ಸಿಎಂ ಕುರ್ಚಿ ಚರ್ಚೆಯಲ್ಲೆ ದಿನ ನೂಕುತ್ತಿರುವ ಕಾಂಗ್ರೆಸ್ ಸರ್ಕಾರ-ಸಂಸದ ಬೊಮ್ಮಾಯಿ

| Published : Nov 03 2025, 02:15 AM IST

ಸಿಎಂ ಕುರ್ಚಿ ಚರ್ಚೆಯಲ್ಲೆ ದಿನ ನೂಕುತ್ತಿರುವ ಕಾಂಗ್ರೆಸ್ ಸರ್ಕಾರ-ಸಂಸದ ಬೊಮ್ಮಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರದ ನವೆಂಬರ್ ರಾಜಕೀಯ ಕ್ರಾಂತಿ ಖಾಸಗಿ ವ್ಯವಹಾರವಾಗಿದ್ದು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಾವಿಬ್ಬರೇ ಮಾತನಾಡಿಕೊಳ್ಳುತ್ತೇವೆ ಎಂದು ವ್ಯವಹಾರ ಮಾಡಿಕೊಂಡಿದ್ದಾರೆ. ಉಳಿದ ಮಂತ್ರಿ, ಶಾಸಕರಿಗೆ ಸಂಬಂಧವೇ ಇಲ್ಲ ಎನ್ನುವಂತಾಗಿದೆ. ಈ ಸರ್ಕಾರ ಬಂದಾಗಿನಿಂದ ಸಿಎಂ ಬದಲಾವಣೆ ಚರ್ಚೆಯಲ್ಲಿಯೇ ದಿನ ನೂಕುತ್ತ ರಾಜ್ಯದ ಅಭಿವೃದ್ಧಿ ಶೂನ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಾನಗಲ್ಲ: ರಾಜ್ಯ ಸರ್ಕಾರದ ನವೆಂಬರ್ ರಾಜಕೀಯ ಕ್ರಾಂತಿ ಖಾಸಗಿ ವ್ಯವಹಾರವಾಗಿದ್ದು, ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನಾವಿಬ್ಬರೇ ಮಾತನಾಡಿಕೊಳ್ಳುತ್ತೇವೆ ಎಂದು ವ್ಯವಹಾರ ಮಾಡಿಕೊಂಡಿದ್ದಾರೆ. ಉಳಿದ ಮಂತ್ರಿ, ಶಾಸಕರಿಗೆ ಸಂಬಂಧವೇ ಇಲ್ಲ ಎನ್ನುವಂತಾಗಿದೆ. ಈ ಸರ್ಕಾರ ಬಂದಾಗಿನಿಂದ ಸಿಎಂ ಬದಲಾವಣೆ ಚರ್ಚೆಯಲ್ಲಿಯೇ ದಿನ ನೂಕುತ್ತ ರಾಜ್ಯದ ಅಭಿವೃದ್ಧಿ ಶೂನ್ಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಮುಖ್ಯಮಂತ್ರಿ ಯಾರಾಗಬೇಕೆಂಬ ವಿಷಯ ಖಾಸಗೀಕರಣಗೊಂಡಿರುವುದು ಇದೇ ಮೊದಲು ಎಂದರು.

ಕರ್ನಾಟಕದ ಆರ್ಥಿಕ ಸ್ಥಿತಿ ದಿವಾಳಿಯಾಗಿದೆ. ಅಭಿವೃದ್ಧಿ ಮರೀಚಿಕೆಯಾಗಿದೆ. ಸರ್ಕಾರ ರೈತರನ್ನು ಮರೆತೇ ಬಿಟ್ಟಿದೆ. ಕಿತ್ತು ಹೋದ ರಸ್ತೆ ಗುಂಡಿ ಮುಚ್ಚಲು ಹಣವಿಲ್ಲ ಎಂಬುದನ್ನು ಇಡೀ ರಾಜ್ಯದ ಜನತೆ ಗಮನಿಸಿದ್ದಾರೆ. ನೀರಾವರಿ ಯೋಜನೆಗಳಿಗೆ ದುಡ್ಡಿಲ್ಲ. ಇಂತಹ ಶೋಚನೀಯ ಸ್ಥಿತಿ ರಾಜ್ಯ ಸರ್ಕಾರದ್ದಾಗಿದೆ. ರೈತರಿಗೆ ಬೆಳೆ ಪರಿಹಾರವಿಲ್ಲ. ಸರ್ಕಾರ ಇದ್ದು ಇಲ್ಲದಾಗಿದೆ. ಕೇವಲ ಅಧಿಕಾರದ ಚರ್ಚೆಯಲ್ಲಿಯೇ ಎರಡೂವರೆ ವರ್ಷ ಕಳೆದಿದ್ದಾರೆ. ಈಗಲೂ ಅದನ್ನೇ ಮಾಡುತ್ತಿದ್ದಾರೆ ಎಂದರು.ರಾಜ್ಯ ಅಭಿವೃದ್ಧಿ ಹಿಂದಕ್ಕೆ ಹೋಗುತ್ತಿದೆ. ಎರಡು ವರ್ಷಗಳಲ್ಲಿ ₹3.5 ಲಕ್ಷ ಕೋಟಿ ಸಾಲ ಮಾಡಿದ್ದೇ ಈ ಸರ್ಕಾರದ ಸಾಧನೆ. ಅಧಿಕಾರ ಮುಗಿಯುವಷ್ಟರಲ್ಲಿ ₹6 ಲಕ್ಷ ಕೋಟಿ ಸಾಲ ಮಾಡುತ್ತಾರೆ ಎಂಬುದೇ ಮುಂದಿನ ಸಾಧನೆ. ಇಷ್ಟೇ ಕಾಂಗ್ರೆಸ್ ಸರ್ಕಾರ ಯೋಜನೆ. ಇದು ಜನತೆಯ ಮೇಲಿನ ಹೊರೆ. ಮುಂದೆ ಬರುವ ಸರ್ಕಾರಕ್ಕೂ ಹೊರೆ. ಅಭಿವೃದ್ಧಿಗೂ ತೊಡಕು. ಬಹು ದೊಡ್ಡ ಅರಾಜಕತೆಯ ಸರ್ಕಾರ ಇದಾಗಿದೆ. ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮಂತ್ರಿಗಳು ಭ್ರಷ್ಟಾಚಾರಕ್ಕಾಗಿಯೇ ಸಂಬಂಧಿಗಳನ್ನು ನೇಮಿಸಿಕೊಂಡಿದ್ದು ಈ ಸರ್ಕಾರದ ನಡೆ ಎಂದರು.ಭೂಗ್ಯಾರಂಟಿ ಈ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ಹೇಳಿಕೊಳ್ಳುತ್ತಿರುವುದರಲ್ಲಿ ಅರ್ಥವಿಲ್ಲ. ಅಲ್ಲಿ ವಾಸಿಸುವ ಅವರೆಲ್ಲ ತಮ್ಮ ಜಾಗದಲ್ಲಿ ವಾಸಿಸುತ್ತಿದ್ದರು. ಇಲಾಖೆಗಳು ಅವರಿಗೆ ದಾಖಲೆ ನೀಡಿವೆ ಅಷ್ಟೇ. ಇದರಲ್ಲಿ ಸರ್ಕಾರದ ಯಾವುದೇ ದೊಡ್ಡಸ್ತಿಕೆ ಇಲ್ಲ. ಅವರಿಗೆ ಗ್ಯಾರಂಟಿಗೆ ಇನ್ನೊಂದನ್ನು ಸೇರಿಸಿಕೊಳ್ಳಲು ಭೂ ಗ್ಯಾರಂಟಿ ಎಂದು ಪ್ರಚಾರ ಪಡೆಯುತ್ತಿದ್ದಾರೆ ಅಷ್ಟೇ ಎಂದು ಬೊಮ್ಮಾಯಿ ಲೇವಡಿ ಮಾಡಿದರು. ಶೀಘ್ರ ಹಾನಗಲ್ಲ ತಾಲೂಕು ಬಿಜೆಪಿ ಅಧ್ಯಕ್ಷರ ನೇಮಕವಾಗುತ್ತದೆ. ಈಗ ರಾಜ್ಯದ ಕೋರ್ ಕಮೀಟಿ ಸಭೆ ಆಗಿದೆ. ಇಡೀ ರಾಜ್ಯದಲ್ಲಿ ಎಲ್ಲ ಜಿಲ್ಲಾ ಹಾಗೂ ತಾಲೂಕು ಘಟಕಗಳನ್ನು ಸಕ್ರಿಯಗೊಳಿಸುವ ಕೆಲಸ ವೇಗವಾಗಿ ನಡೆಯುತ್ತದೆ. ಬೂತ್‌ ಮಟ್ಟದಲ್ಲಿ ಪಕ್ಷದ ಚಟುವಟಿಕೆಯನ್ನು ಚುರುಕುಗೊಳಿಸುತ್ತಿದ್ದೇವೆ. ನಾಯಕತ್ವದ ಬಗ್ಗೆ ಶೀಘ್ರ ಒಳ್ಳೆಯ ಸುದ್ದಿ ನೀಡುತ್ತೇವೆ ಎಂದು ಹೇಳಿದರು. ತಾಲೂಕು ಬಿಜೆಪಿ ಅಧ್ಯಕ್ಷ ಮಹೇಶ ಕಮಡೊಳ್ಳಿ, ಬಿಜೆಪಿ ಮುಖಂಡರಾದ ಕಲ್ಯಾಣಕುಮಾರ ಶೆಟ್ಟರ, ಸಿದ್ದಲಿಂಗಣ್ಣ ಕಮಡೊಳ್ಳಿ, ಭೋಜರಾಜ ಕರೂದಿ, ಮಹೇಶ ಬಣಕಾರ, ರಾಮು ಯಳ್ಳೂರ, ರಾಘವೇಂದ್ರ ತಹಶೀಲ್ದಾರ, ಅಣ್ಣಪ್ಪ ಚಾಕಾಪುರ ಇದ್ದರು.