- ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಕಲಾವಿದರು ಭೇಟಿ ಕಾರ್ಯಕ್ರಮದಲ್ಲಿ ಪ್ರೊ.ಕುಂಬಾರ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕಲೆಯನ್ನೇ ಉಸಿರಾಗಿಸಿಕೊಂಡ ಕಲಾವಿದರ ಜೀವನ ಸಿಗುವುದು ದುರ್ಲಭವಾಗಿದ್ದು, ಅಂತಹ ಕಲೆ ಇಲ್ಲದಿದ್ದರೆ ಮನುಷ್ಯನ ಬದುಕಿಗೆ ಅರ್ಥವೇ ಇರುವುದಿಲ್ಲ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ.ಡಿ.ಕುಂಬಾರ ಹೇಳಿದರು.

ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಭಾನುವಾರ ದಾವಣಗೆರೆ ವಿಶ್ವವಿದ್ಯಾನಿಲಯ ಹಾಗೂ ಆರ್ಟ್ ಪಾರ್ಕ್ ಸಹಯೋಗದಲ್ಲಿ ಕಲಾವಿದರು ಮತ್ತು ಸಾರ್ವಜನಿಕರ ನಡುವೆ ಬಾಂಧವ್ಯ ಬೆಸೆಯುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಕಲಾವಿದರ ಭೇಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾತನಾಡಿದರು, ಸಾಮಾನ್ಯನನ್ನೂ ಶ್ರೇಷ್ಠನನ್ನಾಗಿಸುವ ಶಕ್ತಿಯು ಕಲೆ, ಸಂಗೀತಕ್ಕೆ ಇದೆ ಎಂದರು.

ದೃಶ್ಯಕಲಾ ಕಾಲೇಜಿನ ವಜ್ರ ಮಹೋತ್ಸವ ಯಶಸ್ವಿಯಾಗುವಲ್ಲಿ ಹಳೆಯ ವಿದ್ಯಾರ್ಥಿಗಳ ಕೊಡುಗೆ ಸಾಕಷ್ಟಿದೆ. ದೇಶ, ವಿದೇಶಗಳಲ್ಲಿ ಸಾಧನೆ ಮಾಡುತ್ತಿರುವಂತಹ ಹಿರಿಯ ಕಲಾವಿದರು ಕಿರಿಯರಿಗೆ ಪ್ರೇರಣೆ, ಮಾರ್ಗದರ್ಶನ ನೀಡಬೇಕು. ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಹಿರಿಯ ಕಲಾವಿದರು ಸಹಕರಿಸಬೇಕು. ಈ ನಿಟ್ಟಿನಲ್ಲಿ ಈ ಕಾರ್ಯಕ್ರಮದಲ್ಲಿ ಹಿರಿಯ ಹಾಗೂ ಕಿರಿಯ ಕಲಾವಿದರ ಸಂಗಮವಾಗಿದೆ ಎಂದು ಅವರು ಶ್ಲಾಘಿಸಿದರು.


ಹಳೆಯ ವಿದ್ಯಾರ್ಥಿ, ಹಿರಿಯ ಕಲಾವಿದ ಚಿ.ಸು.ಕೃಷ್ಣಶೆಟ್ಟಿ ಮಾತನಾಡಿ, ಜನರೊಂದಿಗೆ ಸಂವಹನ ಮಾಡಿದಾಗ, ಜನರ ಗಮನ ಸೆಳೆದಾಗ ಮಾತ್ರ ಕಲೆ ಸಾರ್ಥಕವಾಗುತ್ತದೆ ಎಂದರು.

ಆರ್ಟ್ ಪಾರ್ಕ್ ಅಧ್ಯಕ್ಷೆ ಭಾಗ್ಯ ವಿಜಯಕುಮಾರ ಅಧ್ಯಕ್ಷತೆ ವಹಿಸಿದ್ದರು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಸಂಸ್ಥೆ ಸಂಸ್ಥಾಪಕ ಎಸ್.ಜಿ.ವಾಸುದೇವ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಎಂ.ಸಿ.ರಮೇಶ, ದಾವಣಗೆರೆ ವಿವಿ ಕುಲ ಸಚಿವ ಎಸ್.ಬಿ.ಘಂಟಿ, ಹರಿಹರ ಕುಮಾರಪಟ್ಟಣಂ ಗ್ರಾಸೀಂ ಇಂಡಸ್ಟ್ರೀಸ್ ಲೇಡಿಸ್ ಕ್ಲಬ್ ಅಧ್ಯಕ್ಷೆ ಡಾ. ಲಿಪಿ ಮೊಹಾಂತಿ, ಕಾಲೇಜು ಪ್ರಾಚಾರ್ಯ ಡಾ.ಸತೀಶಕುಮಾರ ಪಿ.ವಲ್ಲೇಪುರೆ, ಸಹಾಯಕ ಪ್ರಾಧ್ಯಾಪಕ ಡಾ.ಜೈರಾಜ್ ಚಿಕ್ಕಪಾಟೀಲ್, ಹಿರಿಯ ಕಲಾವಿದರಾದ ವೆಂಕಟಾಚಲಪತಿ, ರವೀಂದ್ರ ಕಮ್ಮಾರ್, ಎಚ್.ಬಿ.ಮಂಜುನಾಥ, ಬಾ.ಮ. ಬಸವರಾಜಯ್ಯ, ಹನುಮಂತಾಚಾರಿ, ಕಾರ್ಯಕ್ರಮ ಸಂಯೋಜಕರಾದ ಹರೀಶ ಮಾಳಪ್ಪನವರ್, ಡಿ.ಎನ್. ಪ್ರದೀಪ್ ಕುಮಾರ್ ಕಾರ್ಯಕ್ರಮದಲ್ಲಿ ಇದ್ದರು. ನೇರ್‍ಲಿಗಿ ಕಿಂದರಜೋಗಿ ಹೊಳೆಯಪ್ಪ ಮತ್ತು ತಂಡದವರು ಜನಪದ ಗೀತಗಾಯನ ನಡೆಸಿಕೊಟ್ಟರು.

- - -

(ಬಾಕ್ಸ್‌)

* ಕಲಾವಿದರು, ಜನರ ಸಂಗಮಕ್ಕೆ ಸಾಕ್ಷಿಯಾದ ಕಾರ್ಯಕ್ರಮ

ದಾವಣಗೆರೆ: ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿ ಭಾನುವಾರ ಕಲಾವಿದರ ಭೇಟಿ ಕಾರ್ಯಕ್ರಮದಲ್ಲಿ 30ಕ್ಕೂ ಅಧಿಕ ಕಲಾವಿದರು ಪಾಲ್ಗೊಂಡು, ತಮ್ಮ ಕಲಾ ಶ್ರೀಮಂತಿಕೆ ಪ್ರದರ್ಶಿಸಿದರು.

ಸಾರ್ವಜನಿಕರಿಗೆ ಮುಕ್ತ ಅವಕಾಶವಿದ್ದ ಕಾರ್ಯಕ್ರಮದಲ್ಲಿ ಕಲಾವಿದರು ಸೃಜನಶೀಲ, ಸಾಂಪ್ರಾದಾಯಿಕ, ನೈಜಶೈಲಿ, ಗ್ರಾಫಿಕ್, ಶಿಲ್ಪಕಲೆ, ಮಣ್ಣಿನ ಕಲಾಕೃತಿ, ಕ್ಯಾರಿಕೇಚರ್, ಪ್ರಕೃತಿ ಚಿತ್ರ, ವ್ಯಕ್ತಿ ಚಿತ್ರ, ರೇಖಾ ಚಿತ್ರ ಕಲಾಕೃತಿ ರಚನೆಯಲ್ಲಿ ಮಗ್ನರಾಗಿದ್ದರಲ್ಲದೇ, ಜನರ ಮಣ್ಣಿನ ಕಲಾಕೃತಿ, ರೇಖಾ ಚಿತ್ರ, ಬಣ್ಣದ ಚಿತ್ರಗಳನ್ನು ಬಿಡಿಸುವ ಮೂಲಕ ಮೂಕವಿಸ್ಮಿತರನ್ನಾಗಿಸಿದ್ದು ಗಮನ ಸೆಳೆಯಿತು.

ಕಲಾವಿದರ ಚಿತ್ರರಚನೆಯನ್ನು ನೇರವಾಗಿ ಆಸ್ವಾದಿಸುವ ಜೊತೆಗೆ ಕಲಾಕೃತಿಗಳನ್ನು ಕಡಿಮೆ ದರದಲ್ಲಿ ಖರೀದಿಸುವುದಕ್ಕೂ ಜನರಿಗೆ ಅವಕಾಶ ಕಲ್ಪಿಸಲಾಗಿತ್ತು. ಜನಸಾಮಾನ್ಯರು ಕಲಾವಿದರೊಂದಿಗೆ ಮುಕ್ತವಾಗಿ ಬೆರೆತು ಸಂವಾದ ಮಾಡುವ ಮೂಲಕ ಕಲೆ ಹಾಗೂ ಕಲಾವಿದರ ಬಗ್ಗೆ ಅರಿಯಲು ಕಾರ್ಯಕ್ರಮವು ವೇದಿಕೆ ಕಲ್ಪಿಸಿದ್ದು ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮ ಹೆಚ್ಚಾಗಲು ಪ್ರೇರಣೆಯಾಯಿತು.

ಬೆಂಗಳೂರಿನ ಹೊರಗೆ ಮೈಸೂರು, ಬಾಗಲಕೋಟೆಯಲ್ಲಿ ಮೀಟ್ ದಿ ಆರ್ಟಿಸ್ಟ್ ಕಾರ್ಯಕ್ರಮ ಯಶಸ್ವಿಯಾಗಿದ್ದು, ಇದೇ ಮೊದಲ ಬಾರಿಗೆ ದಾವಣಗೆರೆಯಲ್ಲಿ ಕಲಾವಿದರ ಭೇಟಿ ಕಾರ್ಯಕ್ರಮ ನಡೆಯಿತು. ಧಾರವಾಡ, ಬೆಂಗಳೂರು, ವಿಜಯಪುರ ಜಿಲ್ಲೆಗಳಿಂದಲೂ ಕಲಾವಿದರು ಪಾಲ್ಗೊಂಡು, ತಮ್ಮ ಕಲಾ ಪ್ರೌಢಿಮೆ ಪ್ರದರ್ಶಿಸಿದರು. ನೇರವಾಗಿ ವ್ಯಕ್ತಿಚಿತ್ರ, ಕ್ಲೇ ಮಾಡೆಲಿಂಗ್ ಮಾಡುವ ಜೊತೆಗೆ ಕಲೆಯ ಕುರಿತಂತೆ ಜನರ ಸಂದೇಹಗಳಿಗೆ ಕಲಾವಿದರು ಉತ್ತರಿಸಿದರು.

- - -

-17ಕೆಡಿವಿಜಿ5, 6: ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಭಾನುವಾರ ಕಲಾವಿದರ ಭೇಟಿ ಕಾರ್ಯಕ್ರಮಕ್ಕೆ ದಾವಿವಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಚಾಲನೆ ನೀಡಿ, ಚಿತ್ರರಚನೆಯಲ್ಲಿ ತೊಡಗಿದ್ದ ಸ್ಥಳಕ್ಕೆ ಭೇಟಿ ನೀಡಿ ಕಲಾಕೃತಿಗಳನ್ನು ವೀಕ್ಷಿಸಿದರು.

-18ಕೆಡಿವಿಜಿ35: ಆರ್ಟ್ ಪಾರ್ಕ್ ಕಲಾವಿದರ ಭೇಟಿ ಕಾರ್ಯಕ್ರಮದಲ್ಲಿ ಸಂಸದೆ ಡಾ.ಪ್ರಭಾ ಕ್ಯಾನ್ವಾಸ್ ಮೇಲೆ ಸಂದೇಶ ಬರೆದು ಹಸ್ತಾಕ್ಷರ ನೀಡಿದರು.