ಪ್ರಕೃತಿಗೆ ಮತ್ತು ಮಾನವ ಕುಲಕ್ಕೆ ಮಾರಕವಾಗಿರುವ, ಅವೈಜ್ಞಾನಿವಾಗಿರುವ ಶರಾವತಿ ಪಂಪ್ಡ್ ಯೋಜನೆ ವಿರುದ್ಧ ಏ.16ರಂದು ಸೈಕಲ್ ಹಾಗೂ ಮೋಟಾರು ವಾಹನಗಳ ಜಾಥಾವನ್ನು ರಾಷ್ಟ್ರಭಕ್ತ ಬಳಗ ಮತ್ತು ಪರಿಸರಕ್ಕಾಗಿ ನಾವು ಸಂಘಟನೆಗಳಿಂದ ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪ್ರಕೃತಿಗೆ ಮತ್ತು ಮಾನವ ಕುಲಕ್ಕೆ ಮಾರಕವಾಗಿರುವ, ಅವೈಜ್ಞಾನಿವಾಗಿರುವ ಶರಾವತಿ ಪಂಪ್ಡ್ ಯೋಜನೆ ವಿರುದ್ಧ ಏ.16ರಂದು ಸೈಕಲ್ ಹಾಗೂ ಮೋಟಾರು ವಾಹನಗಳ ಜಾಥಾವನ್ನು ರಾಷ್ಟ್ರಭಕ್ತ ಬಳಗ ಮತ್ತು ಪರಿಸರಕ್ಕಾಗಿ ನಾವು ಸಂಘಟನೆಗಳಿಂದ ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಈ ಯೋಜನೆ ವಿರುದ್ಧ ಈಗಾಗಲೇ ಹಲವು ಮಜಲುಗಳಲ್ಲಿ ಹೋರಾಟಗಳನ್ನು ನಡೆಸಿದ್ದು, ಸರ್ಕಾರದ ಮೇಲೆ ತೀವ್ರ ಒತ್ತಡ ಹೇರುವ ಕೆಲಸ ಮಾಡಲಾಗುತ್ತಿದೆ. ಮುಖ್ಯವಾಗಿ ಸಾರ್ವಜನಿಕರಲ್ಲಿ ಈ ಕುರಿತು ಹೆಚ್ಚು ಅರಿವು ಮೂಡಿ ಅವರು ಹೋರಾಟದಲ್ಲಿ ನೇರವಾಗಿ ಭಾಗಿಯಾಗಬೇಕು. ಈ ದೃಷ್ಟಿಯಿಂದ ಹೋರಾಟದ ಕುರಿತಾದ ಕಾರ್ಯಕ್ರಮಗಳು ಮುಂದುವರೆಯಲಿದೆ ಎಂದು ಹೇಳಿದರು.

ಈ ಹೋರಾಟದಲ್ಲಿ ಹಲವಾರು ಸಂಘಟನೆಗಳು ಜೊತೆಯಾಗಲಿದೆ. ಮುಖ್ಯವಾಗಿ ಶಿವಮೊಗ್ಗ ನಗರದ ಅಣ್ಣಾ ಹಜಾರೆ ಹೋರಾಟ ಸಮಿತಿ, ಸೈಕಲ್ ಕ್ಲಬ್, ಸಾಹಸ ಮತ್ತು ಸಾಂಸ್ಕೃತಿಕ ಅಕಾಡೆಮಿ, ತರುಣೋದಯ ಘಟಕ, ಕರ್ನಾಟಕ ರಕ್ಷಣಾ ವೇದಿಕೆ ಸಿಂಹಸೇನೆ ಸೇರಿದಂತೆ ಹಲವಾರು ಸಂಘ-ಸಂಸ್ಥೆಗಳು ಪಾಲ್ಗೊಳ್ಳುತ್ತಿವೆ ಎಂದು ಹೇಳಿದರು.

ಹೋರಾಟದ ಭಾಗವಾಗಿ ಏ.16 ರಂದು ಬೆಳಿಗ್ಗೆ 10 ಗಂಟೆಗೆ ಫ್ರೀಡಂ ಪಾರ್ಕ್‌ನಲ್ಲಿ ಖ್ಯಾತ ವೈದ್ಯ ಡಾ.ಶಿವರಾಮಕೃಷ್ಣ, ಡಾ.ಪಿ.ನಾರಾಯಣ್ ಕಾರ್ಯಕ್ರಮ ಉದ್ಘಾಟಿಸಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದರು.

ಸೈಕಲ್ ಹಾಗೂ ವಾಹನಗಳ ಜಾಥಾದಲ್ಲಿ 400ಕ್ಕೂ ಹೆಚ್ಚು ಬೈಕ್‌ಗಳು, 200ಕ್ಕೂ ಹೆಚ್ಚು ಕಾರುಗಳು ಹಾಗೂ 500ಕ್ಕೂ ಹೆಚ್ಚು ಸೈಕಲ್‌ಗಳು ಭಾಗವಹಿಸುತ್ತಿವೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಿಕೊಂಡರು.

ನಗರದ ಎರಡು ಮಾರ್ಗದಲ್ಲಿ ಸಂಚರಿಸುವ ಜಾಥಾವು ಮಹಾವೀರ ವೃತ್ತದಲ್ಲಿ ಸಂಪನ್ನಗೊಳ್ಳಲಿದ್ದು, ನಂತರ ಸಮಾರೋಪ ಹಾಗೂ ಬಹಿರಂಗ ಸಭೆ ನಡೆಯಲಿದೆ ಎಂದರು.

ಈ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಕಾಮಗಾರಿ ಕೈಗೊಳ್ಳದಂತೆ ಕೆಪಿಸಿಎಲ್ ಗೆ ಹೈಕೋರ್ಟ್ ಆದೇಶಿಸಿದೆ. ಈ ಯೋಜನೆ ಜಾರಿಗೆ ಸಚಿವರೊಬ್ಬರು ಆಸಕ್ತಿ ತೋರಿದ್ದು, ಹತ್ತು ಸಾವಿರ ಕೋಟಿ ರು. ವೆಚ್ಚದ ಈ ಯೋಜನೆಯ ಹಣವನ್ನು ಲೂಟಿ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಈ ಯೋಜನೆ ವಿರುದ್ಧ ಸಾಕಷ್ಟು ವಿರೋಧ ಮತ್ತು ಪ್ರತಿಭಟನೆಗಳು ನಡೆದಿದ್ದು, ಹಲವಾರು ಸಂಘ ಸಂಸ್ಥೆಗಳು, ಮಠಾಧೀಶರು, ಪರಿಸರ ಹೋರಾಟಗಾರರು, ನಿವೃತ್ತ ನ್ಯಾಯಾಧೀಶರು, ವಿಷಯ ತಜ್ಞರು ಯೋಜನೆಯಲ್ಲಿನ ಲೋಪದೋಷಗಳನ್ನು ಕೆಪಿಸಿಎಲ್ಗೆ ಮನವರಿಕೆ ಮಾಡಿಕೊಟ್ಟರೂ ಸಹ ಕೆಪಿಸಿಎಲ್ ಪರಿಸರಕ್ಕೆ ಮತ್ತು ಪಶ್ಚಿಮಘಟ್ಟಗಳಿಗೆ ಮಾರಕವಾಗಿರುವ ಹಾಗೂ ಯಾವುದೇ ಆರ್ಥಿಕ ಲಾಭವನ್ನು ತರದ ಯೋಜನೆಯನ್ನು ಜಾರಿಗೊಳಿಸಲು ಹೊರಟಿರುವುದು ಪ್ರಶ್ನಾರ್ಥಕವಾಗಿದೆ ಎಂದ ಅವರು, ಯಾವುದೇ ಕಾರಣಕ್ಕೂ ಈ ಯೋಜನೆ ಕೈ ಬಿಡುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದರು.

ಪ್ರಮುಖರಾದ ಶ್ರೀಕಾಂತ್, ಡಾ.ಶೇಖರ್ ಗೌಳೇರ್, ಜನಾರ್ಧನ್ ಪೈ, ಪರಿಸರ ರಮೇಶ್, ಎಸ್.ಬಿ.ಅಶೋಕ್ ಗಾಂಧಿ, ಪರಿಸರ ಪ್ರಕಾಶ್, ಹರೀಶ್ ಕಾರ್ಣಿಕ್, ಎಸ್. ವಿಶ್ವೇಶ್ವರಯ್ಯ, ಸುಬ್ರಹ್ಮಣ್ಯ, ಮಹಾದೇವಸ್ವಾಮಿ ಇತರರು ಹಾಜರಿದ್ದರು.