ರಜನಿ ಎಂ.ಜಿ. ಸುವರ್ಣ ನ್ಯೂಸ್
ಹೈದರಾಬಾದ್: ಮನೆಯಲ್ಲಿ ಯಾರಿಗೋ ಹೃದಯಾಘಾತವಾದಾಗ ಅಥವಾ ಹೃದಯಾಘಾತವಾಗುವ 5 ನಿಮಿಷ ಮೊದಲೇ ನಿಮ್ಮ ಮೊಬೈಲ್‌ಗೆ ಆ ಬಗ್ಗೆ ಮುನ್ಸೂಚನೆ ಸಿಕ್ಕರೆ ಹೇಗಿರತ್ತೆ? ಅದರ ಜೊತೆಗೆ ನಿಮ್ಮ ಸುತ್ತಮುತ್ತ ಇರುವ ಹೃದ್ರೋಗ ಆಸ್ಪತ್ರೆಯ ವಿವರವೂ ಸಿಕ್ಕರೆ? ಯಾವ ಯಾವ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಖಾಲಿ ಇದೆ ಎಂಬ ಮಾಹಿತಿಯು ಜೊತೆಗಿದ್ದರೆ? ಅಲ್ಲಿಗೆ ಹೋಗಲು ಯಾವ ದಾರಿಯಲ್ಲಿ ಟ್ರಾಫಿಕ್ ಕಡಿಮೆ ಎಂಬ ಮಾಹಿತಿ, ಅಲ್ಲಿ ಪಾರ್ಕಿಂಗ್ ಎಲ್ಲಿದೆ ಎಂಬ ಮಾಹಿತಿಯೂ ಕ್ಷಣಾರ್ಧದಲ್ಲಿ ಸಿಕ್ಕರೆ? ಹೃದಯಾಘಾತವಾದ ವ್ಯಕ್ತಿಯ ಜೀವ ಉಳಿಯುವ ಸಂಭವ ಖಂಡಿತಾ ಹೆಚ್ಚಾಗುತ್ತದೆ.ಇದಕ್ಕೆ ಬೇಕಾಗುವ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಕೊಡುವುದು ಮಾತ್ರವಲ್ಲ, ಆ ಕ್ಷಣವೇ ಆ್ಯಂಬುಲೆನ್ಸ್‌ಗೆ ಮಾಹಿತಿ ನೀಡುವುದು, ತಜ್ಞ ವೈದ್ಯರ ಕರೆಸುವುದು ಮೊದಲಾದವನ್ನು ಮಾಡಬಹುದು. ಇದು ಎಐ ಅಲ್ಲ, ಅದರ ಮುಂದುವರಿದ ಹಂತ ಪಿಐ. (ಫಿಸಿಕಲ್ ಇಂಟೆಲಿಜೆನ್ಸ್). ಕ್ಯಾಮೆರಾ, ಸೆನ್ಸಾರ್, ಡ್ರೋನ್, ರೋಬೋಟ್ಸ್ ಮೊದಲಾದ ತಂತ್ರಜ್ಞಾನ ಬಳಸಿ ನಮ್ಮ ಭೌತಿಕ ಜಗತ್ತಿನ್ನು ಅರ್ಥ ಮಾಡಿಕೊಂಡು ಆಯಾ ಕ್ಷಣದಲ್ಲೇ ನಿರ್ಧಾರ ತೆಗೆದುಕೊಳ್ಳುವುದು. ಇದುವರೆಗೂ ಮಾಹಿತಿ, ದಾಖಲೆ, ಫೋಟೋ, ವಿಡಿಯೋ ಆಧರಿಸಿ ಡಿಜಿಟಲ್ ಜಗತ್ತಿನಲ್ಲಿ ಕೆಲಸ ಮಾಡುತ್ತಿದ್ದ ಎಐ ಇದೀಗ ಭೌತಿಕ ಪ್ರಪಂಚಕ್ಕೂ ಕಾಲಿಟ್ಟಿದೆ.
ಭಾರತದಲ್ಲಿ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ತಂತ್ರಜ್ಞಾನವನ್ನು ವಾಸ್ತವ ಜಗತ್ತಿನೊಂದಿಗೆ ಸಂಯೋಜಿಸುವ ಮಹತ್ವಾಕಾಂಕ್ಷಿ ಹೆಜ್ಜೆಯಾಗಿ, ಮೆಘಾ ಎಂಜಿನಿಯರಿಂಗ್ ಆ್ಯಂಡ್ ಇನ್‌ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ (ಎಂಇಐಎಲ್) ಹಾಗೂ ಅನಲಾಗ್ ಕಂಪನಿಗಳು ಪರಸ್ಪರ ಒಡಂಬಡಿಕೆ ಮಾಡಿಕೊಂಡಿದೆ. ಹೈದರಾಬಾದ್‌ನ ಪ್ರಮುಖ ಮೂಲ ಸೌಕರ್ಯ ಒದಗಿಸುವ ಹೈದರಾಬಾದ್‌ನ ಬೃಹತ್ ಸಂಸ್ಥೆ ಎಂಇಐಎಲ್‌ನ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಾರೆಡ್ಡಿ ಹಾಗೂ ಅನಲಾಗ್ ಕಂಪನಿಯ ಸಂಸ್ಥಾಪಕ ಅಲೆಕ್ಸ್ ಕಿಪ್‌ಮನ್ ಒಪ್ಪಂದಕ್ಕೆ ಸಹಿ ಹಾಕಿದರು.ಮೈಕ್ರೋಸಾಫ್ಟ್ ಸಂಸ್ಥೆಯ ಸಂಸ್ಥಾಪಕ ಪ್ರಮುಖರಲ್ಲಿ ಒಬ್ಬರಾಗಿದ್ದ ಅಲೆಕ್ಸ್ ಕಿಪ್‌ಮನ್ ಇದೀಗ ಅನಲಾಗ್ ಕಂಪನಿಯನ್ನು ಸ್ಥಾಪಿಸಿದ್ದು, ಫಿಸಿಕಲ್ ಇಂಟೆಲಿಜೆನ್ಸ್ ಮೂಲಕ ಹೈದ್ರಾಬಾದ್ ನಗರವನ್ನು ಸ್ಮಾರ್ಟ್ ಸಿಟಿ ಮಾಡುವ ಕನಸಿಗೆ ಕೈ ಜೋಡಿಸಿದ್ದಾರೆ. ಈಗಾಗಲೇ ಅಬುಧಾಬಿಯಲ್ಲಿ ಈ ಬಗ್ಗೆ ಕೆಲಸ ಮಾಡುತ್ತಿರುವ ಅನಲಾಗ್ ಕಂಪನಿ ಯಶಸ್ಸಿನ ಹಾದಿಯಲ್ಲಿದೆ.
ಯಂತ್ರಗಳು ಸುತ್ತಮುತ್ತಲಿನ ಪರಿಸರವನ್ನು ಗ್ರಹಿಸಿ, ಅರ್ಥಮಾಡಿಕೊಂಡು, ಅನುಭವದಿಂದ ನಿರಂತರವಾಗಿ ಕಲಿಯುತ್ತಾ ಸ್ವಯಂ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವೇ ಫಿಸಿಕಲ್ ಇಂಟೆಲಿಜೆನ್ಸ್. ಇದು ಕೇವಲ ಪೂರ್ವನಿಗದಿತ ಪ್ರೋಗ್ರಾಮಿಂಗ್‌ಗೆ ಸೀಮಿತವಾಗದೇ, ಪ್ರತಿಯೊಂದು ಅನುಭವದೊಂದಿಗೆ ಮತ್ತಷ್ಟು ಬುದ್ಧಿವಂತಿಕೆಯನ್ನು ಅಳವಡಿಸಿಕೊಳ್ಳುವ ತಂತ್ರಜ್ಞಾನ ವಾಗಿದೆ. ಎಂಇಐಎಲ್ ತನ್ನ ಬಲಿಷ್ಠ ಮೂಲಸೌಕರ್ಯ ಅನುಭವ ಹಾಗೂ ದೇಶವ್ಯಾಪಿ ಕಾರ್ಯವ್ಯಾಪ್ತಿಯನ್ನು ಒದಗಿಸಿದರೆ, ಅನಲಾಗ್ ತನ್ನ ತಂತ್ರಜ್ಞಾನದ ಮೂಲಕ ಮೂಲಸೌಕರ್ಯ, ಸಾರಿಗೆ, ಕೈಗಾರಿಕಾ ವ್ಯವಸ್ಥೆಗಳು, ಸಾರ್ವಜನಿಕ ಸುರಕ್ಷತೆ, ಸ್ಮಾರ್ಟ್ ನಗರಗಳು ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಲಿವೆ.
ಎಂಇಐಎಲ್ ವ್ಯವಸ್ಥಾಪಕ ನಿರ್ದೇಶಕ ಪಿ.ವಿ.ಕೃಷ್ಣಾರೆಡ್ಡಿ ಮಾತನಾಡಿ, ಮೂಲಸೌಕರ್ಯ ಅಭಿವೃದ್ಧಿಯೇ ದೇಶದ ಪ್ರಗತಿಯ ಆಧಾರವಾಗಿದೆ. ಮುಂದಿನ ದಿನಗಳಲ್ಲಿ ಮೂಲಸೌಕರ್ಯಗಳು ಬುದ್ಧಿಮತ್ತೆ ಹೊಂದಿದ್ದು ಪರಿಸ್ಥಿತಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವಂತಿರಬೇಕು. ಭಾರತಕ್ಕೆ ಫಿಸಿಕಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಪರಿಚಯಿಸುವಲ್ಲಿ ನಾವು ಹೆಮ್ಮೆಪಡುತ್ತೇವೆ ಎಂದು ಪ್ರತಿಪಾದಿಸಿದರು.
ಅನಲಾಗ್ ಸಂಸ್ಥಾಪಕ ಹಾಗೂ ಸಿಇಒ ಅಲೆಕ್ಸ್ ಕಿಪ್‌ಮನ್ ಮಾತನಾಡಿ, ‘ಭಾರತವು ವಿಶ್ವದ ಅತ್ಯಂತ ಮಹತ್ವದ ತಂತ್ರಜ್ಞಾನ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಇಲ್ಲಿನ ಎಂಜಿನಿಯರಿಂಗ್ ಪ್ರತಿಭೆ, ಮೂಲಸೌಕರ್ಯ ಅಭಿವೃದ್ಧಿಯ ಮಹತ್ವಾಕಾಂಕ್ಷೆ ಹಾಗೂ ಉದ್ಯಮಶೀಲತೆ ವಿಶ್ವದಲ್ಲೇ ವಿಶಿಷ್ಟವಾಗಿದೆ. ಫಿಸಿಕಲ್ ಇಂಟೆಲಿಜೆನ್ಸ್ ತಂತ್ರಜ್ಞಾನಕ್ಕೆ ಭಾರತ ಅತ್ಯುತ್ತಮ ವೇದಿಕೆ. ಈ ಕನಸನ್ನು ಸಾಕಾರಗೊಳಿಸಲು ಎಂಇಐಎಲ್ ಸೂಕ್ತ ಪಾಲುದಾರ’ ಎಂದು ತಿಳಿಸಿದರು.ಎಂಇಐಎಲ್:
ಹೈದರಾಬಾದ್ ಕೇಂದ್ರ ಕಚೇರಿಯನ್ನು ಹೊಂದಿರುವ ಮೆಘಾ ಎಂಜಿನಿಯರಿಂಗ್ ಆ್ಯಂಡ್ ಇನ್‌ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ (ಎಂಇಐಎಲ್) ಕಳೆದ 3 ದಶಕಗಳಿಂದ ನೀರಾವರಿ, ವಿದ್ಯುತ್, ಸಾರಿಗೆ, ಹೈಡ್ರೋಕಾರ್ಬನ್, ಉತ್ಪಾದನಾ ವಲಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೃಹತ್ ಮೂಲಸೌಕರ್ಯ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುತ್ತಿರುವ ಭಾರತದ ಪ್ರಮುಖ ಎಂಜಿನಿಯರಿಂಗ್ ಸಂಸ್ಥೆ ಆಗಿದೆ.-ಬಾಕ್ಸ್-
‘ದೇಶದ ಭವಿಷ್ಯದಲ್ಲಿ ಭೌತಿಕಬುದ್ಧಿಮತ್ತೆ ಮಹತ್ವದ ಪಾತ್ರ’ಮುಂದಿನ ದಿನಗಳಲ್ಲಿ ‘ಭೌತಿಕ ಬುದ್ಧಿಮತ್ತೆ’ (ಫಿಸಿಕಲ್ ಇಂಟಲಿಜೆನ್ಸ್) ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಮೇಗ ಎಂಜಿನಿಯರಿಂಗ್ ಇನ್ಫಾಸ್ಟ್ರಕ್ಚರ್ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಾರೆಡ್ಡಿ ಪ್ರತಿಪಾದಿಸಿದರು. ''''''''ಅನಲಾಗ್'''''''' ನೊಂದಿಗಿನ ಒಡಂಬಡಿಕೆ ವೇಳೆ ಮಾತನಾಡಿದ ಅವರು ಭವಿಷ್ಯದಲ್ಲಿ ಮೂಲ ಸೌಕರ್ಯ ಯೋಜನೆಗಳನ್ನು ಕಬ್ಬಿಣ ಮತ್ತು ಸಿಮೆಂಟ್ ಜೊತೆಗೆ ''''''''ಬುದ್ಧಿವಂತಿಕೆ''''''''ಯೊಂದಿಗೆ ನಿರ್ಮಾಣ ಮಾಡಬೇಕಿದೆ. ಈ ನಿಟ್ಟಿನಲ್ಲಿ ಬೌತಿಕ ಬುದ್ಧಿಮತ್ತೆ ಮತ್ತು ಕೃತಕ ಬುದ್ಧಿಮತ್ತೆ (ಎಐ) ಜೊತೆಗಿನ ಸಮೀಕರಣದ ಹೊಸ ಆವಿಷ್ಕಾರಗಳಿಗೆ ನಾಂದಿ ಹಾಕಲಿದೆ ಎಂದರು. -ಬಾಕ್ಸ್-
ಫಿಸಿಕಲ್ ಇಂಟಲಿಜೆನ್ಸ್ ಕಾರ್ಯವೇನು?*ಟ್ರಾಫಿಕ್ ಸಮಸ್ಯೆ: ರಸ್ತೆಯಲ್ಲಿರುವ ಸೆನ್ಸಾರ್, ಕ್ಯಾಮೆರಾ ಎಲ್ಲವನ್ನೂ ಸೇರಿಸಿ ಸಿಗ್ನಲ್ ಸಮಯವನ್ನೇ ಬದಲಾಯಿಸಿ ಟ್ರಾಫಿಕ್ ಜಾಮ್ ಕಡಿಮೆ ಮಾಡುವುದು
*ಪ್ರವಾಹ ನಿಯಂತ್ರಣ: ಮಳೆ, ನದಿನೀರಿನ ಮಟ್ಟ, ಕಾಲುವೆಯ ಹರಿವಿನ ಪ್ರಮಾಣದ ಸೆನ್ಸಾರ್ ನೋಡಿ 30 ನಿಮಿಷ ಮೊದಲೇ ಪ್ರವಾಹ ಎಲ್ಲಿ ಆಗುತ್ತದೆ ಎಂದು ಪತ್ತೆ ಮಾಡುತ್ತದೆ*ಇಂಧನ ಸೋರಿಕೆ: ಎಲ್ಲೆಲ್ಲಿ ಇಂಧನ ಸೋರಿಕೆಯಾಗುತ್ತದೆ ಎಂದು ಪತ್ತೆ ಹಚ್ಚುವುದು ಮಾತ್ರವಲ್ಲ, ಸೋರಿಕೆ ಆಗದಂತೆ ಮೊದಲೇ ಕ್ರಮ ಕೈಗೊಳ್ಳುತ್ತದೆ
*ಸ್ಮಾರ್ಟ್ ಸಿಟಿ: ಡ್ರೋನ್, ರೋಬೋಟ್ಸ್, ನಗರದ ಕ್ಯಾಮೆರಾಗಳು ಸೇರಿಸಿ ಆಯಾ ಕ್ಷಣದಲ್ಲೇ ಕಸ, ಮಾಲಿನ್ಯ, ಸುರಕ್ಷತೆಯ ಬಗ್ಗೆ ನಿಗಾ ಇಡುತ್ತದೆ.