಧ್ಯವಾಗದ್ದನ್ನು ಇವರು ಮಾಡುವುದು ಕನಸಿನ ಮಾತು ಎಂದು ವಾಗ್ದಾಳಿ ನಡೆಸಿದರು.

ಆರ್‌ಎಸ್ಎಸ್ ಕಾರ್ಮಿಕ, ವಿದ್ಯಾರ್ಥಿಗಳು, ಸಮಾಜ ಸೇವೆ, ಧರ್ಮರಕ್ಷಣೆ, ಸಹಕಾರಿ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರಗಳ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಪ್ರಿಯಾಂಕ್ ಖರ್ಗೆ ಅವರು ಸಚಿವರಾಗಿ ಏನನ್ನೂ ಸಾಧಿಸಲು ಸಾಧ್ಯವಾಗಿಲ್ಲ. ಈಗ ಸಚಿವ ಸಂಪುಟ ಪುನಾರಚನೆಯ ಮಾತು ಕೇಳಿ ಬರುತ್ತಿರುವಾಗ ತಮ್ಮ ಹುಳುಕು ಮುಚ್ಚಿಕೊಳ್ಳಲು ಸಂಘದ ಚಟುವಟಿಕೆ ನಿರ್ಬಂಧಿಸುವ ಮೂಖರ್ತನದ ಮಾತುಗಳನ್ನಾಡುತ್ತಿದ್ದಾರೆ. ರಾಜ್ಯ ಸರ್ಕಾರ ಅಂಥ ಹೆಜ್ಜೆಯನ್ನಿಟ್ಟರೂ ಬಲಿಷ್ಠವಾದ ನ್ಯಾಯಾಂಗ ವ್ಯವಸ್ಥೆಯಿದೆ. ಅಲ್ಲಿ ಹೋರಾಡಿ ನ್ಯಾಯಪಡೆಯುತ್ತೇವೆ. ಸಚಿವರಿಗೆ ಬೆದರಿಕೆ ಕರೆ ಬರುತ್ತಿದ್ದರೆ ದೂರು ದಾಖಲಿಸಬೇಕು. ಅದನ್ನೂ ಪ್ರಚಾರಕ್ಕೆ ಬಳಸಿಕೊಳ್ಳುತ್ತಾರೆ ಎಂದರೆ ತಮಗೆ ಭದ್ರತೆ ಹೆಚ್ಚಿಸಿಕೊಳ್ಳಲು ಹೀಗೆ ಆಡುತ್ತಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.

ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನನ್ನಾಗಿಸಿ, ಸರ್ಕಾರಿ ಕಚೇರಿಗಳಲ್ಲಿ ಭಾವಚಿತ್ರ ಅಳವಸುವುದನ್ನು ಕಡ್ಡಾಯಗೊಳಿಸಿದ್ದರೂ ನನ್ನನ್ನು ದ್ವೇಷಿಸುತ್ತೀರಿ ಏಕೆ ಎಂಬ ಸಿಎಂ ಸಿದ್ದರಾಮಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಚರಂತಿಮಠ ಅವರು, ಬಸವಣ್ಣನವರದು ಸಾಂಸ್ಕೃತಿಕ ರಾಯಭಾರಿಯನ್ನೂ ಮೀರಿದ ಮೇರು ವ್ಯಕ್ತಿತ್ವ. ಅವರು ಪ್ರತಿಪಾದಿಸಿದ ವಿಚಾರಗಳಿಂದಾಗಿ ವಿಶ್ವಗುರುವಾದ್ದಾರೆ. ನಾವು ಸರ್ಕಾರದ ಘೋಷಣೆ ಎಂದಿಗೂ ವಿರೋಧಿಸುವುದಿಲ್ಲ. ಆದರೆ ವೀರಶೈವ-ಲಿಂಗಾಯತರನ್ನು ಒಡೆಯುವ ಮನಸ್ಥಿತಿ ವಿರೋಧಿಸುತ್ತೇವೆ. 2013-18ರ ಅವಧಿಯುದ್ಧಕ್ಕೂ ಸಿದ್ದರಾಮಯ್ಯ ಅವರು ಮಾಡಿರುವುದು ಇದನ್ನೇ. ದೇವರಾಜ ಅರಸು ಹಾವನೂರ ಆಯೋಗ ರಚಿಸಿ ವೀರಶೈವ-ಲಿಂಗಾಯತ ಉಪಪಂಗಡ ಒಡೆದರು. ಒಕ್ಕಲಿಗರನ್ನು ಒಡೆಯಲು ಸಾಧ್ಯವಾಗಲಿಲ್ಲ. ನಾವು ಸುಲಭವಾಗಿ ಸಿಗುತ್ತೇವೆ ಎಂಬ ಕಾರಣಕ್ಕೆ ನಮ್ಮ ಸಮಾಜ ಗುರಿಯಾಗಿಸುತ್ತಾರೆ. ಜನಕ್ಕೆ ಮೀಸಲಾತಿ ಸೌಲಭ್ಯ ಪಡೆದುಕೊಂಡಿರಬಹುದು. ಆದರೆ ಆಳದಲ್ಲಿ ಸಮಾಜ ಒಂದೇ ಎಂಬ ಭಾವವಿದೆ ಎಂದು ಹೇಳಿದರು.

ಸಚಿವ ತಿಮ್ಮಾಪೂರ ಅವರು ಬಸವಧರ್ಮ ಅಸ್ತಿತ್ವಕ್ಕೆ ಬಂದರೆ ಗಣತಿಯಲ್ಲಿ ಹಿಂದೂ ಎಂದು ಬರೆಸುವುದಿಲ್ಲ ಎಂಬ ಹೇಳಿಕೆಗೆ ಉತ್ತರಿಸಿದ ಅವರು, ಆಗದ, ಹೋಗದ ಮಾತುಗಳನ್ನು ಆಡಿ ವಿವಾದ ಸೃಷ್ಟಿಸುವ ಹುನ್ನಾರ ಬಿಟ್ಟು ಇದರಲ್ಲಿ ಏನೂ ಅಡಗಿಲ್ಲ ಎಂದು ಹೇಳಿದರು.