ಈ ಬಾರಿಯ ಹಂಗಾಮಿನಲ್ಲಿ ಮಾವು ಇಳುವರಿ ಶೇ.60ರಷ್ಟು ಇಳಿಕೆಯಾಗಿದೆ. ಜೊತೆಗೆ ದರವೂ ಗಣನೀಯವಾಗಿ ಕುಸಿದಿದೆ. ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 4ರಿಂದ 6 ರು.ಮಾತ್ರ ಸಿಗುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಮಾವು ಬೆಳೆಗಾರರನ್ನು ಕಂಗೆಡಿಸಿದೆ.
ಬೆಂಗಳೂರು : ಈ ಬಾರಿಯ ಹಂಗಾಮಿನಲ್ಲಿ ಮಾವು ಇಳುವರಿ ಶೇ.60ರಷ್ಟು ಇಳಿಕೆಯಾಗಿದೆ. ಜೊತೆಗೆ ದರವೂ ಗಣನೀಯವಾಗಿ ಕುಸಿದಿದೆ. ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 4ರಿಂದ 6 ರು.ಮಾತ್ರ ಸಿಗುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಮಾವು ಬೆಳೆಗಾರರನ್ನು ಕಂಗೆಡಿಸಿದೆ.
ಗಲ್ಫ್ ರಾಷ್ಟ್ರಗಳಿಗೆ ಮಾವಿನ ತಿರುಳು ರಫ್ತಾಗಿಲ್ಲ
ರಾಜ್ಯದಿಂದ ಪ್ರತಿ ವರ್ಷ 2 ಲಕ್ಷ ಟನ್‌ಗೂ ಅಧಿಕ ಮಾವಿನ ತಿರುಳು (ಪಲ್ಪ್) ಗಲ್ಫ್ ರಾಷ್ಟ್ರಗಳಿಗೆ ರಫ್ತಾಗುತ್ತಿತ್ತು. ಆದರೆ ಈ ಬಾರಿ ಯುದ್ಧದ ಹಿನ್ನೆಲೆಯಲ್ಲಿ ಗಲ್ಫ್ ರಾಷ್ಟ್ರಗಳಿಗೆ ಮಾವಿನ ತಿರುಳು ರಫ್ತಾಗಿಲ್ಲ. ಜತೆಗೆ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತಿತರ ಭಾಗಗಳ ಮಾವು ಏಕಕಾಲಕ್ಕೆ ಮಾರುಕಟ್ಟೆಗೆ ಬಂದಿದೆ. ಕೊಯ್ಲು ಸಂದರ್ಭದಲ್ಲಿಯೇ ಎರಡು ವಾರದಿಂದ ಮಳೆ ಸುರಿಯುತ್ತಿದ್ದು ಹಣ್ಣು ಕಿತ್ತರೂ ಹೆಚ್ಚು ದಿನ ಇಡಲಾಗುತ್ತಿಲ್ಲ. ಹಣ್ಣಿನ ಗುಣಮಟ್ಟ ಕಾಯ್ದುಕೊಳ್ಳಲಾಗುತ್ತಿಲ್ಲ. ಹೀಗಾಗಿ ಮಾವು ದರ ಗಣನೀಯವಾಗಿ ಇಳಿಕೆಯಾಗಿದೆ.
ಈ ವರ್ಷದ ಹಂಗಾಮಿನಲ್ಲಿ ಉತ್ತಮ ಬೆಳೆಯ ನಿರೀಕ್ಷೆಯಿತ್ತು. ಆದರೆ, ಹವಾಮಾನ ವೈಪರೀತ್ಯದಿಂದ ಶೇ.30ರಷ್ಟು ಮಾತ್ರ ಬೆಳೆ ಬಂದಿದೆ. ಇದೀಗ ಅದಕ್ಕೂ ಬೆಲೆಯಿಲ್ಲದೆ ಸಾಲದ ಸುಳಿಗೆ ಸಿಲುಕುವಂತಾಗಿದೆ. ವರ್ಷಕ್ಕೊಮ್ಮೆ ನಾಲ್ಕು ಕಾಸು ನೋಡುವ ಬೆಳೆಯಿದು. ವರ್ಷ ಪೂರ್ತಿ ಕಾದರೂ ಇದೀಗ ಬೆಲೆಯಿಲ್ಲದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವೂ ಸ್ಪಂದಿಸುತ್ತಿಲ್ಲ ಎಂದು ಶ್ರೀನಿವಾಸಪುರದ ಮಾವು ಬೆಳೆಗಾರರಾದ ಡಿ.ಬಿ. ಶಿವಣ್ಣ, ಡಿ. ಶ್ರೀನಿವಾಸ್, ಡಿ.ಎನ್. ರವಿ, ಡಿ.ವಿ. ವೆಂಕಟರವಣ ರೆಡ್ಡಿ ಸೇರಿದಂತೆ ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.
ತೋಟಗಾರಿಕೆ ಇಲಾಖೆ ಮತ್ತು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದಿಂದ ಬೆಳೆಗಾರರಿಗೆ ಯಾವುದೇ ರೀತಿಯ ನೆರವು ಸಿಗುತ್ತಿಲ್ಲ. ಮಾವು ಬೆಳೆಯ ರೋಗಗಳನ್ನು ಹತೋಟಿಗೆ ತರುವುದು, ಗುಣಮಟ್ಟ ಮತ್ತು ಇಳುವರಿ ಹೆಚ್ಚಳಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳುವುದು, ಸೂಕ್ತ ಬೆಲೆ ಕೊಡಿಸುವಲ್ಲಿ ಕ್ರಮ ಕೈಗೊಳ್ಳುವಂತಾಗಬೇಕು ಎಂದು ಬೆಳೆಗಾರರು ಮನವಿ ಮಾಡಿದ್ದಾರೆ.
ಕೆಜಿಗೆ ಕೇವಲ 4-6 ರು.:
ಇಪ್ಪತ್ತೈದು ಎಕರೆಯಲ್ಲಿ ತೋತಾಪುರಿ ಮಾವು ಬೆಳೆದಿದ್ದು, 100-120 ಟನ್ ಉತ್ಪಾದನೆಯಾಗುತ್ತದೆ. ಹೆಚ್ಚಾಗಿ ಜ್ಯೂಸ್ ತಯಾರಿಕೆಯಲ್ಲಿ ತೋತಾಪುರಿ ಬಳಕೆಯಾಗುತ್ತದೆ. ಗಲ್ಫ್ ರಾಷ್ಟ್ರಗಳಿಗೆ ಇದರ ಪಲ್ಪ್ ರಫ್ತಾಗುತ್ತಿತ್ತು. ಈಗ ಯುದ್ಧದ ಹಿನ್ನೆಲೆಯಲ್ಲಿ ರಫ್ತಾಗುತ್ತಿಲ್ಲ. ಹೀಗಾಗಿ ತೋತಾಪುರಿ ಕೆ.ಜಿ.ಗೆ 4 ರು.ನಂತೆ ಮಾರಾಟವಾಗುತ್ತಿದೆ. ಒಂದು ಟನ್ ಮಾವು ಬೆಳೆಯಲು ಸುಮಾರು 12 ಸಾವಿರ ರು. ಖರ್ಚು ಮಾಡಬೇಕು. ಈಗ ಕೇವಲ 4 ಸಾವಿರ ಸಿಗುತ್ತಿದೆ, ಕಳೆದ ವರ್ಷವೂ ಇದೇ ರೀತಿ ಬೆಲೆ ಇಳಿಕೆಯಾಗಿತ್ತು. ಆಗ ಸರ್ಕಾರ ಕೆ.ಜಿ.ಗೆ 4 ರು.ಪ್ರೋತ್ಸಾಹ ಧನ ನೀಡಿತ್ತು. ಅದೇ ರೀತಿ ಈ ವರ್ಷವೂ ಸರ್ಕಾರ ಪ್ರೋತ್ಸಾಹ ಧನ ನೀಡಬೇಕು ಎಂದು ಶ್ರೀನಿವಾಸಪುರದ ರೈತ ಡಿ.ಟಿ.ರಜನಿಕಾಂತ್ ಮನವಿ ಮಾಡಿದ್ದಾರೆ.
ಶ್ರೀನಿವಾಸಪುರಎಪಿಎಂಸಿ ಸಗಟು ದರ (ಕೆ.ಜಿ.ಗಳಲ್ಲಿ)
ಸೇಂಧೂರ6ರು.
ತೋತಾಪುರ4-5 ರು.
ಬಾದಾಮಿ20 ರು.
ಮಲ್ಲಿಕಾ15-25 ರು.
ರಸಪುರಿ15 ರು.
ಸಕ್ಕರೆಗುತ್ತಿ30-35 ರು.
ಕೇಸರ್, ದಶೇರಿ30-35 ರು.
