ಕನ್ನಡಪ್ರಭ ವಾರ್ತೆ ಬೆಂಗಳೂರು:
ರಾಜ್ಯದಲ್ಲಿ ಮುಂಗಾರುಪೂರ್ವ ಮಳೆಯ ಆರ್ಭಟ ಮುಂದುವರಿದಿದೆ. ರಾಜಧಾನಿ ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಸೋಮವಾರ ಮಳೆಯಾಗಿದ್ದು, ಸಿಡಿಲಬ್ಬರದ ಮಳೆಗೆ ಮೂವರು ಬಲಿಯಾಗಿದ್ದಾರೆ.ಗದಗಿನ ಹೊರವಲಯದ ಒಕ್ಕಲಗೇರಿ ಓಣಿ ನಿವಾಸಿ, ಕುರಿಗಾಹಿ, ಮರೆತಮ್ಮಪ್ಪ (52) ಎಂಬುವರು ಮನೆಯ ಹೊರಗೆ ಮಲಗಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಗಾಳಿ-ಮಳೆಗೆ ಹೆಸ್ಕಾಂನ ವಿದ್ಯುತ್ ಕಂಬವೊಂದು ಮುರಿದು ಬಿದ್ದು, ಕುರಿಗಾಯಿ ಮಂಜಪ್ಪ (26) ಎಂಬುವರು ಅಸುನೀಗಿದ್ದಾರೆ. ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಮಲೆಕಂಬಳೂರು ಗ್ರಾಮದ ಸರ್ಕಾರಿ ಶಾಲೆಯ ಹೆಡ್‌ಮಾಸ್ಟರ್ ನಾಗರಾಜಪ್ಪ (45) ಎಂಬುವರು ಸಿಡಿಲಿನ ಅಬ್ಬರಕ್ಕೆ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. ಮನೆ ಮುಂದೆ ನಿಂತು ಮಳೆ ವೀಕ್ಷಿಸುತ್ತಿದ್ದಾಗ ಸಿಡಿಲು ಬಡಿಯಿತು.
ಬೆಂಗಳೂರಿನಲ್ಲಿ ಸೋಮವಾರ ಮಧ್ಯಾಹ್ನದ ನಂತರ ಮಳೆ ಆರ್ಭಟಿಸಿತು. ಸುಮಾರು 2 ಗಂಟೆ ಕಾಲ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡಿತ್ತು. ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡು ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರು. ತಗ್ಗು ಪ್ರದೇಶಗಳು, ಅಂಡರ್‌ಪಾಸ್‌ಗಳು ಜಲಾವೃತಗೊಂಡಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಕೆಲ ಅಂಡರ್‌ಪಾಸ್‌ಗಳಲ್ಲಿ ಸುಮಾರು 1 ಅಡಿ ಎತ್ತರದವರೆಗೂ ನೀರು ನಿಂತಿತ್ತು.ಹುಬ್ಬಳ್ಳಿಯಲ್ಲಿ ಮಳೆ-ಗಾಳಿ ಆರ್ಭಟಕ್ಕೆ 25ಕ್ಕೂ ಅಧಿಕ ಮರಗಳು ಧರೆಗುರುಳಿದರೆ, 10ಕ್ಕೂ ಅಧಿಕ ಮನೆ, ಎರಡು ಕಾರು, 5 ಬೈಕ್ ಗಳು ಜಖಂಗೊಂಡಿವೆ. ಬೆಳಗಾವಿ ಜಿಲ್ಲೆಯ ಹಲವೆಡೆ ಮಧ್ಯಾಹ್ನದ ನಂತರ ಸುಮಾರು ಎರಡು ಗಂಟೆ ಭಾರೀ ಮಳೆಯಾಗಿದ್ದು, ಬೈಲಹೊಂಗಲ-ಮುನವಳ್ಳಿ ಸಂಪರ್ಕ ಸೇತುವೆ, ಸವದತ್ತಿ ತಾಲೂಕಿನ ಹೊಸೂರ ಬಳಿಯ ಯಕ್ಕುಂಡಿ ಸೇತುವೆಗಳು ಸಂಪೂರ್ಣ ಜಲಾವೃತಗೊಂಡಿವೆ. ಚಾಮರಾಜನಗರ, ಶಿವಮೊಗ್ಗ, ಬಾಗಲಕೋಟೆ, ಮಂಡ್ಯ, ಬೆಂಗಳೂರು ದಕ್ಷಿಣ, ತುಮಕೂರು ಜಿಲ್ಲೆಗಳಲ್ಲೂ ಮಳೆ ಆಗಿದೆ.
ಹನೂರು, ಗುಂಡ್ಲುಪೇಟೆ ಸೇರಿ ಚಾಮರಾಜನಗರ ಜಿಲ್ಲೆಯ ಕೆಲವೆಡೆ ಒಂದು ತಾಸಿಗೂ ಹೆಚ್ಚು ಕಾಲ ಮಳೆಯಾಗಿದ್ದು, ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಒಂದೂವರೆ ಎಕರೆಯಲ್ಲಿ ಬಿತ್ತನೆ ಮಾಡಿದ್ದ ಬೆಳ್ಳುಳ್ಳಿ ಕೊಚ್ಚಿಕೊಂಡು ಹೋಗಿದೆ. ರಿಪ್ಪನ್‌ಪೇಟೆ, ಹೊಳೆಹೊನ್ನೂರು ಸೇರಿ ಶಿವಮೊಗ್ಗ ಜಿಲ್ಲೆಯ ಹಲವೆಡೆ ಸುಂಟರಗಾಳಿಯೊಂದಿಗೆ ಗುಡುಗು-ಸಿಡಿಲಿನ ಆರ್ಭಟದಿಂದ ಕೂಡಿದ ಮಳೆಯಾಗಿದ್ದು, ಗಾಳಿ-ಮಳೆಗೆ ಸಾವಿರಾರು ಅಡಿಕೆ ಮರಗಳು ಧರೆಗುರುಳಿವೆ. ಬಾದಾಮಿ, ಬೀಳಗಿ, ಮುಧೋಳ, ಹುನಗುಂದ ಸೇರಿ ಬಾಗಲಕೋಟೆ ಜಿಲ್ಲೆಯ ಹಲವೆಡೆಯೂ ಸಂಜೆಯ ವೇಳೆ ಸುಮಾರು ಅರ್ಧ ಗಂಟೆ ಮಳೆ ಸುರಿದಿದೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ವಿವಿಧೆಡೆ ಸೋಮವಾರ ಸಂಜೆ ಸುಮಾರು ಒಂದೂವರೆ ಗಂಟೆ ಧಾರಾಕಾರ ಮಳೆಯಾಗಿದ್ದು, ನಗರದ ಕೊಪ್ಪ ವೃತ್ತದ ಬಳಿ ನಿಲ್ಲಿಸಿದ್ದ ಹಲವು ಬೈಕ್‌ಗಳು ಜಲಾವೃತಗೊಂಡಿವೆ. ಇದೇ ವೇಳೆ, ಬೆಂಗಳೂರು ದಕ್ಷಿಣ ಜಿಲ್ಲೆ, ತುರುವೇಕೆರೆ ಸೇರಿ ತುಮಕೂರು ಜಿಲ್ಲೆಯ ಕೆಲವೆಡೆಯೂ ಮಳೆಯಾಗಿದೆ.
ಈ ಮಧ್ಯೆ, ಅರಬ್ಬಿ ಸಮುದ್ರದಲ್ಲಿ ಗಾಳಿಯ ವೇಗ ಮತ್ತು ಪರಿಚಲನೆ ಹೆಚ್ಚಾಗುತ್ತಿರುವುದರಿಂದ ಸಮುದ್ರದ ಅಲೆಗಳ ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದೆ. ಮೇ 26ರಿಂದ ಮಾರುತಗಳು ಚುರುಕಾಗಲಿರುವುದರಿಂದ, ತೀರ ಪ್ರದೇಶಗಳಲ್ಲಿ ಗಾಳಿಯ ವೇಗ ಗಂಟೆಗೆ 40 ರಿಂದ 50 ಕಿ.ಮೀ.ದಾಟುವ ನಿರೀಕ್ಷೆಯಿದೆ. ಹೀಗಾಗಿ, ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸಲು ತೆರಳದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.