ಶುಕ್ರವಾರ ಉಡುಪಿ ಕೃಷ್ಣ ಮಠದ ರಾಜಾಂಗಣದಲ್ಲಿ ‘ಸಂತ ಸಂದೇಶ - ಸಂತ ಸನ್ಮಾನ’ ಕಾರ್ಯಕ್ರಮ ನೆರವೇರಿತು.

ಉಡುಪಿ: ಕೃಷ್ಣ ಭೋದಿಸಿದ ಭಗವದ್ಗೀತೆಯ ಮುಖ್ಯ ಸಾರವೇ ಸಹೋದರತ್ವ, ವಿಶ್ವದ ಎಲ್ಲರೂ ಸಹೋದರ ಭಾವದಿಂದ ಬದುಕಬೇಕು ಎಂಬುದು. ಸ್ವಾಮೀ ವಿವೇಕಾನಂದರು ಅಂದು ಚಿಕಾಗೋದಲ್ಲಿ ಭಾಷಣ ಆರಂಭಿಸಿದ್ದೇ ಸಹೋದರರೇ ಮತ್ತು ಸಹೋದರಿಯರೇ ಎಂದು, ಇಡೀ ವಿಶ್ವವೇ ಅವರ ಈ ಸಂಬೊಧನೆಯಿಂದ ಬೆರಗಾಯಿತು. ವಿವೇಕಾನಂದರು ಆ ಮೂಲಕ ಭಗವದ್ಗೀತೆಯ ಸಹದೋರತೆಯ ಸಾರವನ್ನು ಇಡಿ ವಿಶ್ವವೇ ತಿಳಿಯುವಂತೆ ಮಾಡಿದರು ಎಂದು ಉಡುಪಿ ಕೃಷ್ಣಮಠದ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.ಶುಕ್ರವಾರ ಉಡುಪಿ ಕೃಷ್ಣ ಮಠದ ರಾಜಾಂಗಣದಲ್ಲಿ ‘ಸಂತ ಸಂದೇಶ - ಸಂತ ಸನ್ಮಾನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶ್ರೀಗಳು ಹಿಡಿಯಡ್ಕ ಸಮೀಪದ ಬೈಲೂರಿನ ರಾಮಕೃಷ್ಣಾಶ್ರಮದ ಮುಖ್ಯಸ್ಥ ಶ್ರೀ ವಿನಾಯಕಾನಂದ ಜೀ ಮಹರಾಜ್ ಅವರನ್ನು ಗೌರವಿಸಿದರು.

ನಂತರ ಸಂತ ಸಂದೇಶ ನೀಡಿದ ಶ್ರೀ ವಿನಾಯಕಾನಂದ ಜೀ ಮಹರಾಜ್ ಅವರು, ಭಗವಂತನನ್ನು ವ್ಯಾಕುಲತೆಯಿಂದ ಪೂಜಿಸಬೇಕು, ತಮ್ಮ ಕರ್ತವ್ಯಗಳನ್ನೆಲ್ಲವನ್ನೂ ಭಗವಂತನ ಚರಣಗಳಿಗೆ ಅರ್ಪಿಸಬೇಕು, ಆಗ ಮಾತ್ರ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದರು.

ನಾವೆಲ್ಲಾ ಅರ್ಜುನನಂತೆ ವಿಷಾದ ಯೋಗದಲ್ಲಿದ್ದೇವೆ, ಅದರಿಂದ ಹೊರಗೆ ಬಂದು ಗೀತೆಯನ್ನು ಅಧ್ಯಯನ ಮಾಡಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಆಗ ಕೃಷ್ಣನ ಭಗವದ್ಗೀತೆಯ ಸಂದೇಶದ ನಂತರ ಅರ್ಜುನ ವಿಷಾದ ಭಾವದಿಂದ ಹೊರಗೆ ಬಂದಂತೆ, ನಮ್ಮೆಲ್ಲಾ ಕಷ್ಟಗಳು ಮುಕ್ತವಾಗುತ್ತವೆ ಎಂದರು.ಪುತ್ತಿಗೆ ಮಠದ ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನಿಧ್ಯ ವಹಿಸಿದ್ದರು, ವಿದ್ವಾನ್ ಡಾ. ಗೋಪಾಲಾಚಾರ್ಯರು ಸ್ವಾಗತಿಸಿ, ನಿರೂಪಿಸಿದರು.