ಕೊಟ್ಟೂರು: ರಾಷ್ಟ್ರದಲ್ಲೇ ವಿಶಿಷ್ಟ ಆಚರಣೆಯ ಶಿಖರ ತೈಲಾಭಿಷೇಕಕ್ಕೆ ತಾಲೂಕಿನ ಉಜ್ಜಯನಿ ಸದ್ಧರ್ಮ ಪೀಠ ಮತ್ತೊಮ್ಮೆ ಬುಧವಾರ ಇಳಿ ಸಂಜೆ ಹೊತ್ತಿನಲ್ಲಿ ಸಾಕ್ಷಿಯಾಯಿತು.
ಪ್ರತಿ ವರ್ಷದ ಧಾರ್ಮಿಕ ಪದ್ಧತಿಯಂತೆ ಜಾತ್ರೋತ್ಸವದ ಎರಡನೇ ದಿನ ಸ್ವಾಮಿಯ ಶಿಖರಕ್ಕೆ ತೈಲಾಭಿಷೇಕವನ್ನು ಉಜ್ಜಯನಿ ಗ್ರಾಮದ ಆಯಾಗಾರ ಬಳಗದವರು ಲಕ್ಷಾಂತರ ಭಕ್ತರ ಭಾಗವಹಿಸುವಿಕೆಯಲ್ಲಿ ಸಂಜೆ 6ರ ಸುಮಾರಿಗೆ ಅದ್ಧೂರಿಯಿಂದ ಜರುಗಿತು.ಜರ್ಮಲಿ ಪಾಳೇಗಾರರು ವಂಶಸ್ಥರು ಪೀಠದ ಶಿಖರಕ್ಕೆ ತೈಲವನ್ನು ಅಭಿಷೇಕಕ್ಕೆಂದೇ ಪ್ರತಿ ವರ್ಷ ಭಕ್ತಿ ಕಾಣಿಕೆಯಾಗಿ ನೀಡುತ್ತ ಬಂದಿದ್ದು, ಇದರಂತೆ ಪಾಳೇಗಾರರು ನೀಡಿದ ತೈಲದ ಕುಂಭವನ್ನು ಜರ್ಮಲಿ ಗ್ರಾಮದ ಆ ವಂಶಸ್ಥರು ಪಾದಯಾತ್ರೆ ಮೂಲಕ ಉಜ್ಜಯನಿಗೆ ಮಧ್ಯಾಹ್ನ ತಂದರು. ಪಾದಯಾತ್ರೆ ಮೂಲಕ ಬಂದ ತೈಲದ ಕುಂಭವನ್ನು ಸದ್ಧರ್ಮ ಪೀಠದ ಪರವಾಗಿ ಧಾರ್ಮಿಕ ಪದ್ಧತಿಗೆ ಅನುಗುಣವಾಗಿ ದೇವಸ್ಥಾನಕ್ಕೆ ಮೆರವಣಿಗೆಯೊಂದಿಗೆ ತಂದರು. ನಂತರ ಸಂಜೆ 6ರ ವೇಳೆಗೆ ತೈಲ ಕುಂಭವನ್ನು ಜಗದ್ಗುರುಗಳು ಆಶೀರ್ವದಿಸಿದ ನಂತರ ಈ ತೈಲವನ್ನೇ ಶಿಖರಕ್ಕೆ ಎರೆಯುವ ಮೂಲಕ ತೈಲಾಭಿಷೇಕಕ್ಕೆ ಚಾಲನೆ ನೀಡಿದರು. ನಂತರ ಇತರ ಭಕ್ತರು ನೀಡಿದ ಎಣ್ಣೆಯನ್ನು ರಾಶಿ ರಾಶಿಯಾಗಿ ಸುರಿಯಲಾಯಿತು. ತೈಲಾಭಿಷೇಕ ನೆರವೇರಿಸಲು ಆಯಾಗಾರ ಬಳಗದವರು ಬಿಸಿಲಿನ ಚುರುಕಿನಲ್ಲಿ ಶಿಖರದ ನುಣ್ಣುಚಾದ ಕಲ್ಲಿನಿಂದ ಮಾಡಿದ ಶಿಖರದ ಮೇಲೆ ಉದ್ದಕ್ಕೂ ಅಪಾಯವನ್ನು ಲೆಕ್ಕಿಸದೇ ಟನ್ ಗಟ್ಟಲೇ ಎಣ್ಣೆಯನ್ನು ಅಭಿಷೇಕ ಮಾಡಿದ್ದು ನೆರೆದಿದ್ದ ಭಕ್ತರನ್ನು ರೋಮಾಂಚನಗೊಳಿಸಿತು.
ಶಾಪಮುಕ್ತಿಗೆ ಈ ಕೈಂಕರ್ಯ:ಉಜ್ಜಯನಿ ಪೀಠಕ್ಕೂ ಜರ್ಮಲಿ ಪಾಳೆಗಾರರಿಗೂ ಉತ್ತಮ ಬಾಂಧವ್ಯ ಇತ್ತು. ಒಮ್ಮೆ ಪಾಳೆಗಾರರು ತಪ್ಪಾಗಿ ನಡೆದುಕೊಂಡ ಹಿನ್ನೆಲೆಯಲ್ಲಿ ಆಗಿನ ಜಗದ್ಗುರುಗಳು ಶಾಪ ನೀಡಿದ್ದರಂತೆ. ಶಾಪ ವಿಮೋಚನೆಗೆ ಮರಳುಸಿದ್ದೇಶ್ವರ ಸ್ವಾಮಿಯ ಶಿಖರಕ್ಕೆ ತೈಲ ಕಪ್ಪು ಕಾಣಿಕೆಯಾಗಿ ಎರೆದರೆ ಶಾಪ ವಿಮೋಚನೆಯಾಗುತ್ತದೆ ಎಂದು ಪಾಳೇಗಾರರಿಗೆ ಜಗದ್ಗುರುಗಳು ಹೇಳಿದ್ದರಂತೆ. ಇದರ ಪ್ರಕಾರ ಪ್ರತಿ ವರ್ಷ ಸ್ವಾಮಿಯ ರಥೋತ್ಸವ ನಡೆದ ಮರುದಿನ ಶಿಖರ ತೈಲಾಭಿಷೇಕ ನಡೆಯುತ್ತ ಬಂದಿದೆ.
ಶಿಖರ ತೈಲಾಭಿಷೇಕ ಧಾರ್ಮಿಕ ಕಾರ್ಯಕ್ರಮದಲ್ಲಿ ಜಗದ್ಗುರು ಸಿದ್ದಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಸೇರಿದಂತೆ ಹಲವಾರು ಶಿವಾಚಾರ್ಯರು ಉಪಸ್ಥಿತರಿದ್ದರು.
ಎಸ್ಪಿ ಎಸ್.ಜಾಹ್ನವಿ, ಡಿವೈಎಸ್ಪಿ ಮಲ್ಲೇಶ್ ದೊಡ್ಡನಾಯ್ಕ್ ಸೇರಿದಂತೆ ಅನೇಕ ಪೋಲೀಸ್ ಅಧಿಕಾರಿಗಳು ಇದ್ದರು.