ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದ ಸಹಯೋಗದಲ್ಲಿ ಯಕ್ಷಶಿಕ್ಷಣ ಟ್ರಸ್ಟ್ ನಾಲ್ಕು ದಿನಗಳ ಕಿಶೋರ ಯಕ್ಷಗಾನ ಸಂಭ್ರಮ ಸಂಪನ್ನಗೊಂಡಿತು.
ಕಾಪು: ಉಡುಪಿಯ ಯಕ್ಷಗಾನ ಕಲಾರಂಗ ಕಲೆ, ಕಲಾವಿದರು, ಯಕ್ಷಶಿಕ್ಷಣ, ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಶಾಲಾಶಿಕ್ಷಣಕ್ಕೆ ಮಾಡುತ್ತಿರುವ ಕೆಲಸಗಳನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಇದೊಂದು ಅನನ್ಯ ಸಂಘಟನೆ ಎಂದು ಜಾನಪದ ವಿದ್ವಾಂಸ ಕೆ. ಎಲ್. ಕುಂಡಂತಾಯ ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿನ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಳದ ಸಹಯೋಗದಲ್ಲಿ ಯಕ್ಷಶಿಕ್ಷಣ ಟ್ರಸ್ಟ್ ಆಯೋಜಿಸಿದ್ದ ನಾಲ್ಕು ದಿನಗಳ ಕಿಶೋರ ಯಕ್ಷಗಾನ ಸಂಭ್ರಮದ ಸಮಾರೋಪ ಭಾಷಣ ಮಾಡಿದರು.ಶ್ರೀ ಮಹಾಲಕ್ಷ್ಮಿ ದೇವಳದ ಅಧ್ಯಕ್ಷ ಗಿರಿಧರ ಸುವರ್ಣ ಅಭ್ಯಾಗತರಾಗಿ ಭಾಗವಹಿಸಿದ್ದರು. ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷ ವಿ. ಜಿ. ಶೆಟ್ಟಿ, ಸದಸ್ಯರಾದ ನಟರಾಜ ಉಪಾಧ್ಯಾಯ, ಡಾ. ರಾಘವೇಂದ್ರ ರಾವ್ ಉಪಸ್ಥಿತರಿದ್ದರು.ವಿದ್ಯಾರ್ಥಿಗಳಾದ ನಿವೇದಿತಾ, ಶಮಿಕಾ, ರಿಶಾ, ಸ್ಪಂದನ ಯಕ್ಷಗಾನದ ತಮ್ಮ ಅನುಭವ ಹಂಚಿಕೊಂಡರು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ. ಎಂ. ಹೆಗಡೆ ವಂದಿಸಿದರು.ಗಣಪತಿ ಪ್ರೌಢಶಾಲೆ ಪಡುಬಿದ್ರಿ ಇಲ್ಲಿಯ ವಿದ್ಯಾರ್ಥಿಗಳಿಂದ ‘ಗುರು ದಕ್ಷಿಣೆ’ ಮತ್ತು ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಉಚ್ಚಿಲ ಇಲ್ಲಿನ ವಿದ್ಯಾರ್ಥಿಗಳಿಂದ ‘ಶೂರ್ಪನಖಾ ನಾಸಾಚ್ಛೇದ - ಜಟಾಯು ಮೋಕ್ಷ’ ಪ್ರಸಂಗ ಪ್ರಸ್ತುತ ಗೊಂಡಿತು.