- ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಉಪ ಪ್ರಧಾನಿ ಡಾ.ಬಾಬೂಜಿ 40ನೇ ಪುಣ್ಯಸ್ಮರಣೆ ಕಾರ್ಯಕ್ರಮ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಮ್ ದಲಿತರ ಕ್ಷೇಮಾಭಿವದ್ಧಿಗೆ ಹೋರಾಡಿದ್ದರು. ದಲಿತರಿಗೆ ಸಾಮಾಜಿಕ ನ್ಯಾಯ ಪ್ರತಿಪಾದಿಸುತ್ತಿದ್ದರು. ಅಂಥ ವ್ಯಕ್ತಿಯ ಆದರ್ಶಗಳ ಪಾಲನೆ ನಮ್ಮೆಲ್ಲರಿಂದ ಆಗಬೇಕೆಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಹೇಳಿದರು.ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಯೋಜಿಸಿದ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಮ್ ಅವರ 40ನೇ ಪುಣ್ಯಸ್ಮರಣೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಗಜೀವನ ರಾಮ್ ರವರು ಸ್ವಾತಂತ್ರ‍್ಯ ಹೋರಾಟಗಾರರಾಗಿದ್ದರು. ತುಳಿತಕ್ಕೊಳಗಾದ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸಿದವರು ಅವರ ಸಾಧನೆಗಳು ಅಪಾರವಾಗಿವೆ, ಮತ್ತು ಅವರು ಈ ದೇಶದ ಉಪ ಪ್ರಧಾನಿ ಆಗಿದ್ದ ವೇಳೆ ಕೃಷಿ ಕ್ಷೇತ್ರಕ್ಕೆ ಅವರ ಕೊಡುಗೆ ಮಹತ್ತರವಾಗಿವೆ. ಅವರು ಹಸಿರು ಕ್ರಾಂತಿ ಹರಿಕಾರರೆಂದು ಹೆಸರು ಪಡೆದವರಾಗಿದ್ದಾರೆ ಎಂದರು.
ದೇಶಾದ್ಯಂತ ''''ಬಾಬುಜಿ'''' ಎಂದೇ ಕರೆಯಲ್ಪಡುವ ಜಗಜೀವನ ರಾಮ್ ಧೀಮಂತ ರಾಷ್ಟ್ರೀಯ ನಾಯಕ, ಸ್ವಾತಂತ್ರ‍್ಯ ಮತ್ತು ಸಾಮಾಜಿಕ ನ್ಯಾಯ ಹೋರಾಟಗಾರ ಹಾಗೂ ಅತ್ಯುತ್ತ್ತಮ ಸಂಸದೀಯ ಪಟುವಾಗಿದ್ದರು. ಬಾಬು ಜಗಜೀವನ ರಾಮ್ ಅವರು ಸ್ವಾತಂತ್ರ‍್ಯ ಹೋರಾಟಗಾರರಾಗಿ, ಸಂವಿಧಾನ ರಚನಾ ಸಭೆಯ ಸದಸ್ಯರಾಗಿ ಮತ್ತು ಮೊದಲ ಉಪ ಪ್ರಧಾನಿಯಾಗಿ ನಮ್ಮ ದೇಶಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ ಎಂದರು. ಬಾಬು ಜಗಜೀವನ ರಾಮ್ ಅವರು ಈ ದೇಶಕ್ಕೆ ನೀಡಿದ ಕೊಡುಗೆಯನ್ನು ಮುಂದಿನ ಯುವ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ದಾವಣಗೆರೆ ಮಹಾನಗರ ಪಾಲಿಕೆ ಮುಂಭಾಗ ಸುಮಾರು 20 ವರ್ಷಗಳ ಹಿಂದೆಯೇ ಅವರ ಪುತ್ಥಳಿಯನ್ನು ಸ್ಥಾಪಿಸಿದೆವು ಎಂದರು.
ಭಾರತದ ಸ್ವಾತಂತ್ರ‍್ಯ ಪೂರ್ವ ಮತ್ತು ಸ್ವಾತಂತ್ರ‍್ಯ ನಂತರದ ರಾಜಕಾರಣದಲ್ಲಿ ಬಾಬು ಜಗಜೀವನರಾಮ್ ಪಾತ್ರ ಪ್ರಮುಖವಾಗಿದೆ. ಭಾರತದಲ್ಲಿ ದೀರ್ಘ ಕಾಲದಿಂದ ಬೆಳೆದುಕೊಂಡು ಬಂದಿದ್ದ ಮೇಲು-ಕೀಳು ತಾರತಮ್ಯ, ಜಾತಿ ಪದ್ಧತಿ, ಅಸ್ಪೃಶ್ಯ ಎಂಬ ಮನೋಭಾವಗಳನ್ನು ತೊಡೆದು ಹಾಕಲು ಸಾಮಾಜಿಕ ನೆಲೆಗಟ್ಟಿನಲ್ಲಿ ಹೋರಾಡಿದವರು ಅನೇಕರು. ಆದರೆ ಅವರ ಏಳಿಗೆಗೆ ಹೆಚ್ಚಿನ ಚುರುಕು ನೀಡಿ ಒಂದು ಸ್ಪಷ್ಟ ರೂಪ ಕೊಟ್ಟ ಕೆಲವೇ ಕೆಲವು ನಾಯಕರಲ್ಲಿ ಬಾಬು ಜಗಜೀವನ ರಾಮ್ ಒಬ್ಬರು ಎಂದರು.ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ನಾಮನಿರ್ದೇಶಿತ ಸದಸ್ಯ ಎಲ್.ಎಚ್.ಸಾಗರ್, ರಾಕೇಶ್, ಶಂಕರ್, ಸುರೇಶ್ ಜಾಧವ್, ಯುವರಾಜ್, ಮುಜಾಹಿದ್, ಮಹಿಳಾ ಕಾಂಗ್ರೆಸ್‌ನ ದಾಕ್ಷಾಯಣಮ್ಮ, ರಾಜೇಶ್ವರಿ ಮತ್ತಿತರರು ಭಾಗಿಯಾಗಿದ್ದರು.
- - --6ಕೆಡಿವಿಜಿ31: ದಾವಣಗೆರೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಡಾ.ಬಾಬು ಜಗಜೀವನ ರಾಮ್ 40ನೇ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು.