ಬೆಂಗಳೂರು : ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಂಡು ಹತಾಶನಾಗಿ ಪತ್ನಿಯನ್ನು ಮಕ್ಕಳ ಎದುರೇ ಆಟೋ ಚಾಲಕನೊಬ್ಬ ಮನಬಂದಂತೆ 15ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿ ಆತ್ಮ*ತ್ಯೆಗೆ ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಉದಯನಗರದ ನಿವಾಸಿ ಮಂಜುಳಾ (34) ಮೃತ ಮಹಿಳೆ. ಈ ಸಂಬಂಧ ಮೃತಳ ಪತಿ ಪ್ರದೀಪ್ ಕುಮಾರ್‌ನನ್ನು ಬಂಧಿಸಿದ್ದಾರೆ. ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಭಾನುವಾರ ರಾತ್ರಿ ಪತ್ನಿಯನ್ನು ಕೊಂದು ಬಳಿಕ ಪ್ರದೀಪ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಮ್ಮ ಕಣ್ಣು ಮುಂದೆಯೇ ತಾಯಿ ಹತ್ಯೆಯನ್ನು ಕಂಡು ಭೀತಿಗೊಂಡು ಮಕ್ಕಳು ಚೀರಿದಾಗ ನೆರೆಹೊರೆಯವರು ಧಾವಿಸಿದ್ದಾರೆ. ಅಷ್ಟರಲ್ಲಿ ಮನೆಯಿಂದ ಆತ ಪರಾರಿಯಾಗಿದ್ದ. ಈ ಬಗ್ಗೆ ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು, ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿಯನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಜಗಳದಿಂದ ಬೇಸತ್ತು ತವರು ಮನೆ ಸೇರಿದ್ದ ಪತ್ನಿ
15 ವರ್ಷಗಳ ಹಿಂದೆ ಗೃಹ ರಕ್ಷಕಿ (ಹೋಂ ಗಾರ್ಡ್) ಮಂಜುಳಾ ಹಾಗೂ ಆಟೋ ಚಾಲಕ ಪ್ರದೀಪ್ ವಿವಾಹವಾಗಿದ್ದು, ಈ ದಂಪತಿಗೆ 14 ವರ್ಷದ ಹೆಣ್ಣು ಮಗಳು ಹಾಗೂ 12 ವರ್ಷದ ಗಂಡು ಮಗನಿದ್ದಾನೆ. ಕಳೆದೊಂದು ವರ್ಷದಿಂದ ಮಹದೇವಪುರ ಠಾಣೆಯಲ್ಲಿ ಮಂಜುಳಾ ಕೆಲಸ ಮಾಡುತ್ತಿದ್ದು, ತಮ್ಮ ಕುಟುಂಬದ ಜತೆ ಎ.ನಾರಾಯಣಪುರದಲ್ಲಿ ಅವರು ನೆಲೆಸಿದ್ದರು. ಕೆಲ ತಿಂಗಳಿಂದ ಕೌಟುಂಬಿಕ ವಿಚಾರವಾಗಿ ದಂಪತಿ ಮಧ್ಯೆ ಭಿನ್ನಾಭಿಪ್ರಾಯ ಮೂಡಿತ್ತು. ಜೂಜಾಟದ ವ್ಯಸನಿಯಾಗಿದ್ದ ಪ್ರದೀಪ್, ತಾನು ದುಡಿದದ್ದು ಮಾತ್ರವಲ್ಲದೆ ಪತ್ನಿಯಿಂದ ಸಹ ಹಣ ಪಡೆದು ಜೂಜಾಡುತ್ತಿದ್ದ. ಇದಕ್ಕೆ ಹಲವು ಸ್ನೇಹಿತರಿಂದ ಹಾಗೂ ಆ್ಯಪ್‌ಗಳಿಂದ ಕೂಡ ಆತ ಸಾಲ ಮಾಡಿದ್ದ. ಈ ಬೆಟ್ಟಿಂಗ್ ಚಟಕ್ಕೆ ಮಂಜುಳಾ ವಿರೋಧಿಸಿದ್ದರು. ಇದೇ ವಿಷಯವಾಗಿ ಸತಿ-ಪತಿ ಜಗಳವಾಡುತ್ತಿದ್ದರು. ಮನೆಯಲ್ಲಿ ಹಣಕ್ಕಾಗಿ ಪತ್ನಿ ಮೇಲೆ ಆತ ರಗಳೆ ಮಾಡುತ್ತಿದ್ದ. ಈ ಬೆಳವಣಿಗೆಯಿಂದ ಬೇಸತ್ತು ಮಂಜುಳಾ, ಕಳೆದ ತಿಂಗಳು ಮಕ್ಕಳ ಜತೆ ಉದಯನಗರದಲ್ಲಿ ತವರು ಮನೆಗೆ ಬಂದು ನೆಲೆಸಿದ್ದಳು. ಮನೆ ತೊರೆದ ಪತ್ನಿ ಓಲೈಸಲು ಪ್ರದೀಪ್ ಯತ್ನಿಸಿ ವಿಫಲನಾಗಿದ್ದ.
ಕೊಲ್ಲುವುದಾಗಿ ಫೇಸ್ಬುಕ್‌ನಲ್ಲಿ ವಿಡಿಯೋ ಮಾಡಿದ್ದ
ಭಾನುವಾರ ರಾತ್ರಿ 7.30ರ ಸುಮಾರಿಗೆ ಮುನಿಸಿಕೊಂಡಿದ್ದ ಪತ್ನಿ ಜತೆ ಮಾತುಕತೆ ಆತ ಬಂದಿದ್ದಾನೆ. ಆಗ ದಂಪತಿ ಮಧ್ಯೆ ಗಲಾಟೆಯಾಗಿದೆ. ತಾನು ಬೆಟ್ಟಿಂಗ್ ಆಡುವುದಿಲ್ಲ ಎಂದು ಕ್ಷಮೆ ಕೋರುವ ನೆಪದಲ್ಲಿ ಪತ್ನಿ ಓಲೈಕೆಗೆ ಆತ ಯತ್ನಿಸಿದ್ದಾನೆ. ಈ ಮಾತಿಗೆ ಮಂಜುಳಾ ಕರಗದೆ ಹೋದಾಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಆರೋಪಿ, ತನ್ನ ಇಬ್ಬರು ಮಕ್ಕಳ ಮುಂದೆಯೇ ಪತ್ನಿಗೆ ಚಾಕುವಿನಿಂದ ಮನಬಂದಂತೆ ಇರಿದು ಕೊಲೆ ಮಾಡಿದ್ದಾನೆ. ಕೊಲೆಗೂ ಮುನ್ನ ಫೇಸ್‌ಬುಕ್‌ನಲ್ಲಿ ಪತ್ನಿಯನ್ನು ಕೊಲ್ಲುವುದಾಗಿ ಆರೋಪಿ ವಿಡಿಯೋ ಮಾಡಿದ್ದಾನೆ. ಕೊಲೆ ಮಾಡಿ ಕೈ ಕೊಯ್ದುಕೊಂಡು ಪ್ರದೀಪ್ ಆತ್ಮ*ತ್ಯೆ ಯತ್ನಿಸಿದ್ದಾನೆ. ಅಷ್ಟರಲ್ಲಿ ಘಟನೆ ಬಗ್ಗೆ ಮಾಹಿತಿ ಪಡೆದು ಪೊಲೀಸರು, ಆರೋಪಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
