ಹುಲಿಕಲ್ ಘಾಟಿಯಲ್ಲಿ ಸಂಭವಿಸಿದ ದುರಂತದ ವಿಚಾರದಲ್ಲಿ ಮೇಲ್ನೋಟಕ್ಕೆ ಗುತ್ತಿಗೆದಾರರು ಮತ್ತು ಇಲಾಖೆ ಸೇರಿದಂತೆ ಎರಡೂ ತಪ್ಪಾಗಿದೆ. ಪಶ್ಚಿಮ ಘಟ್ಟದಲ್ಲಿ ಸಂಭವಿಸುತ್ತಿರುವ ಭೂಕುಸಿತ ನಿಯಂತ್ರಿಸುವ ಸಲುವಾಗಿ ಶಾಶ್ವತ ಕ್ರಮ ಕೈಗೊಳ್ಳುವ ಕುರಿತು ಚಿಂತನೆ ನಡೆಸಬೇಕಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ

ಹುಲಿಕಲ್ ಘಾಟಿಯಲ್ಲಿ ಸಂಭವಿಸಿದ ದುರಂತದ ವಿಚಾರದಲ್ಲಿ ಮೇಲ್ನೋಟಕ್ಕೆ ಗುತ್ತಿಗೆದಾರರು ಮತ್ತು ಇಲಾಖೆ ಸೇರಿದಂತೆ ಎರಡೂ ತಪ್ಪಾಗಿದೆ. ಪಶ್ಚಿಮ ಘಟ್ಟದಲ್ಲಿ ಸಂಭವಿಸುತ್ತಿರುವ ಭೂಕುಸಿತ ನಿಯಂತ್ರಿಸುವ ಸಲುವಾಗಿ ಶಾಶ್ವತ ಕ್ರಮ ಕೈಗೊಳ್ಳುವ ಕುರಿತು ಚಿಂತನೆ ನಡೆಸಬೇಕಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರಕ್ಕೆ ಹೋಗುವ ಮಾರ್ಗದಲ್ಲಿ ತೀರ್ಥಹಳ್ಳಿ ಸಮೀಪದ ರೆಸಾರ್ಟಿನಲ್ಲಿ ತಂಗಿದ್ದ ಸಚಿವರನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಅತ್ಯಂತ ಕಡಿದಾದ ಘಾಟಿ ರಸ್ತೆಯಲ್ಲಿ ನಡೆದಿರುವ ಕಾಮಗಾರಿಯ ವೇಳೆ ಗೈಡ್‌ಲೈನ್ ಪಾಲನೆ ಕಡ್ಡಾಯವಾಗಿದೆ. ಈ ದುರಂತದ ವಿಚಾರದಲ್ಲಿ ಮುಂಜಾಗ್ರತೆ ವಹಿಸಬೇಕಿದ್ದು ಇದರಲ್ಲಿ ಮೇಲ್ನೋಟಕ್ಕೆ ಗುತ್ತಿಗೆದಾರರು ಮತ್ತು ಇಲಾಖೆ ಎರಡೂ ಕಡೆಯಿಂದಲೂ ತಪ್ಪಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಎಂದರು.

ಹುಲಿಕಲ್ ಘಾಟಿಯಂತೆ ಎರಡು ವರ್ಷಗಳ ಹಿಂದೆ ಕಾರವಾರದಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ಲಾರಿಯೊಂದು ತೇಲಿ ಹೋಗಿರುವ ಘಟನೆ ಕೂಡಾ ಎಚ್ಚರಿಕೆಯ ಘಂಟೆಯಾಗಿದೆ. ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಬರುವ ಐದಾರು ಪ್ರದೇಶದಲ್ಲಿ ಆಗಾಗ ಸಂಭವಿಸುತ್ತಿರುವ ಭೂ ಕುಸಿತವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಶಾಶ್ವತ ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದೆ ಎಂದರು.

ಕೆಲವೊಮ್ಮೆ ಅರಣ್ಯ ಇಲಾಖೆಯಿಂದ ಎದುರಾಗುವ ತಾಂತ್ರಿಕ ಅಡಚಣೆಗಳು ನಮ್ಮ ನಿರ್ಧಾರಗಳಿಗೆ ತಡೆ ಉಂಟು ಮಾಡುತ್ತಿದೆ. ವ್ಯವಸ್ಥೆಯ ದೃಷ್ಟಿಯಿಂದ ಸರ್ಕಾರ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.

ಮಧ್ಯ ಕರ್ನಾಟಕದಿಂದ ಕರಾವಳಿಗೆ ಸಂಪರ್ಕ ಕಲ್ಪಿಸಿ ಸುಗಮ ಸಂಚಾರ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅದರಂತೆ ಹಾಸನ-ಮಂಗಳೂರು ಹೆದ್ದಾರಿ ಕಾಮಗಾರಿ ಮುಗಿದಿದೆ. ಮೂಡಿಗೆರೆ-ಉಜಿರೆ ಕಾಮಗಾರಿ ಆರಂಭವಾಗಬೇಕಿದ್ದು ಸಕಲೇಶಪುರ ಹೆದ್ದಾರಿ ವಿಸ್ತರಣೆ ಕಾರ್ಯ ನಡೆದಿದೆ. ಬೆಂಗಳೂರು ಕರಾವಳಿ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ 169 ಎ ಮಾರ್ಗದ ಆಗುಂಬೆ ಘಾಟಿ ಮಾರ್ಗ ಪ್ರಮುಖವಾಗಿದ್ದು, ಈ ಮಾರ್ಗದ ಅಭಿವೃದ್ದಿಗೆ ವಿಶೇಷ ಆದ್ಯತೆ ನೀಡಬೇಕಿದೆ. ಈ ಬಗ್ಗೆ ಹೆದ್ದಾರಿ ಪ್ರಾಧಿಕಾರ ನಿರ್ಣಯ ಕೈಗೊಳ್ಳಬೇಕಿದೆ. ನಮ್ಮ ಸರ್ಕಾರ ಪೂರ್ಣ ಸಹಕಾರ ನೀಡಲಿದ್ದು ಮುಂದಿನವಾರವೇ ಖುದ್ದಾಗಿ ಆಗುಂಬೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿಯೂ ತಿಳಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಾಸಕ ಕಿಮ್ಮನೆ ರತ್ನಾಕರ್, ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿ, ಪಪಂ ಸದಸ್ಯರು, ಕಾಂಗ್ರೆಸ್ ಪಕ್ಷದ ಪ್ರಮುಖರು ಸಚಿವರನ್ನು ಸ್ವಾಗತಿಸಿದರು.