ಪ್ರಥಮ ಪ್ರಯೋಗ ಏಕ ವ್ಯಕ್ತಿ ಪ್ರದರ್ಶನ ಯಕ್ಷರಾಮ ಕಥಾ ಕಾರ್ಯಕ್ರಮ ಉದ್ಘಾಟನೆ

ಕನ್ನಡಪ್ರಭ ವಾರ್ತೆ ಸಿದ್ದಾಪುರ

ನೃತ್ಯ, ವೇಷ, ಸಾಹಿತ್ಯ, ಸಂಗೀತ, ವಾದನ, ಮಾತುಗಾರಿಕೆ ಮುಂತಾದ ಎಲ್ಲ ವಿಶೇಷತೆಗಳೂ ಬೆರೆತ ಯಕ್ಷಗಾನ ಕಲೆಗಳ ರಾಜ ಎಂದು ತಾಲೂಕಿನ ಶಿರಳಗಿಯ ಚೈತನ್ಯ ರಾಜಾರಾಮ ಕ್ಷೇತ್ರದ ಬ್ರಹ್ಮಾನಂದ ಭಾರತೀ ಸ್ವಾಮಿಗಳು ಹೇಳಿದರು.

ಶ್ರೀ ಕ್ಷೇತ್ರದಲ್ಲಿ ಬಾಲ ಭಾರತೀ ಸಂಘಟನೆ ಆಯೋಜಿಸಿದ ಸಂಸ್ಕಾರ ಸುಧಾ ಎನ್ನುವ ಮಕ್ಕಳ ಶಿಬಿರದ ಸಂದರ್ಭದಲ್ಲಿ ಶ್ರೀ ಅನಂತ ಯಕ್ಷಕಲಾ ಪ್ರತಿಷ್ಠಾನದವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನ ಸಹಾಯ ಯೋಜನೆಯ ಸಹಯೋಗದಲ್ಲಿ ಜರುಗಿದ ಪ್ರಥಮ ಪ್ರಯೋಗ ಏಕ ವ್ಯಕ್ತಿ ಪ್ರದರ್ಶನ ಯಕ್ಷರಾಮ ಕಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಾಹಿತ್ಯ, ಕಲೆ, ಸಂಗೀತಗಳ ಸಂಪರ್ಕವಿಲ್ಲದವನು ಪಶುವಿಗಿಂತಲೂ ಕಡೆ ಎನ್ನುವ ಮಾತಿದೆ. ನಮ್ಮ ಬದುಕಿಗೆ ಸುಖ ಸಿಗುವುದು ಸಂಪಾದನೆ ಮತ್ತು ಮೋಜು, ಆರಾಮಗಳಿಂದ ಎಂದು ತಿಳಿದಿದ್ದರೆ ತಪ್ಪು. ನಿಜವಾದ, ಸೂಕ್ಷ್ಮವಾದ ಸುಖ ಸಿಗುವುದು ಸಾಹಿತ್ಯ, ಸಂಗೀತದಂಥ ಕಲೆಗಳಿಂದ. ಶ್ರೀರಾಮನ ಕುರಿತಾದ ಈ ಪ್ರಾತ್ಯಕ್ಷಿಕೆ ಬೇರೆ ಬೇರೆ ಯಕ್ಷಗಾನ ಪ್ರಸಂಗಗಳಿಂದ ಆಯ್ದ ಪದ್ಯಗಳ ಗಾಯನ ಮತ್ತು ಯಕ್ಷಗಾನ ನೃತ್ಯದಿಂದ ಕೂಡಿದ್ದು ಎಂದರು.


ಪತ್ರಕರ್ತ, ಸಾಹಿತಿ ಗಂಗಾಧರ ಕೊಳಗಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಗೂ ಆಯಾ ಪ್ರದೇಶದ ಕಲೆಗಳು ಸಂಸ್ಕಾರ ಕಟ್ಟಿಕೊಡುತ್ತವೆ. ಈ ಪ್ರದೇಶದ ನಮಗೆಲ್ಲ ಜಾತಿ, ಧರ್ಮ, ಅಂತಸ್ತು ಮೀರಿ ಯಕ್ಷಗಾನ ಒಂದಿಷ್ಟು ಸಂಸ್ಕಾರ ನೀಡಿದೆ ಎಂದರು.

ಪ್ರಸಿದ್ಧ ಯಕ್ಷಗಾನ ಭಾಗವತ, ಶ್ರೀ ಅನಂತ ಯಕ್ಷ ಕಲಾ ಪ್ರತಿಷ್ಠಾನದ ಕಾರ್ಯದರ್ಶಿ ಕೇಶವ ಹೆಗಡೆ ಕೊಳಗಿ ಪ್ರಾಸ್ತಾವಿಕ ಮಾತನಾಡಿದರು.

ಪ್ರಸಿದ್ಧ ಮದ್ದಳೆ ವಾದಕ ಶರತ್ ಜಾನಕೈ ಪಾಲ್ಗೊಂಡಿದ್ದರು.

ಹಲವು ಯಕ್ಷಗಾನ ಪ್ರಸಂಗಗಳ ಪದ್ಯಗಳನ್ನು ಸಂಯೋಜಿಸಿ ರೂಪಿಸಿದ ಯಕ್ಷ ರಾಮ ಕಥಾ ಏಕವ್ಯಕ್ತಿ ಪ್ರದರ್ಶನದಲ್ಲಿ ಶ್ರೀರಾಮನ ಪಾತ್ರದಲ್ಲಿ ಪ್ರಸಿದ್ಧ ಕಲಾವಿದ ವಿನಾಯಕ ಹೆಗಡೆ ಕಲಗದ್ದೆ ನೃತ್ಯ ಮತ್ತು ಅಭಿನಯದ ಮೂಲಕ ರಾಮನ ಪಾತ್ರಕ್ಕೆ ವಿಶಿಷ್ಠತೆಯನ್ನು ತಂದುಕೊಟ್ಟರು. ಭಾಗವತಿಕೆಯಲ್ಲಿ ಪ್ರಸಿದ್ಧ ಭಾಗವತ ಕೇಶವ ಹೆಗಡೆ ಕೊಳಗಿ, ಚಂಡೆವಾದನದಲ್ಲಿ ಶರತ್ ಜಾನಕೈ, ಚಂಡೆ ವಾದನದಲ್ಲಿ ಆದಿತ್ಯ ಕೆರೆಕೊಪ್ಪ ಅತ್ಯುತ್ತಮ ಹಿಮ್ಮೇಳ ಒದಗಿಸಿದರು. ವ್ಯಾಖ್ಯಾನಕಾರರಾಗಿ ಗಣಪತಿ ಹೆಗಡೆ ನಿರ್ವಹಿಸಿದರು.

ರಾಜ್ಯದ ವಿವಿಧ ಭಾಗಗಳಿಂದ ಶಿಬಿರದಲ್ಲಿ ಪಾಲ್ಗೊಂಡ, ಮೊದಲ ಬಾರಿಗೆ ಯಕ್ಷಗಾನವನ್ನು ಕಂಡ ಮಕ್ಕಳು ಈ ಕಾರ್ಯಕ್ರಮದಿಂದ ಸಂತೋಷಪಟ್ಟರು.