ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ಕಲ್ಯಾಣ ಕರ್ನಾಟಕದ ಅಪರೂಪದ ಜೀವವೈವಿಧ್ಯ ತಾಣ ಗುರುತಿಸುವ, ವಿನಾಶದ ಅಂಚಿನ ಸಸ್ಯ ಸಂಪತ್ತಿನ ಸಂರಕ್ಷಣೆಗೆ ವಿಶೇಷ ಯೋಜನೆ ರೂಪಿಸುತ್ತೇವೆ. ಪಶ್ಚಿಮಘಟ್ಟದ ದೇವರ ಕಾನುಗಳ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಅರಣ್ಯ, ಪರಿಸರ ಇಲಾಖೆ ಸಚಿವ ಈಶ್ವರ ಖಂಡ್ರೆ ಹೇಳಿದರು.ತಾಲೂಕಿನ ವೃಕ್ಷಲಕ್ಷ ಆಂದೋಲನ ಕಾರ್ಯಕರ್ತರ ನಿಯೋಗ ಬೆಳಗಾವಿ ಸುವರ್ಣಸೌಧದಲ್ಲಿ ಸಚಿವರನ್ನು ಭೇಟಿ ಮಾಡಿ, ಪಶ್ಚಿಮಘಟ್ಟದ ಕಾನು ಪ್ರದೇಶವನ್ನು ಉಳಿಸುವಂತೆ ಮನವಿ ಸಲ್ಲಿಸಿದ ನಂತರ ಸಮಾಲೋಚನಾ ಸಭೆ ನಡೆಸಿ ಅವರು ಮಾತನಾಡಿದರು.
ಜೀವವೈವಿಧ್ಯ ಪ್ರಶಸ್ತಿ:ಜೀವವೈವಿಧ್ಯ ಕಾಯಿದೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ಅರಣ್ಯ ಅಧಿಕಾರಿಗಳು ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗುತ್ತದೆ. ಕರಾವಳಿಯ ವಿಶಿಷ್ಟ ಮತ್ಸ್ಯಧಾಮಗಳನ್ನು ಗುರುತಿಸಲಾಗಿದ್ದು, ಮೀನುಗಾರಿಕೆ ಇಲಾಖೆ ಸಹಕಾರ ಪಡೆದು ಘೋಷಣೆ ಮಾಡಲಾಗುತ್ತದೆ. ರಾಜ್ಯ ಜೀವವೈವಿಧ್ಯ ಪ್ರಶಸ್ತಿಗಳನ್ನು ಸದ್ಯದಲ್ಲೇ ಪ್ರಕಟಿಸಲಾಗುತ್ತದೆ ಎಂದ ಅವರು, ಜೀವವೈವಿಧ್ಯ ಮಂಡಳಿ ವಿಶೇಷ ಸಭೆಯನ್ನು ಸಹ ಸಧ್ಯದಲ್ಲೇ ಕರೆಯಲಿದ್ದೇವೆ ಎಂದರು.
ನಿಯೋಗಕ್ಕೆ ಭರವಸೆ:ಜೀವವೈವಿಧ್ಯ ಸಮಿತಿಗಳ ಸಮಾವೇಶಗಳನ್ನು ಜಿಲ್ಲಾಮಟ್ಟದಲ್ಲಿ ನಡೆಸುವ ಉದ್ದೇಶವಿದೆ. ಬೀದರ್‌ನಿಂದಲೇ ಅಭಿಯಾನ ಶುರು ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ. ವಿನಾಶದ ಅಂಚಿನಲ್ಲಿರುವ ಮಲೆನಾಡಿನ ಸಕ್ಕರೆ ಕಂಚಿ ಸಿಟ್ರಸ್ ತಳಿಗೆ ಜೀವವೈವಿಧ್ಯ ಮಂಡಳಿ ಮಾನ್ಯತೆ ನೀಡಲಿದೆ. ಗ್ರಾಮ ಅರಣ್ಯ ಸಮಿತಿಗಳ ಸಬಲೀಕರಣ ವಿಷಯಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ನಿಯೋಗಕ್ಕೆ ಭರವಸೆ ನೀಡಿದರು. ಈ ವೇಳೆ ಶಿರಸಿಯ ಕದಂಬ ತೋಟಗಾರಿಕಾ ಜೀವವೈವಿಧ್ಯ ಮೇಳದ ನಿರ್ಣಯಗಳನ್ನು ಹಾಗೂ ಸೊರಬದಲ್ಲಿ ನಡೆದ ಕೆರೆ, ಕಾನು ಸಮಾವೇಶದ ನಿರ್ಣಯಗಳನ್ನು ಅರಣ್ಯ ಸಚಿವರಿಗೆ ವೃಕ್ಷಲಕ್ಷ ಆಂದೋಲನ ಸಲ್ಲಿಸಿತು. ರಾಜ್ಯದ ಉಚ್ಛ ನ್ಯಾಯಾಲಯದಲ್ಲಿ ಇರುವ ಅರಣ್ಯ ಪ್ರಕರಣಗಳಲ್ಲಿ ಅರಣ್ಯ ಇಲಾಖೆ ಬಲವಾದ ವಾದ ಮಂಡಿಸಬೇಕು ಎಂದು ಒತ್ತಾಯ ಮಾಡಿತು. ಸ್ಥಳೀಯ ಅರಣ್ಯ ಅಧಿಕಾರಿಗಳು ವನವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಗ್ರಾಮ ಅರಣ್ಯ ಸಮಿತಿ, ಜೀವವೈವಿಧ್ಯ ಸಮಿತಿ, ಇಕೊ ಡೆವಲಪ್‌ಮೆಂಟ್ ಕಮಿಟಿಗಳನ್ನು ಬಲಪಡಿಸಿ, ಅವರ ಸಹಭಾಗಿತ್ವ ಹೆಚ್ಚಿಸಬೇಕು ಎಂದು ಮನವಿ ಮಾಡಿತು.
ಈ ಸಂದರ್ಭದಲ್ಲಿ ಜೀವವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ, ವಿಧಾನ ಪರಿಷತ್ತು ಸದಸ್ಯ ಶಾಂತಾರಾಮ ಸಿದ್ಧಿ, ಶ್ರೀಪಾದ ಬಿಚ್ಚುಗತ್ತಿ, ಕೆ.ವೆಂಕಟೇಶ್, ಕೆ.ಗಣಪತಿ ಮುಂತಾದವರು ಹಾಜರಿದ್ದರು.- - - -14ಕೆಪಿಸೊರಬ03:
ಸೊರಬ ತಾಲೂಕಿನ ಜೀವವೈವಿಧ್ಯ ಸಮಿತಿ ಸದಸ್ಯರು ಪಶ್ಚಿಮಘಟ್ಟದ ಕಾನು ರಕ್ಷಣೆಗೆ ಒತ್ತಾಯಿಸಿ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಸಲ್ಲಿಸಿ, ಸಮಾಲೋಚನೆ ಸಭೆಯಲ್ಲಿ ಭಾಗವಹಿಸಿದರು.