ಸಮುದಾಯ ಮಳೆ ಕೋಯ್ಲು ವ್ಯವಸ್ಥೆಗೆ ಜಲಮಂಡಳಿ ಚಿಂತನೆ

| Published : Mar 27 2024, 02:02 AM IST

ಸಾರಾಂಶ

ನೀರು ವ್ಯರ್ಥವಾಗದಂತೆ ಅಮೂಲ್ಯ ಮಳೆ ನೀರನ್ನ ಸಂಗ್ರಹಿಸಿ ಅದನ್ನ ಅಂತರ್ಜಲ ವೃದ್ದಿಗೆ ಬಳಸಿಕೊಳ್ಳಲು ಕಮ್ಯೂನಿಟಿ ರೈನ್‌ ಹಾರ್ವೆಸ್ಟಿಂಗ್‌ ಯೋಜನೆಯನ್ನು ಜಲಮಂಡಳಿ ರೂಪಿಸಲು ಮುಂದಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಅಂತರ್ಜಲ ವೃದ್ಧಿಗೆ ಹಾಗೂ ಕೆರೆಗಳಿಗೆ ಮಳೆ ನೀರು ತುಂಬಿಸುವ ಉದ್ದೇಶದಿಂದ ಬೆಂಗಳೂರು ಜಲ ಮಂಡಳಿಯಿಂದ ಸಮುದಾಯ ಮಳೆ ಕೋಯ್ಲು (ಕಮ್ಯೂನಿಟಿ ರೈನ್‌ ಹಾರ್ವೆಸ್ಟಿಂಗ್‌) ಪ್ರಾರಂಭಿಸಲು ಚಿಂತಿಸಿದೆ.

ನಗರದ ಕಟ್ಟಡಗಳಲ್ಲಿ ಮಳೆ ನೀರು ಕೋಯ್ಲು ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಆದರೆ, ಕಟ್ಟಡಗಳಲ್ಲಿನ ಜಾಗದ ಕೊರತೆ ಹಾಗೂ ನಿರ್ಲಕ್ಷದಿಂದ ಅನುಷ್ಠಾನ ಸಾಧ್ಯವಾಗಿಲ್ಲ. ಬಹುತೇಕ ಕಡೆಗಳಲ್ಲಿ ಕೇವಲ ಅಗತ್ಯ ಅನುಮತಿ ಪಡೆದುಕೊಳ್ಳಲು ಮಳೆ ನೀರು ಕೊಯ್ಲು ಪದ್ದತಿ ಅಳವಡಿಸಿದ್ದು, ಮಳೆ ನೀರನ್ನ ಸಂಗ್ರಹಿಸಿ ಒಳಚರಂಡಿಗೆ ನೇರವಾಗಿ ಹರಿಯಬಿಡಲಾಗುತ್ತಿದೆ. ಇದರಿಂದ ಮಳೆಗಾಲದಲ್ಲಿ ಒಳಚರಂಡಿ ವ್ಯವಸ್ಥೆ ಒತ್ತಡಕ್ಕೆ ಒಳಗಾಗಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ಅಲ್ಲದೇ, ಇದರಿಂದ ಅಮೂಲ್ಯ ನೀರು ವ್ಯರ್ಥವಾಗಿ ಹರಿದು ಚರಂಡಿಪಾಲಾಗುತ್ತಿದೆ. ನೀರು ವ್ಯರ್ಥವಾಗದಂತೆ ಅಮೂಲ್ಯ ಮಳೆ ನೀರನ್ನ ಸಂಗ್ರಹಿಸಿ ಅದನ್ನ ಅಂತರ್ಜಲ ವೃದ್ದಿಗೆ ಬಳಸಿಕೊಳ್ಳಲು ಕಮ್ಯೂನಿಟಿ ರೈನ್‌ ಹಾರ್ವೆಸ್ಟಿಂಗ್‌ ಯೋಜನೆಯನ್ನು ಜಲಮಂಡಳಿ ರೂಪಿಸಲು ಮುಂದಾಗಿದೆ. ಮೊದಲ ಹಂತದಲ್ಲಿ ವರ್ತೂರು, ಬೆಳ್ಳಂದೂರು ಭಾಗದಲ್ಲಿ ಈ ಯೋಜನೆಯನ್ನ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮಂಡಳಿ ಚಿಂತನೆ ನಡೆಸಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ। ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ.

ಕುಡಿಯುವ ನೀರಿನ ಪೂರೈಕೆ ಘಟಕಕ್ಕೆ ನಿರಂತರ ವಿದ್ಯುತ್‌

ಪೂರೈಕೆಗೆ ಬೆಸ್ಕಾಂ ಸೂಚನೆಕನ್ನಡಪ್ರಭ ವಾರ್ತೆ, ಬೆಂಗಳೂರುಬೆಂಗಳೂರು ನಗರದಲ್ಲಿ ನೀರಿನ ಅಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಹಾಗೂ ಜಲಮಂಡಳಿಯ ಕುಡಿಯುವ ನೀರು ಪೂರೈಕೆ ಘಟಕಗಳಿಗೆ ನಿರಂತರ ವಿದ್ಯುತ್ ಪೂರೈಸಲು ಬೆಸ್ಕಾಂ ಸೂಚನೆ ನೀಡಿದೆ.ಬೇಸಿಗೆ ಹಿನ್ನೆಲೆಯಲ್ಲಿ ವಿದ್ಯುತ್‌ ಪೂರೈಕೆಗೂ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ ಕುಡಿಯುವ ನೀರಿನ ಘಟಕಗಳ ವ್ಯಾಪ್ತಿಯಲ್ಲಿ ಅನಿಯಮಿತ ವಿದ್ಯುತ್‌ ಕಡಿತದಿಂದ ಕುಡಿಯುವ ನೀರಿನ ಪೂರೈಕೆಗೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಹೆಚ್ಚು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ್ ಬೀಳಗಿ ಅವರು ಅಧಿಕಾರಿಗಳಿಗೆ ಈ ನಿರ್ದೇಶನ ನೀಡಿದ್ದಾರೆ.ನೀರಿನ ಪೂರೈಕೆ ಸಮಯದಲ್ಲಿ ಬೆಸ್ಕಾಂನ ವಿದ್ಯುತ್‌ ಮಾರ್ಗ ಅಥವಾ ವಿದ್ಯುತ್‌ ಕೇಂದ್ರಗಳಲ್ಲಿ ಯಾವುದೇ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳುವಂತಿಲ್ಲ. ವಿದ್ಯುತ್ ಪೂರೈಕೆ ಅಡಚಣೆಯಿಂದಾಗಿ ನೀರು ಪೂರೈಸಿಲ್ಲ ಎಂಬ ದೂರು ಬರದಂತೆ ಮುನ್ನೆಚ್ಚರಿಕೆ ವಹಿಸಬೇಕು. ನಿರಂತರ ವಿದ್ಯುತ್ ಪೂರೈಸಲು ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳ ಜೊತೆ ಬೆಸ್ಕಾಂ ಅಧಿಕಾರಿಗಳು ಸಮನ್ವಯತೆ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.