ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡುಜಾತ್ರಾ ಮಹೋತ್ಸವದಲ್ಲಿ ಗೋಲಕದ ಹುಂಡಿ ಇಡುವ ವಿಚಾರದಲ್ಲಿ ದೇವಾಲಯದ ಸುತ್ತಲಿನ ಗ್ರಾಮಸ್ಥರ ನಡುವೆ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ತಾಲೂಕಿನ ವಳಗೆರೆ ಸಮೀಪದಲ್ಲಿರುವ ಶ್ರೀ ಗಡಿ ಭೈರವೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆಯಬೇಕಿದ್ದ ಜಾತ್ರಾ ಮಹೋತ್ಸವವನ್ನು ರದ್ದುಪಡಿಸಿ ದೇವಾಲಯದ ಸುತ್ತಲಿನ ಪ್ರದೇಶದಲ್ಲಿ ನಿಷೇಧಾಜ್ಞೆ ವಿಧಿಸಿ ತಹಸೀಲ್ದಾರ್ ಶಿವಕುಮಾರ ಕಾಸ್ನೂರು ಆದೇಶಿಸಿದ್ದಾರೆ.ಪೂರ್ವ ನಿಗದಿಯಂತೆ ಬುಧವಾರ ಪುರಾಣ ಪ್ರಸಿದ್ಧ ಗಡಿ ಭೈರವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ನಡೆಯಬೇಕಿತ್ತಾದರೂ ಕಾನೂನು ಸುವ್ಯವಸ್ಥೆ ಹದಗೆಡುವ ಭೀತಿಯಿಂದಾಗಿ ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು ಭಾರತೀಯ ನ್ಯಾಯ ಸಂಹಿತೆ ಕಲಂ. 163ರನ್ವಯ (ಈ ಹಿಂದಿನ ಐಪಿಸಿ 144) ತಮ್ಮ ಅಧಿಕಾರವನ್ನು ಬಳಸಿಕೊಂಡು ಫೆ. 11 ಹಾಗೂ 12ರವರೆಗೆ ವಳಗೆರೆ ಗ್ರಾಮದ ಹೊರ ವಲಯದಲ್ಲಿರುವ ಗಡಿಭೈರವೇಶ್ವರ ದೇವಾಲಯದ ಸುತ್ತಲಿನ 500 ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಈ ಸಮಯದಲ್ಲಿ ಯಾವುದೇ ಪೂಜೆ, ರಥೋತ್ಸವ ಹಾಗೂ ತೇರಿನ ಮೆರವಣಿಗೆಯನ್ನು ನಡೆಸದಂತೆ ಹಾಗೂ ವಳಗೆರೆ, ಹುಸ್ಕೂರು ಹಾಗೂ ಶಿರಮಳ್ಳಿ ಗ್ರಾಮದಲ್ಲಿ ಯಾವುದೇ ರಥೋತ್ಸವ ದೇವರ ಮೆರವಣಿಗೆ ಹಾಗೂ ಜಾತ್ರೆಯನ್ನು ನಡೆಸದಂತೆ ಸೂಚಿಸಿದ್ದಾರೆ. ಜೊತೆಗೆ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಕಾನೂನು ರೀತ್ಯ ಕ್ರಮಗಳನ್ನು ಕೈಗೊಳ್ಳಲು ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರಿಗೆ ಸೂಚಿಸಿದ್ದಾರೆ.ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿರುವ ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು ಗಡಿ ಭೈರವೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಆಚರಣೆಗೆ ಸಂಬಂಧಿಸಿದಂತೆ 6 ಶಾಂತಿ ಸಭೆಗಳನ್ನು ನಡೆಸಲಾಯಿತಾದರೂ ಜಾತ್ರೆಯಲ್ಲಿ ಗೋಲಕದ ಹುಂಡಿ ಕಟ್ಟುವ ವಿಚಾರದಲ್ಲಿ ಮೂರೂ ಗ್ರಾಮಗಳ ಗ್ರಾಮಸ್ಥರ ನಡುವೆ ಇದ್ದ ಭಿನ್ನಾಭಿಪ್ರಾಯ ಬಗೆಹರಿಯಲಿಲ್ಲ, ಜಾತ್ರೆ ಆಚರಣೆಗೆ ಸಂಬಂಧಿಸಿದಂತೆ ಒಮ್ಮತದ ಅಭಿಪ್ರಾಯ ಬರಲಿಲ್ಲ.ಇದರಿಂದಾಗಿ ಕಾನೂನು ಸುವ್ಯವಸ್ಥೆ ಹದಗೆಡಬಹುದು ಎಂಬ ಆತಂಕದಿಂದ ಜಾತ್ರೆ ನಡೆಯುವ ಸ್ಥಳದ ಸುತ್ತಲಿನ ಪ್ರದೇಶದಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ, ಜೊತೆಗೆ ದೇವಾಲಯದ ಆವರಣ ಸೇರಿದಂತೆ ಸುತ್ತಲಿನ ಮೂರೂ ಗ್ರಾಮಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಹೇಳಿದರು.