ಕನ್ನಡಪ್ರಭ ವಾರ್ತೆ ಬೆಂಗಳೂರು
ವಿದ್ಯುತ್, ನೀರು, ಟೋಲ್ ದರ ಹೆಚ್ಚಳ ಬೆನ್ನಲ್ಲೇ ಹೋಟೆಲ್ ತಿನಿಸುಗಳ ಬೆಲೆ ಏರಿಕೆ ಬಿಸಿಯೂ ನಾಗರಿಕರನ್ನು ತಟ್ಟಿದೆ. ಇದರಿಂದಾಗಿ ಕಟ್ಟಡ ಕಾರ್ಮಿಕರು, ಅವಿವಾಹಿತರು ಸೇರಿದಂತೆ ನಿತ್ಯವೂ ಊಟ-ತಿಂಡಿಗೆ ಹೋಟೆಲ್‌ಗಳನ್ನೇ ಅವಲಂಬಿಸಿದ್ದವರಿಗೆ ಬರೆ ಬಿದ್ದಂತಾಗಿದೆ.ಮಧ್ಯಪ್ರಾಚ್ಯ ಯುದ್ಧದಿಂದಾಗಿ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳು ಸಮರ್ಪಕವಾಗಿ ಸರಬರಾಜಾಗದೇ ಇರುವುದರಿಂದ ಇತ್ತೀಚೆಗಷ್ಟೇ ಒಂದು ಸುತ್ತಿನ ದರ ಏರಿಕೆ ಮಾಡಿದ್ದ ಹೋಟೆಲ್‌ಗಳು, ಇದೀಗ ಮತ್ತೊಂದು ಸುತ್ತಿನ ದರ ಏರಿಕೆಗೆ ಸಜ್ಜಾಗಿವೆ. ಮಂಗಳೂರು, ಬೆಂಗಳೂರು ಸೇರಿದಂತೆ ರಾಜ್ಯದ ಇತರ ನಗರಗಳಲ್ಲಿ ಬೆಲೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಇದಕ್ಕೆ ಪೂರಕವಾಗಿ ಈ ದರ ಏರಿಕೆಗೆ ಯಾವುದೇ ಕಡಿವಾಣ ಹಾಕುವುದಿಲ್ಲ ಎಂದೂ ಬೆಂಗಳೂರು ಹೋಟೆಲುಗಳ ಸಂಘವೂ ತಿಳಿಸಿದೆ.
ಕಾಳಸಂತೆಯಲ್ಲಿ ಅಧಿಕ ಹಣ ತೆತ್ತು ಸಿಲಿಂಡರ್ ಖರೀದಿಸಬೇಕಾಗಿದೆ. ಮತ್ತೊಂದೆಡೆ ಪರ್ಯಾಯವಾಗಿ ಸೌಧೆ ಒಲೆ ಬಳಸುತ್ತಿದ್ದೆವು. ಇದೀಗ ಸೌಧೆ ಬೆಲೆಯೂ ಅಧಿಕವಾಗಿರುವುದರಿಂದ ಹೋಟೆಲ್ ತಿನಿಸುಗಳ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ಹೋಟೆಲ್ ಮಾಲೀಕರು ಸಮರ್ಥಿಸಿಕೊಳ್ಳುತ್ತಿದ್ದಾರೆ.ಬೇಳೆ ಕಾಳು, ಅಡುಗೆ ಎಣ್ಣೆ ಸೇರಿದಂತೆ ತಿನಿಸುಗಳಿಗೆ ಬಳಸುವ ವಸ್ತುಗಳ ಬೆಲೆ ಅಧಿಕವಾಗುತ್ತಿರುವುದರಿಂದ ದರ ಹೆಚ್ಚಳ ಮಾಡುವುದು ಅನಿವಾರ್ಯವಾಗಿತ್ತು ಎಂದು ಕೆಲ ಹೋಟೆಲ್ ಮಾಲೀಕರು ಪ್ರತಿಪಾದಿಸುತ್ತಿದ್ದಾರೆ. ಇದರಿಂದಾಗಿ ಕಾಫಿ, ಟೀ ಸೇರಿದಂತೆ ಹೋಟೆಲ್ ತಿನಿಸುಗಳು ತುಟ್ಟಿಯಾಗಿವೆ. ಇದರಿಂದಾಗಿ ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ.
ದರ ಏರಿಕೆ ಅನಿವಾರ್ಯ: ರಾವ್
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್, ‘ವಿದ್ಯುತ್, ನೀರಿನ ದರ ಹೆಚ್ಚಳವಾಗಿದೆ. ಏಪ್ರಿಲ್ ತಿಂಗಳಾಗಿರುವುದರಿಂದ ಬಾಡಿಗೆ ಕಟ್ಟಡಗಳಲ್ಲಿ ಹೋಟೆಲ್ ನಡೆಸುತ್ತಿದ್ದವರಿಗೆ ಬಾಡಿಗೆಯೂ ಹೆಚ್ಚಳವಾಗಿದೆ. ಕೆಲ ಹೋಟೆಲ್‌ಗಳು ಈಗಾಗಲೇ ದರ ಹೆಚ್ಚಳ ಮಾಡಿವೆ. ಇನ್ನೂ ಕೆಲವರು ದರ ಹೆಚ್ಚಳ ಮಾಡುತ್ತೇವೆ. ನಮಗೂ ಲಾಭ ಸಿಗಬೇಕು ಎನ್ನುತ್ತಿದ್ದಾರೆ. ದರ ಏರಿಕೆ ಅನಿವಾರ್ಯವಾಗಿದ್ದು ಸಂಘ ಯಾವುದೇ ಕಡಿವಾಣ ಹಾಕುವುದಿಲ್ಲ. ಹೋಟೆಲ್ ಮಾಲೀಕರ ಇಚ್ಛೆಯಂತೆ ಪದಾರ್ಥಗಳ ದರ ನಿಗದಿಯಾಗಲಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.
