ಶಂಕರ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಮಹಾಪಾದುಕಾ ಪೂಜೆ ಕನ್ನಡಪ್ರಭ ವಾರ್ತೆಸಿದ್ದಾಪುರ
ಶಂಕರ ಜಯಂತಿ ಎಂದರೆ ಶಂಕರನೇ ಅವತರಿಸಿ ಧರಣಿಗೆ ಶಂಕರಾಚಾರ್ಯರಾಗಿ ಬಂದ ಸಂದರ್ಭ. ಆದಿಗುರು ಲೋಕಕ್ಕೆ ಇಳಿದುಬಂದ ಈ ದಿನ ಗುರು ಸೂರ್ಯೋದಯವಾಗಿ ಅಂತರಂಗದ ಕತ್ತಲು ಕಳೆದ ದಿನ ಎಂದು ರಾಘವೇಶ್ವರಭಾರತೀ ಶ್ರೀಗಳು ಹೇಳಿದರು.ತಾಲೂಕಿನ ಭಾನ್ಕುಳಿಯ ಶ್ರೀ ರಾಮದೇವಮಠ ಗೋಸ್ವರ್ಗದಲ್ಲಿ ಜರುಗುತ್ತಿರುವ ಶಂಕರಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಮಹಾಪಾದುಕಾ ಪೂಜೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ವಿಪ್ರೋತ್ತಮ, ಗೋವು, ಆನೆ, ನಾಯಿ, ಶ್ವಪಚರು ದೂರದೃಷ್ಟಿಯಿಂದ ಬೇರೆ ಬೇರೆಯಾದರೂ ಇವರೆಲ್ಲರಲ್ಲಿಯೂ ಆಳದಲ್ಲಿ ಪರಮಾತ್ಮನಿದ್ದಾನೆ ಎಂದು ಕಂಡುಕೊಂಡವರು ಶಂಕರರು. ಸೂರ್ಯ ಪ್ರತಿಬಿಂಬ ಎಲ್ಲಡೆ ಬೀಳುವಂತೆ ಶಂಕರರು ಎಲ್ಲವನ್ನೂ ಸಮನಾಗಿ ಕಾಣಬಲ್ಲವರಾಗಿದ್ದರು. ಕಣ್ತೆರೆದರೆ ನಮಗೆ ಪ್ರಪಂಚ ಕಾಣುತ್ತದೆ. ಆದರೆ ಶಂಕರರಿಗೆ ಕಣ್ಣು ಬಿಟ್ಟಲ್ಲೆಲ್ಲಾ ಪರಮಾತ್ಮನೇ ಗೋಚರಿಸಿದ್ದಾನೆ. ಯುಗಕ್ಕೊಮ್ಮೆ ಶಂಕರರಂತವರು ಹುಟ್ಟಿಬರುತ್ತಾರೆ. ಜ್ಞಾನಿಗಳೆಲ್ಲರೂ ಬೇರೆಯವರಿಗೆ ಮುಕ್ತಿಯ ಮಾರ್ಗ ತೋರುತ್ತಾರೆ ಎನ್ನಲಾಗದು. ನೌಕೆ ಎಲ್ಲರನ್ನೂ ಆಚೆ ದಡ ತಲುಪಿಸುವಂತೆ ಸಂಸಾರ ಸಮುದ್ರ ದಾಟಲು ಮಾರ್ಗದರ್ಶಿ ಸೂತ್ರ ಕೊಟ್ಟ ಶ್ರೇಷ್ಠರು ಶಂಕರಾಚಾರ್ಯರು. ಶಂಕರರ ಉಪದೇಶ, ರಚಿಸಿದ ಗ್ರಂಥಗಳನ್ನು ಗಮನಿಸಿದರೆ ಭವರೋಗ ನಿವಾರಿಸುವ ಅಮೃತ ದಯಪಾಲಿಸಿದವರೆಂಬುದು ಸ್ಪಷ್ಟವಾಗುತ್ತದೆ. ಇಂತಹ ಗುರುವಿನ ಮನೆಗೆ ಬಾಗಿಲು, ಗೋಡೆಗಳಿಲ್ಲ. ಪುಣ್ಯವಂತರು ಮಾತ್ರ ಗುರುವಿನ ಹತ್ತಿರ ಹೋಗಬಲ್ಲರು. ಭಗವಂತ ನಮ್ಮಲ್ಲಿಗೆ ಬ್ರಾಹ್ಮೀ ಮುಹೂರ್ತದಲ್ಲಿ ಅಮೃತ ಕಲಶ ತಂದಾಗ ನಾವು ಜಡನಿದ್ರೆಯಲ್ಲಿರುತ್ತೇವೆ. ಹೀಗೆ ದಿನಕಳೆಯುತ್ತಾ ಕೊನೆಯಲ್ಲಿ ಯಮನು ಪಾಶ ತೆಗೆದುಕೊಂಡು ನಮ್ಮಲ್ಲಿ ಬರುತ್ತಾನೆ. ಹೀಗಾಗಿ ನಾವು ರಾಮನ ಕಡೆ ಹೋಗಬೇಕು. ಆದಿಗುರು ಶಂಕರರು ಅದಕ್ಕಾಗಿಯೇ ನಮಗೆ ದಾರಿ ತೋರಿದ್ದಾರೆ. ಎದೆಯಲ್ಲಿ ಆದಿಗುರುವನ್ನು ಶಾಶ್ವತವಾಗಿ ಸ್ಥಾಪಿಸಿಕೊಳ್ಳಿ. ಅವರು ನಮ್ಮ ಬದುಕನ್ನು ಬೆಳಗುವಂತಾಗಲಿ. ಸಕಲರಿಗೂ ಒಳಿತಾಗಲಿ ಎಂದು ಶ್ರೀಗಳು ಹರಸಿದರು.ವಿ. ಶ್ರೀನಿವಾಸ ಭಟ್ಟ ಮೈಸೂರು ಇವರ ಆಚಾರ್ಯತ್ವದಲ್ಲಿ ಮಹಾಪಾದುಕಾ ಪೂಜೆ ಜರುಗಿತು. ವೇ. ಮಂಜುನಾಥ ಭಟ್ಟ ಹುಲಿಮನೆ, ವೇ.ವೆಂಕಟ್ರಮಣ (ನಂದ) ಭಟ್ಟ, ವೇ. ನಾಗರಾಜ ಭಟ್ಟ ಇತರರು ಪೂಜಾ ಕೈಂಕರ್ಯ ನೆರವೇರಿಸಿದರು. ಶ್ರೀ ಮಹಾಪಾದುಕಾ ಪೂಜೆಯ ಯಜಮಾನತ್ವವನ್ನು ವಿನಾಯಕ ಸುಬ್ರಾಯ ಹೆಗಡೆ ಹರಗಿ ಹಾಗೂ ಕುಟುಂಬದವರು ವಹಿಸಿಕೊಂಡಿದ್ದರು. ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಶಿಷ್ಯಭಕ್ತರು ಅಖಂಡವಾಗಿ ನಾಲ್ಕು ತಾಸುಗಳ ಕಾಲ ನಡೆದ ಶ್ರೀ ಮಹಾಪಾದುಕಾ ಪೂಜೆಯನ್ನು ಶ್ರದ್ಧೆಯಿಂದ ನಡೆಸಿದರು.