ಜನಿವಾರ ತೆಗೆಸಿದ ಕ್ರಮ ಬ್ರಾಹ್ಮಣ ಸಮಾಜಕ್ಕಾದ ಅವಮಾನ

| Published : Apr 29 2025, 12:46 AM IST

ಸಾರಾಂಶ

ರಾಜ್ಯದ ಅನೇಕ ಕಡೆಗಳಲ್ಲಿ ಸಿಇಟಿ ಪರೀಕ್ಷೆ ಬರೆಯಲು ಹೋದ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳ ಜನಿವಾರ ತೆಗೆಸಿ, ಕತ್ತರಿಸಿ ಬ್ರಾಹ್ಮಣ ಸಮುದಾಯದ ಧಾರ್ಮಿಕ ಭಾವನೆ ಹಾಗೂ ನಂಬಿಕೆಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ, ಸೋಮವಾರ ತಾಲೂಕು ಬ್ರಾಹ್ಮಣ ಮಹಾಸಭಾ ಸದಸ್ಯರು ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.

- ಚನ್ನಗಿರಿ ತಾಲೂಕು ಬ್ರಾಹ್ಮಣ ಮಹಾಸಭಾ ಪ್ರತಿಭಟನೆಯಲ್ಲಿ ಪಿ.ರಂಗನಾಥ ರಾವ್ ಅಸಮಾಧಾನ

- - -

- ಜನಿವಾರ ಎನ್ನುವುದು ಕೇವಲ ದಾರವಲ್ಲ. ಅದು ಬ್ರಾಹ್ಮಣರ ಅಸ್ಮಿತೆ

- ಬ್ರಾಹ್ಮಣರ ಏಳಿಗೆ ಸಹಿಸದೇ ಸಾಮಾಜಿಕವಾಗಿ ನಿಂದಿಸುವ ದುರುದ್ದೇಶದಿಂದ ನಡೆಸಿದ ಘಟನೆ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ರಾಜ್ಯದ ಅನೇಕ ಕಡೆಗಳಲ್ಲಿ ಸಿಇಟಿ ಪರೀಕ್ಷೆ ಬರೆಯಲು ಹೋದ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳ ಜನಿವಾರ ತೆಗೆಸಿ, ಕತ್ತರಿಸಿ ಬ್ರಾಹ್ಮಣ ಸಮುದಾಯದ ಧಾರ್ಮಿಕ ಭಾವನೆ ಹಾಗೂ ನಂಬಿಕೆಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ, ಸೋಮವಾರ ತಾಲೂಕು ಬ್ರಾಹ್ಮಣ ಮಹಾಸಭಾ ಸದಸ್ಯರು ಪ್ರತಿಭಟನಾ ಮೆರವಣಿಗೆ ನಡೆಸಿದರು.

ತಾಲೂಕು ಅಧ್ಯಕ್ಷ ಪಿ.ರಂಗನಾಥ ರಾವ್ ಮಾತನಾಡಿ, ಶಿವಮೊಗ್ಗ, ಬೀದರ್, ಧಾರವಾಡ ಸೇರಿದಂತೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಸಿಇಟಿ ಪರೀಕ್ಷೆಗೆ ಬಂದಿದ್ದ ವಿದ್ಯಾರ್ಥಿಗಳ ಜನಿವಾರಗಳನ್ನು ತೆಗೆಸಿದ್ದಾರೆ. ಜನಿವಾರ ಎನ್ನುವುದು ಕೇವಲ ದಾರವಲ್ಲ. ಅದು ಬ್ರಾಹ್ಮಣರ ಅಸ್ಮಿತೆ. ಧಾರ್ಮಿಕ ಭಾವನೆ ಹಾಗೂ ನಂಬಿಕೆಗಳ ದ್ಯೋತಕವಾಗಿದೆ. ಅದರ ಅಸ್ತಿತ್ವಕ್ಕೆ ಧಕ್ಕೆ ತಂದಿರುವುದು ಸಮಸ್ತ ಬ್ರಾಹಣ ಸಮಾಜಕ್ಕೆ ಮಾಡಿರುವ ಅಪಮಾನವಾಗಿದೆ ಎಂದು ಕಿಡಿಕಾರಿದರು.

ಬ್ರಾಹ್ಮಣರ ಏಳಿಗೆಯನ್ನು ಸಹಿಸದೇ ಅವರನ್ನು ಸಾಮಾಜಿಕವಾಗಿ ನಿಂದಿಸುವ ದುರುದ್ದೇಶದಿಂದ ನಡೆಸಿರುವ ಘಟನೆ ಇದಾಗಿದೆ. ಇಂತಹ ಕೃತ್ಯವನ್ನು ನಾಡಿನ ಸಮಸ್ತ ಬ್ರಾಹ್ಮಣರು ಖಂಡಿಸಿದ್ದಾರೆ. ಪ್ರಕರಣವು ವಿದ್ಯಾರ್ಥಿಗಳ ಶೈಕ್ಷಣಿಕ ಹಕ್ಕನ್ನು ಮೊಟಕುಗೊಳಿಸಿದೆ ಎಂದು ಆರೋಪಿಸಿದರು.

ರಾಜ್ಯಾದ್ಯಂತ ಹಲವಾರು ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಬ್ರಾಹ್ಮಣ ಸಮಾಜ, ವಿವಿಧ ಸಂಘ, ಸಂಸ್ಥೆಗಳು, ಧಾರ್ಮಿಕ ಮುಖಂಡರು ಈ ಘಟನೆ ಕುರಿತಂತೆ ಪ್ರತಿಭಟನೆ ನಡೆಸಿದ್ದಾರೆ. ಇಂತಹ ಘಟನೆಗಳು ಖಂಡನೀಯ ಹಾಗೂ ಮತ್ತೆ ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಮೆರವಣಿಗೆಯು ಪಟ್ಟಣದ ಮಠದ ಬೀದಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದಿಂದ ಹೊರಟು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿತು. ಬಳಿಕ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ತಾಲೂಕು ಬ್ರಾಹ್ಮಣ ಮಹಾಸಭಾ ಪ್ರಮುಖರಾದ ಸುಮತೀಂದ್ರ, ಎನ್.ಬಿ.ಸುಬ್ರಹ್ಮಣ್ಯ, ವಲ್ಲಭರಾವ್, ಎನ್.ವಿ.ರಮೇಶ್, ಕಾಶಿನಾಥ ಜೋಯ್ಸ್‌, ರಾಮಮೂರ್ತಿ, ಜಯಶಂಕರ ಶಾಸ್ತ್ರಿ, ವಿದ್ಯಾರಣ್ಯ ಮಾರ್ಕೋಡ್, ರಾಘವೇಂದ್ರ, ರಂಗನಾಥ್, ಸಿ.ಜಿ. ವೆಂಕಟೇಶ್, ರಮೇಶ್ ಕಶ್ಯಪ್, ಸುವರ್ಣ, ಉಮಾ, ಶಶಿಕಲಾ ಸುಬ್ರಹ್ಮಣ್ಯ, ರಾಧ ಕಾಶಿನಾಥ್, ರೂಪ, ಶಾಂತ, ಸವಿತ ನಟರಾಜ್, ಗಂಗಾ ಮಂಜುನಾಥ್ ಸೇರಿದಂತೆ ಸಮಾಜ ಬಾಂಧವರು ಹಾಜರಿದ್ದರು.

- - -

-28ಕೆಸಿಎನ್‌ಜಿ1:

ರಾಜ್ಯದ ಕೆಲ ಜಿಲ್ಲೆಗಳಲ್ಲಿ ಸಿಇಟಿ ಪರೀಕ್ಷೆ ಬರೆಯಲು ಹೋದ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಕ್ರಮ ಖಂಡಿಸಿ ಸೋಮವಾರ ಚನ್ನಗಿರಿ ತಾಲೂಕು ಬ್ರಾಹ್ಮಣ ಮಹಾಸಭಾದಿಂದ ಪ್ರತಿಭಟನೆ ನಡೆಯಿತು.