ಸಾರಾಂಶ
ದೇವಸ್ಥಾನದ ಅಭಿವೃದ್ಧಿ ಪೂರಕವಾಗಿ ಹೆಚ್ಚು ಆದಾಯ ನಿರೀಕ್ಷೆ ಇಟ್ಟುಕೊಂಡು, ಆವರಣದಲ್ಲಿ ಹುಂಡಿಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಆ ಹುಂಡಿಗಳನ್ನು ವಿವಿಧ ಕಡೆಗಳಲ್ಲಿ ಅಳವಡಿಸಲಾಯಿತು.
ಹೂವಿನಹಡಗಲಿ: ತಾಲೂಕಿನ ಮೈಲಾರಲಿಂಗೇಶ್ವರ ಜಾತ್ರೆಯ ಅಂಗವಾಗಿ ಭರತ ಹುಣ್ಣಿಮೆಯಂದು ಧ್ವಜಾರೋಹಣ, ನಂತರದಲ್ಲಿ ದೇಗುಲದ ಉದ್ಭವ ಲಿಂಗುವಿಗೆ ಮೌನವಾಗಿಯೇ ಅಭಿಷೇಕ, ಅರ್ಚನೆ ಮಾಡುವ ಜತೆಗೆ ದೇವಸ್ಥಾನದ 8 ಕಡೆಗಳಲ್ಲಿ ತಾತ್ಕಾಲಿಕ ಹುಂಡಿ, ಒಂದು ಸಂಚಾರಿ ಹುಂಡಿಗೆ ಪೂಜೆ ಸಲ್ಲಿಸಲಾಯಿತು.
ದೇವಸ್ಥಾನದ ಆವರಣದಲ್ಲಿ ದೇವಸ್ಥಾನದ ವಂಶ ಪಾರಂಪರ್ಯ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್, ಧ್ವಜಕ್ಕೆ ಪೂಜೆ ಸಲ್ಲಿಸಿದ ಬಳಿಕ ಧ್ವಜಾರೋಹಣ ನೆರವೇರಿಸಿದರು. ದೇವಸ್ಥಾನದ ಅಭಿವೃದ್ಧಿ ಪೂರಕವಾಗಿ ಹೆಚ್ಚು ಆದಾಯ ನಿರೀಕ್ಷೆ ಇಟ್ಟುಕೊಂಡು, ಆವರಣದಲ್ಲಿ ಹುಂಡಿಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಆ ಹುಂಡಿಗಳನ್ನು ವಿವಿಧ ಕಡೆಗಳಲ್ಲಿ ಅಳವಡಿಸಲಾಯಿತು.ಮೈಲಾರಲಿಂಗೇಶ್ವರನು 11 ದಿನಗಳ ಕಾಲ ಡೆಂಕಣ ಮರಡಿಯಲ್ಲಿ ಮಲ್ಲಾಸುರ, ಮಣಿಕಾಸುರರೊಂದಿಗೆ ಯುದ್ಧ ಮಾಡುತ್ತಿದ್ದಾರೆ. ದೇವಸ್ಥಾನದಲ್ಲಿ ನೈವೈದ್ಯ, ಗಂಟೆನಾದ ಮಂಗಳಾರುತಿ ಪದ್ಧತಿ ಇರುವುದಿಲ್ಲ ಎಂದು ದೇವಸ್ಥಾನದ ವಂಶ ಪಾರಂಪರ್ಯ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್ ಮಾಹಿತಿ ನೀಡಿದರು.
ವಿವಿಧ ಜಿಲ್ಲೆಗಳ ತಾಲೂಕುಗಳಿಂದ ಭಕ್ತರು ಭರತ ಹುಣ್ಣಿಮೆಯನ್ನು ಮೈಲಾರ ಸುಕ್ಷೇತ್ರದಲ್ಲೇ ಆಚರಿಸಬೇಕೆಂಬ ಉದ್ದೇಶದಿಂದ ಪಾದಯಾತ್ರೆ ಸೇರಿದಂತೆ ಎತ್ತಿನ ಬಂಡಿ ಮತ್ತು ಟ್ರ್ಯಾಕ್ಟರ್, ವಾಹನಗಳಲ್ಲಿ ಮೈಲಾರಕ್ಕೆ ಆಗಮಿಸುತ್ತಿದ್ದಾರೆ. ಬಂದ ಭಕ್ತರು ದೇವಸ್ಥಾನದ ಆವರಣದಲ್ಲಿ ದೋಣಿ ಸೇವೆ, ದೀವಟಿಕೆ ಮತ್ತು ಕುದುರೆ ಸೇವೆಯನ್ನು ಸಲ್ಲಿಸಿದ್ದಾರೆ.ಡೆಂಕಣ ಮರಡಿಯಲ್ಲಿ 11 ದಿನಗಳ ಕಾಲ ವ್ರತಾಚರಣೆಯಲ್ಲಿರುವ ಕಾರ್ಣಿಕ ನುಡಿಯುವ ಗೊರವಯ್ಯ ಹಾಗೂ ಐತಿಹಾಸಿಕ ಬಿಲ್ಲಿನ ದರ್ಶನವನ್ನು ಭಕ್ತರು ಪಡೆದರು.