ಕಾರು ಗುದ್ದಿಸಿ ಕೊಲೆ ಮಾಡಿ ಅಪಘಾತ ನಾಟಕ ಸೃಷ್ಟಿಸಿದ್ದವನ ಬಂಧನ

| Published : Mar 27 2024, 02:03 AM IST

ಕಾರು ಗುದ್ದಿಸಿ ಕೊಲೆ ಮಾಡಿ ಅಪಘಾತ ನಾಟಕ ಸೃಷ್ಟಿಸಿದ್ದವನ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಅಪರಿಚಿತ ಕಾರು ಡಿಕ್ಕಿಯಾಗಿ ಅವರು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದ್ದ ಗೋಪಿ ಎಂಬ ವ್ಯಕ್ತಿಯ ಸಾವಿನ ತನಿಖೆ ನಡೆಸಿದಾಗ ಅವರದ್ದು ಕೊಲೆ ಎಂಬುದು ಗೊತ್ತಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚೆಗೆ ಮದ್ಯದ ಅಮಲಿನಲ್ಲಿ ಸ್ನೇಹಿತನ ಮೇಲೆ ಕಾರು ಹತ್ತಿಸಿ ಹತ್ಯೆಗೈದು ಬಳಿಕ ಅಪಘಾತದ ನಾಟಕ ಸೃಷ್ಟಿಸಿ ಪರಾರಿಯಾಗಿದ್ದ ವ್ಯಕ್ತಿಯನ್ನು ತಲಘಟ್ಟಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೋಣನಕುಂಟೆ ನಿವಾಸಿ ಮುನಿಕೃಷ್ಣ ಬಂಧಿತರಾಗಿದ್ದು, ಕೆಲ ದಿನಗಳ ಹಿಂದೆ ಹರಿನಗರದ ಆಟೋ ಚಾಲಕ ಗೋಪಿ (55) ಅವರನ್ನು ಮುನಿಕೃಷ್ಣ ಹತ್ಯೆ ಮಾಡಿದ್ದ. ಕೆಲ ದಿನಗಳ ಹಿಂದೆ ವಾಜರಹಳ್ಳಿ 100 ಅಡಿ ರಸ್ತೆಯಲ್ಲಿ ಆಟೋ ಚಾಲಕ ಗೋಪಿ ಮೃತದೇಹ ಪತ್ತೆಯಾಗಿತ್ತು. ಆರಂಭದಲ್ಲಿ ಅಪರಿಚಿತ ಕಾರು ಡಿಕ್ಕಿಯಾಗಿ ಅವರು ಮೃತಪಟ್ಟಿರಬಹುದು ಎಂದು ಶಂಕಿಸಲಾಯಿತು. ಆದರೆ ತನಿಖೆ ನಡೆಸಿದಾಗ ಗೋಪಿ ಅವರದ್ದು ಕೊಲೆ ಎಂಬುದು ಗೊತ್ತಾಯಿತು ಎಂದು ದಕ್ಷಿಣ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜ್ ತಿಳಿಸಿದ್ದಾರೆ.

ಆನಂತರ ಅಪಘಾತ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಬದಲಾಯಿಸಿ ತನಿಖೆ ಮುಂದುವರೆಸಿದಾಗ ಆರೋಪಿ ಪತ್ತೆಯಾಗಿದ್ದಾನೆ. ಪ್ರಕರಣವು ತಲಘಟ್ಟಪುರ ಠಾಣೆಗೆ ವರ್ಗಾವಣೆಯಾಗಿದೆ ಎಂದು ಡಿಸಿಪಿ ಹೇಳಿದ್ದಾರೆ.

ಬಾರ್‌ನಲ್ಲಿ ಗಲಾಟೆ:

ಮಾರ್ಚ್‌ 23ರಂದು ಬಾರ್‌ಗೆ ಮದ್ಯ ಸೇವಿಸಿ ತೆರಳಿದ್ದಾಗ ಗೋಪಿಗೆ ಅದೇ ಬಾರ್‌ನಲ್ಲಿ ಗೆಳೆಯರ ಜತೆ ಮದ್ಯ ಸೇವಿಸುತ್ತಿದ್ದ ಮುನಿಕೃಷ್ಣನ ಪರಿಚಯವಾಗಿದೆ. ಬಳಿಕ ಎಲ್ಲರೂ ಪರಸ್ಪರ ಮಾತನಾಡುತ್ತ ಮದ್ಯಪಾನ ಮಾಡಿದ್ದರು. ಆ ವೇಳೆ ಮದ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಮುನಿಕೃಷ್ಣ ಹಾಗೂ ಗೋಪಿ ಮಧ್ಯೆ ಜಗಳ ಶುರುವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಪರಸ್ಪರ ಕೈ-ಕೈ ಮಿಲಾಯಿಸಿದ್ದರು. ಚಪ್ಪಲಿಯಿಂದ ಮುನಿಕೃಷ್ಣನಿಗೆ ಹೊಡೆಯಲು ಗೋಪಿ ಮುಂದಾಗಿದ್ದ. ಕೊನೆಗೆ ಗೋಪಿಯನ್ನು ಸಮಾಧಾನಪಡಿಸಿ ಆತನ ಸ್ನೇಹಿತ ಕರೆದುಕೊಂಡು ಹೊರಟಿದ್ದರು. ಈ ಗಲಾಟೆಯಿಂದ ಕೆರಳಿದ ಮುನಿಕೃಷ್ಣ, ತಮ್ಮ ಕಾರಿನಲ್ಲಿ ಗೋಪಿಯನ್ನು ಹಿಂಬಾಲಿಸಿಕೊಂಡು ಬಂದು ಗುದ್ದಿಸಿ ಪರಾರಿಯಾಗಿದ್ದ. ತೀವ್ರ ಗಾಯಗೊಂಡು ಗೋಪಿ ಮೃತಪಡುತ್ತಿದ್ದಂತೆ ಮೃತನ ಸ್ನೇಹಿತ ಸಹ ಓಡಿ ಹೋಗಿದ್ದ. ಮೃತನ ಅಂಗಿಯ ಮೇಲಿದ್ದ ಟೈಲರ್ ಸ್ಟಿಕ್ಕರ್‌ ಮೂಲಕ ಗೋಪಿ ಹೆಸರು ಮತ್ತು ವಿಳಾಸ ಪತ್ತೆ ಹಚ್ಚಲಾಯಿತು. ಆನಂತರ ಘಟನಾ ಸ್ಥಳದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕೊಲೆ ಎಂಬುದು ಗೊತ್ತಾಯಿತು ಎಂದು ಡಿಸಿಪಿ ವಿವರಿಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ್ದ ಹಂತಕನ ಸ್ನೇಹಿತ!

ಘಟನೆ ಬಳಿಕ ಪೊಲೀಸರ ಬಂಧನ ಭೀತಿಯಿಂದ ಮುನಿಕೃಷ್ಣನ ಸ್ನೇಹಿತ ಮಾಲೂರಿ ತೆರಳಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಆತನನ್ನು ರಕ್ಷಿಸಿ ಕುಟುಂಬ ಸದಸ್ಯರು ಆಸ್ಪತ್ರೆಗೆ ದಾಖಲಿಸಿದ್ದರಿಂದ ಪ್ರಾಣಪಾಯದಿಂದ ಪಾರಾಗಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.