ಪಾಲಿಕೆ ಸಭೆ: ಸೆಸ್, ಶುಲ್ಕ ಕಡಿತ ಚರ್ಚೆಯಾಗುತ್ತಾ?

| Published : Apr 29 2025, 12:46 AM IST

ಸಾರಾಂಶ

ಪಾಲಿಕೆಯ ಸಾಮಾನ್ಯಸಭೆ ಏ. 29ರಂದು ನಡೆಯಲಿದೆ. ಅಲ್ಲಿ ಸೆಸ್‌ ಮತ್ತು ಶುಲ್ಕ ಇಳಿಕೆ ಕುರಿತಂತೆ ಚರ್ಚಿಸಿ ಸರ್ಕಾರಕ್ಕೆ ಠರಾವು ಪಾಸ್‌ ಮಾಡಿ ಕಳುಹಿಸುತ್ತದೆಯೇ? ಅಥವಾ ಬಿಸೋ ದೊಣ್ಣೆಯಿಂದ ತಪ್ಪಿಸಿಕೊಂಡರಾಯ್ತು ಎಂಬಂತೆ ಮೇಯರ್‌ ಹಾಗೆ ಹೇಳಿದ್ದಾರೆಯೇ? ಎಂಬುದು ಇಂದಿನ ಸಾಮಾನ್ಯ ಸಭೆಯಲ್ಲಿ ಗೊತ್ತಾಗಲಿದೆ.

ಶಿವಾನಂದ ಗೊಂಬಿ ಹುಬ್ಬಳ್ಳಿ

ಇಂದು (ಏ.29) ನಡೆಯಲಿರುವ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯತ್ತ ನಾಗರೀಕರ ಚಿತ್ತ ನೆಟ್ಟಿದ್ದು, ಸಿಕ್ಕಾಪಟ್ಟೆ ಹೆಚ್ಚಳವಾಗಿರುವ ಆಸ್ತಿಕರ ಕುರಿತಂತೆ ಅರ್ಥಪೂರ್ಣ ಚರ್ಚೆ ನಡೆದು, ತೆರಿಗೆ ಇಳಿಕೆಯಾಗುವುದೇ? ಎಂದು ಜಾತಕ ಪಕ್ಷಿಯಂತೆ ಎದುರು ನೋಡುತ್ತಿದ್ದಾರೆ.

ಪ್ರಸ್ತುತ ಮಾರುಕಟ್ಟೆ ವ್ಯಾಲ್ಯೂ (ಎಸ್‌ಆರ್‌ವ್ಯಾಲ್ಯೂ) ನಂತೆ ಆಸ್ತಿಗಳಿಗೆ, ವಾಣಿಜ್ಯ ಕಟ್ಟಡಗಳಿಗೆ, ಖಾಲಿ ನಿವೇಶನಗಳಿಗೆ ತೆರಿಗೆಯನ್ನು ಪಾಲಿಕೆ ಹಾಕಿದೆ. ಹಾಗಂತ ಇದು ಪಾಲಿಕೆಯೇ ನಿಗದಿಪಡಿಸಿ ಹಾಕಿದೆ ಅಂತೇನೂ ಇಲ್ಲ. ರಾಜ್ಯ ಸರ್ಕಾರದ ನಿಯಮಾವಳಿಯಂತೆ ಹಾಕಿರುವ ತೆರಿಗೆ ಇದು. ಇದರಿಂದಾಗಿ ನಿರೀಕ್ಷೆ ಮಾಡಲಾರದಷ್ಟು ತೆರಿಗೆ ಏರಿಕೆಯಾಗಿದೆ. ಎರಡು, ಮೂರು ಪಟ್ಟು ತೆರಿಗೆ ಹೆಚ್ಚಳವಾಗಿದೆ. ಕಳೆದ ವರ್ಷ ₹2-3 ಸಾವಿರ ಕಟ್ಟುತ್ತಿದ್ದ ತೆರಿಗೆದಾರ ಅದೇ ಆಸ್ತಿಗೆ ಈ ವರ್ಷ ₹10-12 ಸಾವಿರ ಕಟ್ಟುವಂತಾಗಿದೆ.

ಯೂಜರ್ಸ್‌ ಚಾರ್ಜ್‌, ಸೆಸ್‌: ಇದರೊಂದಿಗೆ ಯುಜಿಡಿ ಬಳಕೆದಾರರ ಶುಲ್ಕ (ಯುಜಿಡಿ ಯೂಜರ್ಸ್‌ ಚಾರ್ಜ್‌) ಹಾಗೂ ಘನತ್ಯಾಜ್ಯ ನಿರ್ವಹಣೆ ಮೇಲಿನ ಉಪಕರ (ಸೆಸ್‌), ಘನತ್ಯಾಜ್ಯ ಬಳಕೆದಾರರ ಶುಲ್ಕಗಳನ್ನು ತೆರಿಗೆದಾರರ ಮೇಲೆ ಹಾಕಿತ್ತು. ಮೊದಲೇ 2-3 ಪಟ್ಟು ಹೆಚ್ಚಿನ ತೆರಿಗೆ, ಅದರೊಂದಿಗೆ ಯೂಜರ್ಸ್‌ ಚಾರ್ಜ್‌, ಸೆಸ್‌ ಹಾಕಿದ್ದಕ್ಕೆ ಸಾರ್ವಜನಿಕರ ಕಣ್ಣು ಕೆಂಪಾಗಿಸಿತ್ತು. ಪಾಲಿಕೆ ಮೇಲೆ ಎಲ್ಲರೂ ಹರಿಹಾಯಲು ಶುರು ಮಾಡಿದ್ದರು.

ಪಾಲಿಕೆ ವಿರುದ್ಧ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ) ನೇತೃತ್ವದಲ್ಲಿ ಸಂಘ ಸಂಸ್ಥೆಗಳು ಹೋರಾಟಕ್ಕೆ ಕೂಡ ಸಿದ್ಧವಾಗಿದ್ದವು. ಕೆಸಿಸಿಐ ಟ್ಯಾಕ್ಸ್‌ ಕಟ್ಟಬೇಡಿ ಎಂದು ಕರೆ ನೀಡಿದ್ದು ಆಗಿತ್ತು. ಸಾರ್ವಜನಿಕರ, ಕೆಸಿಸಿಐ ಒತ್ತಡಕ್ಕೆ ಮಣಿದು ಬಳಕೆದಾರರ ಶುಲ್ಕ, ಸೆಸ್‌ಗಳನ್ನು ರದ್ದುಗೊಳಿಸಲು ಪಾಲಿಕೆ ನಿರ್ಧರಿಸಿತ್ತು. ಆದರೆ, ಎಸ್‌ಆರ್‌ ವ್ಯಾಲ್ಯೂ ಮೇಲೆ ಹಾಕಿರುವ ತೆರಿಗೆ ಮಾತ್ರ ರದ್ದುಗೊಳಿಸಲು ಬರಲ್ಲ ಎಂದು ಸ್ಪಷ್ಟಪಡಿಸಿತ್ತು.

ಇದಕ್ಕೆ ಒಪ್ಪಿಕೊಂಡಿದ್ದ ಕೆಸಿಸಿಐ ಟ್ಯಾಕ್ಸ್‌ ತುಂಬಬೇಡಿ ಎಂಬ ತನ್ನ ಕರೆಯನ್ನು ಹಿಂಪಡೆದು ಟ್ಯಾಕ್ಸ್‌ ಪಾವತಿಸಿ ಎಂದು ಜನರಿಗೆ ಕರೆ ನೀಡಿತ್ತು.

ಈಗೇನು ಸಮಸ್ಯೆ: ಆದರೆ, ಈ ಸೆಸ್‌ ಹಾಗೂ ಶುಲ್ಕ ಕಡಿತ ಈ ವರ್ಷಕ್ಕೆ ಮಾತ್ರ ಸೀಮಿತ. ಮುಂದಿನ ವರ್ಷ ಮತ್ತೆ ಜನರಿಗೆ ತೆರಿಗೆಯ ಜತೆಗೆ ಸೆಸ್ಸೂ ಹಾಕಬೇಕಾಗುತ್ತೆ. ಶುಲ್ಕವನ್ನೂ ವಿಧಿಸಬೇಕಾಗುತ್ತದೆ ಎಂಬುದನ್ನು ನಂತರ ಪಾಲಿಕೆ ಕೆಸಿಸಿಐಗೆ ತಿಳಿಸಿತ್ತು. ಇದರಿಂದ ಕೆಸಿಸಿಐ ಕೂಡ ಅಸಮಾಧಾನ ವ್ಯಕ್ತಪಡಿಸಿತ್ತು.

ಬಳಿಕ ಪಾಲಿಕೆಯ ಸಾಮಾನ್ಯಸಭೆಯಲ್ಲಿ ಈ ಕುರಿತು ಚರ್ಚಿಸಿ ಕಾಯಂ ಆಗಿ ಸೆಸ್‌, ಶುಲ್ಕ ಇಲ್ಲದಂತೆ ಠರಾವು ಪಾಸ್‌ ಮಾಡಿ ಸರ್ಕಾರಕ್ಕೆ ಕಳುಹಿಸುವುದಾಗಿ ಮೇಯರ್‌ ರಾಮಪ್ಪ ಬಡಿಗೇರ ಸೇರಿದಂತೆ ಇತರೆ ಹಿರಿಯ ಸದಸ್ಯರು ಕೆಸಿಸಿಐಗೆ ಹೇಳಿದ್ದರು. ಅದಕ್ಕೆ ಕೆಸಿಸಿಐ ಸಮಾಧಾನವಾಗಿತ್ತು. ಜತೆಗೆ ನೀವು ಠರಾವು ಪಾಸ್‌ ಮಾಡಿದ ನಂತರ ಕೆಸಿಸಿಐ ಕೂಡ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿತ್ತು.

ಇದೀಗ ಪಾಲಿಕೆಯ ಸಾಮಾನ್ಯಸಭೆ ಏ. 29ರಂದು ನಡೆಯಲಿದೆ. ಅಲ್ಲಿ ಸೆಸ್‌ ಮತ್ತು ಶುಲ್ಕ ಇಳಿಕೆ ಕುರಿತಂತೆ ಚರ್ಚಿಸಿ ಸರ್ಕಾರಕ್ಕೆ ಠರಾವು ಪಾಸ್‌ ಮಾಡಿ ಕಳುಹಿಸುತ್ತದೆಯೇ? ಅಥವಾ ಬಿಸೋ ದೊಣ್ಣೆಯಿಂದ ತಪ್ಪಿಸಿಕೊಂಡರಾಯ್ತು ಎಂಬಂತೆ ಮೇಯರ್‌ ಹಾಗೆ ಹೇಳಿದ್ದಾರೆಯೇ? ಎಂಬುದು ಇಂದಿನ ಸಾಮಾನ್ಯ ಸಭೆಯಲ್ಲಿ ಗೊತ್ತಾಗಲಿದೆ. ಈಗಿನ ಮಾಹಿತಿ ಪ್ರಕಾರ ಹೆಚ್ಚುವರಿ ವಿಷಯ ಪಟ್ಟಿಯಲ್ಲಿ ಈ ವಿಷಯವನ್ನು ಚರ್ಚೆಗೆ ತೆಗೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಪಾಲಿಕೆ ಚರ್ಚಿಸದೇ ಇದ್ದರೆ ಕೆಸಿಸಿಐ ಮುಂದಿನ ಹೆಜ್ಜೆ ಏನು? ಎಂಬುದು ಕೂಡ ಸಾರ್ವಜನಿಕರಲ್ಲಿ ಮನೆ ಮಾಡಿರುವ ಪ್ರಶ್ನೆ.