ಉಡುಪಿ: ಯಕ್ಷಗಾನ ಕ್ಷೇತ್ರವು ಇಂದು ವಿಶಾಲವಾದ ವ್ಯಾಪ್ತಿಯನ್ನು ಹೊಂದಿದೆಯಾದರೂ ರಂಗ ಪ್ರದರ್ಶನದಲ್ಲಿ ಕಾಣಿಸಿಕೊಳ್ಳುವ ಪರಿವರ್ತನೆಗಳು ಮೂಲ ಯಕ್ಷಗಾನಕ್ಕಿಂತ ಭಿನ್ನವಾಗಿದೆ. ಸರ್ವಾಂಗ ಸುಂದರ ಯಕ್ಷಗಾನ ಕಲೆಯ ಸ್ವರೂಪ ಉಳಿಸುವಲ್ಲಿ ಮೇಳದ ವ್ಯವಸ್ಥಾಪಕರು ಕಲಾವಿದರು ಮತ್ತು ಪ್ರೇಕ್ಷಕರು ವಿಮರ್ಶಿಸಿ ಮುಂದುವರಿಯುವ ಅಗತ್ಯವಿದೆ ಎಂದು ಮಂಗಳೂರು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಅಭಿಪ್ರಾಯಪಟ್ಟಿದ್ದಾರೆ. ಹಂಗಾರಕಟ್ಟೆಯ ಗುಂಡ್ಮಿ ಐರೋಡಿ ಸದಾನಂದ ಹೆಬ್ಬಾರ್ ರಂಗಮಂಟಪದಲ್ಲಿ ನಡೆದ ನೆನಪಿನಂಗಳದಲ್ಲಿ ಕಾಳಿಂಗ ನಾವುಡ ಮತ್ತು ಸುಬ್ರಹ್ಮಣ್ಯ ಧಾರೇಶ್ವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭಾಗವತ ಸುಬ್ರಹ್ಮಣ್ಯಧಾರೇಶ್ವರರು ಪ್ರಸಂಗಗಳ ನಿರ್ವಹಣೆಯಲ್ಲಿ ಪ್ರಬುದ್ಧತೆ ಸಾಧಿಸಿದ್ದರಲ್ಲದೇ ಧ್ವನಿವರ್ಧಕದ ಬಳಕೆ ಸಮರ್ಪಕವಾಗಿ ಮಾಡುತ್ತಿದ್ದ ಪರಿಣಾಮವಾಗಿ ಅವರ ಭಾಗವತಿಕೆ ಸೊಗಸಾಗಿತ್ತು. ಬಡಗುತಿಟ್ಟಿನ ಭಾಗವತಿಕೆಯಲ್ಲಿ ಧಾರೇಶ್ವರರು ತಮ್ಮದೇ ಆದ ಶೈಲಿಯ ಪ್ರವರ್ತಕರಾಗಿದ್ದಾರೆಂದು ನಿವೃತ್ತ ಅಧ್ಯಾಪಕ , ಲೇಖಕ ಜಿ .ಹರಿಕೃಷ್ಣ ಹೊಳ್ಳ ಬ್ರಹ್ಮಾವರ ತಿಳಿಸಿದರು. ನಾವುಡರು ಅಲ್ಪಾವಧಿಯಲ್ಲಿ ಪ್ರಸಂಗ ರಚನೆ, ರಂಗ ನಿರ್ದೇಶನ ಮತ್ತು ಜನಪ್ರಿಯತೆಯಲ್ಲಿ ಅನನ್ಯ ಸಾಧನೆಯನ್ನು ಮಾಡಿದ ವಿಶಿಷ್ಟ ಕಲಾವಿದನೆಂದು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ, ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಕಲಾ ಟ್ರಸ್ಟ್ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ತಿಳಿಸಿದರು.ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಯಕ್ಷ ಗುರು ದೇವದಾಸ ರಾವ್ ಕೂಡ್ಲಿ ಅವರನ್ನು ಸನ್ಮಾನಿಸಲಾಯಿತು. ಪ್ರಸಂಗ ಕರ್ತ, ಕಲಾವಿದ ಡಾ. ಶಿವಕುಮಾರ್ ಅಳಗೋಡು ಅಭಿನಂದನಾ ನುಡಿಗಳನ್ನಾಡಿದರು. ಕವಿ ಚಾರ ಪ್ರದೀಪ ಹೆಬ್ಬಾರ್ ಸನ್ಮಾನ ಪತ್ರ ವಾಚಿಸಿದರು. ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ಕೆ ತಾರಾನಾಥ ಹೊಳ್ಳ ಶುಭ ಹಾರೈಸಿದರು. ಯಕ್ಷಗಾನ ಕಲಾ ಕೇಂದ್ರದ ಕಾರ್ಯದರ್ಶಿ ಎ. ರಾಜಶೇಖರ್ ಹೆಬ್ಬಾರ್, ಶಿಕ್ಷಕ, ಕಲಾವಿದ ನಾಗರಾಜ್ ಆಚಾರ್ಯ ವಡ್ಡರ್ಸೆ, ವಿನುತ ಆಚಾರ್, ಉಮೇಶ್ ಆಚಾರ್ಯ ಸಾಲಿಗ್ರಾಮ ಶಿಕ್ಷಕಿ ಸವಿತಾ, ಉಪನ್ಯಾಸಕಿ ಭಾರತಿ ಯುಂ. ಯಲ್ ಗೇರುಕಟ್ಟೆ ಇದ್ದರು.

ಭಾಗವತದ್ವಯರ ಭಾವಚಿತ್ರಗಳಿಗೆ ವೇದಿಕೆಯಲ್ಲಿದ್ದ ಗಣ್ಯರು ಪುಷ್ಪಾರ್ಚನೆ ಮಾಡಿದರು. ಶ್ರೀ ಮಹಿಷ ಮರ್ದಿನಿ ಯಕ್ಷಕಲಾ ಪ್ರತಿಷ್ಠಾನ ರಿ. ಚಾರ - ಹೆಬ್ರಿ ಕಾರ್ಯಕ್ರಮವನ್ನು ಸಂಘಟಿಸಿತ್ತು. ಪ್ರದೀಪ ಹೆಬ್ಬಾರ ಸ್ವಾಗತಿಸಿದರು. ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ನಿರೂಪಿಸಿದರು. ರವಿರಾಜ್ ಬೈಕಾಡಿ ವಂದಿಸಿದರು.ತಾಳಮದ್ದಳೆ: ಚಾರ ಪ್ರದೀಪ ಹೆಬ್ಬಾರ್ ವಿರಚಿತ ಉಲೂಪಿ ಕಲ್ಯಾಣ ಪ್ರಸಂಗದ ತಾಳಮದ್ದಳೆ ಜರಗಿತು. ಭಾಗವತರಾಗಿ ಶಿವಶಂಕರ ಭಟ್ ಹರಿಹರಪುರ ಹಿಮ್ಮೇಳದಲ್ಲಿ ದೇವದಾಸ್ ರಾವ್ ಕೂಡ್ಲಿ, ರಾಮಕೃಷ್ಣ ಮಂದರ್ತಿ, ಪ್ರದ್ಯುಮ್ನ, ಸ್ಕಂದ ಅರ್ಥಧಾರಿಗಳಾಗಿ ದಿವಾಕರ ಆಚಾರ್ಯ ಗೇರುಕಟ್ಟೆ, ಆನಂದ ಭಟ್ ಕೆಕ್ಕಾರು, ಡಾ. ಶಿವಕುಮಾರ ಅಳಗೋಡು, ಆದಿತ್ಯ ಹೆಗಡೆ ಯಡೂರು , ಚಾರ ಪ್ರದೀಪ ಹೆಬ್ಬಾರ್ ಭಾಗವಹಿಸಿದ್ದರು.