ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಆಳುವ ಬ್ರಿಟಿಷರಿಗೆ ಸಾಲ ಕೊಟ್ಟ ಸಮಾಜ ಬಣಜಿಗ ಸಮಾಜ. ಅಂದ ಮಾತ್ರಕ್ಕೆ ನಮ್ಮ ಮಕ್ಕಳ ಭವಿಷ್ಯತ್ತಿಗಾಗಿ ಕೈಕಟ್ಟಿ ಕೂಡುವಂತಿಲ್ಲ. ಕೌಶಲ್ಯ ಪೂರ್ಣ ವೃತ್ತಿಪರ ವಿಚಾರಗಳನ್ನು ಮಕ್ಕಳಲ್ಲಿ ಬಿತ್ತಿದಾಗ ಭವಿಷ್ಯದ ದಿನಗಳಲ್ಲಿ ನಮ್ಮನ್ನು ನಾವು ಕಾಪಾಡಿಕೊಂಡಂತಾಗುತ್ತದೆ ಎಂದು ಹೈದರಾಬಾದಿನ ಗೀತಂ ವಿಶ್ವವಿದ್ಯಾಲಯದ ಉಪಕುಲಪತಿ ಬಸವರಾಜ ಕಟ್ಟಿಗೇರಿ ಹೇಳಿದರು.ಅವರು ಚರಂತಿಮಠದ ಶಿವಾನುಭವ ಮಂಟಪದಲ್ಲಿ ನಡೆದ ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಘಟಕದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಅಂಕಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ಮತ್ತು ಆತನ ಸಾಮರ್ಥ್ಯದ ಮಾನದಂಡವಲ್ಲ. ಅಂಕಗಳು ಉನ್ನತ ಶಿಕ್ಷಣಕ್ಕಾಗಿ ಪಡೆಯುವ ಒಂದು ಕೇವಲ ಟಿಕೆಟ್ ಅಷ್ಟೇ ಎಂದು ವ್ಯಾಖ್ಯಾನಿಸಿದರು.
ಪ್ರತಿಭಾ ಪುರಸ್ಕಾರ ದಂತಹ ಕಾರ್ಯಕ್ರಮ ಯಾವುದೇ ಸಮಾಜ ತನ್ನ ಪೀಳಿಗೆಯ ಭವಿಷ್ಯಕ್ಕಾಗಿ ಮಾಡುವ ಉನ್ನತ ಕಾರ್ಯವಾಗಿದೆ. ಬಣಜಿಗೆ ಸಮಾಜ ಮಾಡುವ ಈ ಕೆಲಸದೊಂದಿಗೆ ವೃತ್ತಿಪರ ಕೌಶಲ್ಯ ಪೂರ್ಣ ಮಾರ್ಗದರ್ಶನ ಕೊಡುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ತಾವು ಸಹಕಾರ ನೀಡುವುದಾಗಿ ಹೇಳಿದರು.ಶಾಸಕ ಉಮೇಶ್ ಮೇಟಿ ಮಾತನಾಡಿ, ಬಹುದಿನಗಳಿಂದ ಬಣಜಿಗ ಸಮಾಜದ ಬೇಡಿಕೆಗೆ ನಮ್ಮ ಸ್ಪಂದನೆ ಇದೆ. ಬಿಟಿಡಿಎ ಅಧ್ಯಕ್ಷ ಪ್ರಕಾಶ್ ತಪಶೆಟ್ಟಿ ಅವರೊಂದಿಗೆ ಚರ್ಚಿಸಿ ಬಣಜಿಗ ಸಂಘಕ್ಕೆ ನಿವೇಶನ ನೀಡುವ ಭರವಸೆ ನೀಡಿದರು.
ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಮಾತನಾಡಿ, ಬಣಜಿಗ ಸಮಾಜದ ದಿವಂಗತ ಜೆ.ಎಚ್.ಪಟೇಲರು ಬಾಗಲಕೋಟೆಗೆ ಅನನ್ಯ ಉಪಕಾರ ಮಾಡಿದ್ದಾರೆ. ಆದರೆ, ಬಾಗಲಕೋಟೆಯ ಜನರಿಂದ ಅವರ ಹೆಸರಿನಲ್ಲಿ ಸ್ಮರಣೆಗಾಗಿ ಒಂದು ಸ್ಮಾರಕವನ್ನು ಕಟ್ಟಲಿಲ್ಲ ಎಂದು ವಿಷಾದಿಸಿದರಲ್ಲದೇ ಮುಂದಿನ ವರ್ಷದೊಳಗಾಗಿ ಬಣಜಿಗ ಸಂಘಕ್ಕೆ ನಿವೇಶನವೊಂದನ್ನು ಕೊಡುವುದಾಗಿ ಭರವಸೆ ನೀಡಿದರು. ಬಸವೇಶ್ವರ ಸಹಕಾರಿ ಸಂಘ ಮತ್ತು ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಬೆಳವಣಿಗೆಯಲ್ಲಿಯೂ ಬಣಜಿಗ ಸಮಾಜದ ಕೊಡುಗೆ ಅನನ್ಯವಾಗಿದೆ. ಸಹಕಾರಿ ಸಂಘದಲ್ಲಿ ಕಳೆದ 42 ವರ್ಷಗಳಿಂದ ಅಧ್ಯಕ್ಷನಾಗಿ ಮತ್ತು ನಗರಸಭೆಯ ಯಶಸ್ವಿ ಅಧ್ಯಕ್ಷನಾಗಿ ಕೆಲಸ ಮಾಡಲು ಸಮಾಜದ ಕೊಡುಗೆ ಅನನ್ಯವಾಗಿದೆ ಎಂದು ಸ್ಮರಿಸಿದರಲ್ಲದೇ ಬಸವೇಶ್ವರ ಬ್ಯಾಂಕಿನಿಂದ ಕೊಡ ಮಾಡುವ ವಿದ್ಯಾ ಚೇತನ ಕಾರ್ಯಕ್ರಮದ ಲಾಭವನ್ನು ಸಮಾಜದ ಮಕ್ಕಳು ಪಡೆದುಕೊಳ್ಳಬೇಕು ಎಂದರು.
ಬೂಮಾ ಅಧ್ಯಕ್ಷ ರವಿ ಕುಮಟಗಿ ಮಾತನಾಡಿ, ಬಾಗಲಕೋಟೆ ಮಾರುಕಟ್ಟೆ ಮುಳಗಡೆಯಿಂದಾಗಿ ಹಾಳಾಗಿದೆ. ಮತ್ತೆ ಪುರುತ್ಥಾನಗೊಳ್ಳಲು ಒಂದೇ ಕಡೆಗೆ 200 ಎಕರೆ ಜಾಗೆಯ ಬೇಡಿಕೆಯನ್ನಿಟ್ಟುಕೊಂಡು ಹೋರಾಟ ನಡೆಸುತ್ತಿದ್ದೇವೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಪೈಪೋಟಿ ಅನಿವಾರ್ಯವಾಗಿದೆ. ಜೀವನಕ್ಕೆ ಬದುಕಬೇಕು. ಬದುಕಲು ದುಡ್ಡು ಬೇಕು. ಅದಕ್ಕಾಗಿ ಮಾರುಕಟ್ಟೆಯೂ ತನ್ನ ಸ್ವರೂಪವನ್ನು ಬದಲಿಸುತ್ತಲೇ ಇದೆ. ಇಂಥ ಸಂದರ್ಭದಲ್ಲಿ ಮಾರಾಟದೊಂದಿಗೆ ಉತ್ಪಾದನಾ ಕ್ಷೇತ್ರಕ್ಕೂ ಕಾಲಿರಿಸಬೇಕು. ಬಡವನಾಗಿ ಹುಟ್ಟುವುದು ತಪ್ಪಲ್ಲ, ಆದರೆ ಬಡವನಾಗಿ ಸಾಯುವುದು ತಪ್ಪು ಎಂದು ಮೈಕ್ರೊಸಾಫ್ಟ್ ಕಂಪನಿಯ ಬಿಲ್ಗೇಟ್ಸ್ ಅವರ ಮಾತನನ್ನು ಉಲ್ಲೇಖಿಸಿದರು.
ಸ್ವಾಗತ ಸಮಿತಿ ಅಧ್ಯಕ್ಷ ಆನಂದ ಜಿಗಜಿನ್ನಿ ಮಾತನಾಡಿ, ಪ್ರತಿಭೆ ಗುರುತಿಸಿ ಪುರಸ್ಕರಿಸುವ ಸಮಾಜದ ಜವಾಬ್ದಾರಿಯಾಗಿದೆ. ಬೆಳೆಯುವ ಮಕ್ಕಳಿಗೆ ಉತ್ತೇಜನ ಸಿಗಲಿ ಎಂದುಕೊಂಡು ಈ ಕೈಂಕರ್ಯವನ್ನು ನಡೆಸಿದ್ದೇವೆ. ರಾವಬಹದ್ದೂರು ವಾರದ ಮಲ್ಲಪ್ಪನವರು ಶಿಕ್ಷಣ ಸಂಸ್ಥೆಗಳಿಗಾಗಿ ಹಣ ಕೊಟ್ಟವರು ಅಷ್ಟೇ ಅಲ್ಲ; ಕಾಲ ಕಾಲಕ್ಕೆ ಬಣಜಿಗ ಸಮಾಜ ಎಷ್ಟೋ ಮಠಗಳನ್ನು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಹಣ ಕೊಟ್ಟು ಉಪಕರಿಸಿದೆ. ರಾಜ್ಯದಲ್ಲಿ ಏಳು ಮುಖ್ಯಮಂತ್ರಿಗಳನ್ನು ಕೊಟ್ಟಿರುವ ಬಣಜಿಗ ಸಮಾಜಕ್ಕೆ ತನ್ನದೇ ಆದಂಥ ಕಾಯಕ ನಿಷ್ಠೆಯ ಆದರ್ಶವಿದೆ. ಯುವಜನತೆ ಸಂಸ್ಕಾರವಂತರೂ ಮತ್ತು ವಿದ್ಯಾವಂತರು ಅಲ್ಲದೇ ಕಾಯಕನಿಷ್ಠರಾಗುವ ನಿಟ್ಟಿನಲ್ಲಿ ಎಲ್ಲ ಪಾಲಕರು ಸಂಸ್ಕಾರವನ್ನು ಕೊಡಬೇಕು ಎಂದರು.ವೀರಶೈವ ಲಿಂಗಾಯತ ಎಲ್ಲ ಪಂಗಡವರನ್ನು ಸೇರಿಸಿ ಲಿಂಗಪೂಜಾ ದೀಕ್ಷೆ ಮತ್ತು ಪೂಜಾ ಪದ್ಧತಿಯನ್ನು ಹೇಳಿಕೊಡುವ ಕಾರ್ಯಕ್ರಮವನ್ನು ಬಣಜಿಗ ಸಂಘದಿಂದ ಆಯೋಜಿಸಲಿದ್ದೇವೆ ಎಂದರು.
ಜಿಲ್ಲಾ ಬಣಜಿಗ ಸಂಘದ ಅಧ್ಯಕ್ಷ ಹೊಳೆಬಸು ಬಾಳಶೆಟ್ಟಿ ಅವರು ಸಂಘಟನೆಯ ಕುರಿತು ಮಾತನಾಡಿದರು. ಬಾಗಲಕೋಟೆ ತಾಲೂಕು ಬಣಜಿಗ ಸಂಘದ ಅಧ್ಯಕ್ಷ ವೀರಭದ್ರಪ್ಪ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸಿ ಪುರಸ್ಕರಿಸಲಾಯಿತು.ಸಂಗಮೇಶ ಅಂಗಡಿ, ಮುರುಗೇಶ ಶಿವನಗುತ್ತಿ, ಅರವಿಂದ ನಾವಲಗಿ, ಬಸವರಾಜ ಸೊಬರದ, ಮಹಾಂತೇಶ ಜೋಳದ, ವಿದ್ಯಾವತಿ ಹೆಬ್ಬಾಳ, ಮೇಘಾ ಆನಂದ ಜಿಗಜಿನ್ನಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಚಿಕ್ಕ ಬಾಲಕಿ ನವಮಿ ಹೊಸಕೇರಿ ಅವರಿಂದ ಪ್ರಾರ್ಥನೆ, ಅನುಷಾ ಅವರಿಂದ ಭರತನಾಟ್ಯ ಗಮನ ಸೆಳೆಯಿತು.ಸಮಾಜ ಹಾಗೂ ರಾಷ್ಟ್ರ, ಲೋಕೋಪಕಾರಕ್ಕಾಗಿ ವ್ಯಕ್ತಿ ತನ್ನನ್ನು ತೊಡಗಿಸಿಕೊಳ್ಳಬೇಕು ಎಂದು ಬಂಡಿವಾಡದ ಸದ್ಗುರು ಸಮರ್ಥ ಡಾ.ಎ.ಸಿ.ವಾಲಿ ನುಡಿದರು. ಅವರು ಬಣಜಿಗ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಲಾದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.ಸಂಸ್ಕಾರ ಮತ್ತು ಕಾಯಕನಿಷ್ಠೆ ಪ್ರತಿಯೊಬ್ಬರಲ್ಲಿ ಇರಬೇಕು ಹಾಗೆ ಕಾಯಕನಿಷ್ಠೆ ಇಟ್ಟುಕೊಂಡು ಬಂದಿದ್ದು ಬಣಜಿಗೆ ಸಮಾಜ. ಹೀಗಾಗಿ ಸಮಾಜದ ಎಲ್ಲ ವರ್ಗದವರೊಂದಿಗೆ ಸಮನಾಗಿ ಬೆರೆತು ಉತ್ತಮ ಬಾಂಧವ್ಯ ಬೆಳೆಸಿಕೊಂಡು ಬಂದಿದ್ದು ಬಳಜಿಗೆ ಸಮಾಜ. ಬಣಜಿಗ ಸಮಾಜ ಎಷ್ಟೇ ಆರ್ಥಿಕ ಸಬಲರಾದರು ಕೂಡ ವರ್ತಮಾನದ ದಿನದಲ್ಲಿ ಸವಾಲುಗಳನ್ನು ಎದುರಿಸುತ್ತಿದೆ. ಸಮಾಜದ ಭವಿಷ್ಯಕ್ಕಾಗಿ ಸಂಘಟನೆ ಅತ್ಯಗತ್ಯ. ದ್ವೇಷ ಬಿಡಿ, ಬೆಂಕಿ ಆರಿಸಿ ಸಾಲ ತೀರಿಸಿ ಈ ಮೂರು ಮಾತುಗಳನ್ನು ಪಾಲಿಸಿದಲ್ಲಿ ನಾವು ಉತ್ತಮ ವ್ಯಕ್ತಿತ್ವವನ್ನು ಹೊಂದುವುದರಲ್ಲಿ ಸಂಶಯವಿಲ್ಲ. ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದಿಂದ ನಿರ್ಮಿಸಲಾಗುವ ಕಟ್ಟುವ ಕಟ್ಟಡಕ್ಕೆ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ಹೆಸರ ನೀಡಿ ಎಂದು ಸಲಹೆ ನೀಡಿದರು.