ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಭಾರತದ ಸ್ವಾತಂತ್ರ್ಯ ಸಂಗ್ರಾಮದ ವೇಳೆ ನಮ್ಮ ನಾಡಿನ ಕಿತ್ತೂರು ಸಂಸ್ಥಾನದ ವೀರರಾಣಿ ಚೆನ್ನಮ್ಮ ಬ್ರಿಟಿಷರ ಆಡಳಿತದ ವಿರುದ್ಧ ಹೋರಾಟಕ್ಕೆ ನಾಂದಿ ಹಾಡುವ ಮೂಲಕ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ ಎನಿಸಿಕೊಂಡಿದ್ದಾಳೆ. ಆಕೆಯ ದೇಶಭಕ್ತಿಯ ಕಿಚ್ಚು ನಮ್ಮೆಲ್ಲರಿಗೆ ಪ್ರೇರಣೆಯಾಗಬೇಕು ಎಂದು ಪುರಸಭೆಯ ಅಧ್ಯಕ್ಷೆ ಶಿವಲೀಲಾ ಬುಟಾಳಿ ಹೇಳಿದರು.ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ತಾಲೂಕು ಆಡಳಿತದಿಂದ ವೀರರಾಣಿ ಕಿತ್ತೂರು ಚನ್ನಮ್ಮ ವೀರಜ್ಯೋತಿ ಯಾತ್ರೆಯ ಭವ್ಯ ಸ್ವಾಗತ ಕಾರ್ಯಕ್ರಮದಲ್ಲಿ ಜ್ಯೋತಿಗೆ ಪೂಜಿ ಸಲ್ಲಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಕಿತ್ತೂರು ಸಂಸ್ಥಾನದ ಕೊಡುಗೆ ಅಪಾರವಾಗಿದ್ದು, ವೀರರಾಣಿ ಕಿತ್ತೂರು ಚನ್ನಮ್ಮ ಹಾಗೂ ಅವಳ ಬಲಗೈ ಬಂಟ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಅವರ ದೇಶಪ್ರೇಮ ಮತ್ತು ಶೌರ್ಯ ಇಂದಿನ ಯುವ ಜನಾಂಗಕ್ಕೆ ಪ್ರೇರಣೆಯಾಗಬೇಕು ಎಂದರು.ತಹಶೀಲ್ದಾರ ಸಿದ್ದರಾಯ ಬೋಸಗಿ ಮಾತನಾಡಿ, ಕಿತ್ತೂರು ಸಂಸ್ಥಾನವನ್ನು ಉಳಿಸಿಕೊಳ್ಳಲು ಬ್ರಿಟಿಷರ ಆಡಳಿತದ ವಿರುದ್ಧ ಸಿಡಿದಿದ್ದ ವೀರರಾಣಿ ಚನ್ನಮ್ಮ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾಯ್ದೆ ಜಾರಿ ಮಾಡಿದ್ದ ಬ್ರಿಟಿಷ್ ಅಧಿಕಾರಿ ಥ್ಯಾಕರೆ ವಿರುದ್ಧ ಸಮರ ಸಾರಿ, ಮೊದಲ ವಿಜಯಮಾಲೆ ಧರಿಸಿದಳು. ಈ ವಿಜಯದ ಸಂಕೇತವಾಗಿ ಪ್ರತಿವರ್ಷ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮೂರು ದಿನಗಳ ಕಾಲ ಕಿತ್ತೂರು ಉತ್ಸವ ಆಚರಿಸುತ್ತಿದೆ. ಅ.23, 24 ಮತ್ತು 25 ರಂದು ಮೂರು ದಿನಗಳ ಕಾಲ ಈ ಕಾರ್ಯಕ್ರಮ ಸಂಭ್ರಮದಿಂದ ಜರುಗುತ್ತದೆ. ತಾಲೂಕಿನ ಜನರು ಕೂಡ ಈ ಉತ್ಸವದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭವಾದ ಕಿತ್ತೂರು ಉತ್ಸವದ ಜ್ಯೋತಿಯಾತ್ರೆಯನ್ನು ವಿವಿಧ ವಾದ್ಯ ಮೇಳಗಳೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮೂಲಕ ಮೆರವಣಿಗೆಯ ಮೂಲಕ ಆಗಮಿಸಿ ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶಿವಯೋಗಿ ವೃತ್ತದ ಮೂಲಕ ಜ್ಯೋತಿ ಯಾತ್ರೆಯನ್ನು ರಾಯಬಾಗ ತಾಲೂಕಿಗೆ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಪುರಸಭೆಯ ಉಪಾಧ್ಯಕ್ಷ ಭುವನೇಶ್ವರಿ ಯಕ್ಕಂಚಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ದತ್ತ ವಾಸ್ಟರ್, ಮುಖಂಡರಾದ ಸದಾಶಿವ ಬುಟಾಳಿ, ಚಿದಾನಂದ ಸವದಿ, ರಾಮನಗೌಡ ಪಾಟೀಲ, ಅವಿನಾಶ ನಾಯಕ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಶಿವಾನಂದ ಕಲ್ಲಾಪುರ, ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ, ಅಭಿಯಂತರ ಪ್ರವೀಣ ಪಾಟೀಲ, ತಾಲೂಕು ವೈದ್ಯಾಧಿಕಾರಿ ಡಾ.ಬಸಗೌಡ ಕಾಗೆ, ಸಿಡಿಪಿಒ ಮಂಜುನಾಥ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್ ಮುಂಜೆ, ಕೃಷಿ ಅಧಿಕಾರಿ ನಿಂಗನಗೌಡ ಬಿರಾದಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಕನ್ನಡ ಪರ ಸಂಘಟನೆಯ ಮುಖಂಡರು, ಅಂಗನವಾಡಿ ಕಾರ್ಯಕರ್ತೆಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.