- ಹರಿಹರ, ಹೊನ್ನಾಳಿ, ಚನ್ನಗಿರಿ, ನ್ಯಾಮತಿ ಘಟಕಗಳ ಸಮರ್ಪಕ ನಿರ್ವಹಣೆಗೆ ಸೂಚನೆ
- - -ಕನ್ನಡಪ್ರಭ ವಾರ್ತೆ ಹರಿಹರ
ತಾಲೂಕಿನ ಭಾನುವಳ್ಳಿ ಗ್ರಾಮಕ್ಕೆ ಬೆಳಂಬೆಳಗ್ಗೆ ಧಾವಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲ್ ರಾವ್ ಬಹುಗ್ರಾಮ ಕುಡಿಯುವ ನೀರಿನ ಘಟಕಕ್ಕೆ ಭೇಟಿ ನೀಡಿದರು. ಘಟಕದಲ್ಲಿ ಮರಳನ್ನು ಬದಲಿಸುವಂತೆ, ನೀರಿಗೆ ಸರಿಯಾದ ಪ್ರಮಾಣದಲ್ಲಿ ಅಲಂ ಬೆರೆಸಿ ಹಾಗೂ ಸುಣ್ಣಬಣ್ಣ ಬಳಿದು ಘಟಕವನ್ನು ಸಮರ್ಪಕವಾಗಿ ನಿರ್ವಹಿಸಲು ಸೂಚಿಸಿದರು.ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಆಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಂತರ ನಂದಿಗಾವಿ ಗ್ರಾಮದ ದುಸ್ಥಿತಿಯಲ್ಲಿದ್ದ ಶುದ್ಧ ಕುಡಿಯುವ ನೀರಿನ ಘಟಕ ಕೂಡಲೇ ದುರಸ್ತಿ ಮಾಡಬೇಕು ಎಂದರು.
ಬೇಸಿಗೆ ಹಾಗೂ ನೀರಿನ ಕಡಿಮೆ ಲಭ್ಯತೆ ಹಿನ್ನೆಲೆಯಲ್ಲಿ ನೀರಿನಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ದಿನಂಪ್ರತಿ ಘಟಕಕ್ಕೆ ಲಭಿಸುವ ನೀರಿನ ಪ್ರಮಾಣದ ದಾಖಲೆ ನಿರ್ವಹಿಸುವ, ಕುಡಿಯುವ ನೀರು ಪೋಲಾಗದಂತೆ ಸಂರಕ್ಷಿಸುವ, ನೀರನ್ನು ಪ್ರಯೋಗಾಲಯಗಳಲ್ಲಿ ಪರೀಕ್ಷಿಸಿ ಶುದ್ಧತೆ ಖಾತ್ರಿ ಸಿಕ್ಕ ನಂತರ ಜಿಲ್ಲೆಯ ಎಲ್ಲ ಗ್ರಾಮಗಳ ಸಾರ್ವಜನಿಕರಿಗೂ ಕುಡಿಯುವ ನೀರು ತಲುಪಿಸುವ ವ್ಯವಸ್ಥೆ ಆಗಬೇಕು. ಸಮಸ್ಯೆ ಉಂಟಾದಲ್ಲಿ ಗಮನಕ್ಕೆ ತರಬೇಕು ಎಂದು ಎಚ್ಚರಿಸಿದರು.
ಬಳಿಕ ಹೊನ್ನಾಳಿ ತಾಲೂಕಿನ ಕೂಲಂಬಿ ಬಹುಗ್ರಾಮ ಕುಡಿಯುವ ನೀರಿನ ಘಟಕಕ್ಕೆ ಭೇಟಿ ನೀಡಿದರು. ಘಟಕದಲ್ಲಿ ಮರಳನ್ನು ಬದಲಿಸುವುದು, ಸುಣ್ಣಬಣ್ಣ ಬಳಿದು ಘಟಕ ಸುಸ್ಥಿತಿಯಲ್ಲಿ ನಿರ್ವಹಿಸುವುದು ಸೇರಿದಂತೆ ಶುದ್ಧೀಕರಣಗೊಂಡ ನೀರನ್ನು ಪರೀಕ್ಷಿಸಲು ನೀರು ಪರೀಕ್ಷಾ ಪ್ರಯೋಗಾಲಯಕ್ಕೆ ರವಾನಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮಾರಿಕೊಪ್ಪ ಘಟಕಕ್ಕೆ ಭೇಟಿ ನೀಡಿ, ಘಟಕದ ಸಾಮಗ್ರಿಗಳನ್ನು ಕಾಲಕಾಲಕ್ಕೆ ಬದಲಾಯಿಸಿ ಸಮರ್ಪಕ ನಿರ್ವಹಣೆ ಮಾಡುವಂತೆ ನಿರ್ದೇಶನ ನೀಡಿದರು.
ಇದೇ ವೇಳೆ ಅರೆಹಳ್ಳಿ ಗ್ರಾಮದಲ್ಲಿರುವ ನ್ಯಾಮತಿ ಬಹುಗ್ರಾಮ ಕುಡಿಯುವ ನೀರಿನ ಘಟಕ, ಕೆಂಗಟ್ಟೆ ಘಟಕಗಳಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಅಗತ್ಯ ನಿರ್ದೇಶನ ನೀಡಿದರು. ಚನ್ನಗಿರಿ ತಾಲೂಕಿನ ತಾವರಕೆರೆ ಘಟಕಕ್ಕೆ ಭೇಟಿ ನೀಡಿ, ಘಟಕವನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಹಾಗೂ ಕುಡಿಯುವ ನೀರಿನ ಘಟಕದ ಸಾಮಗ್ರಿಗಳನ್ನು ಅವಶ್ಯಕತೆಗೆ ಅನುಗುಣವಾಗಿ ಬದಲಾಯಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ರೈತರು ಕುಡಿಯುವ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸದೇ, ಸಾರ್ವಜನಿಕ ಕುಡಿಯುವ ನೀರಿನ ಅಗತ್ಯಕ್ಕಾಗಿ ಮಾತ್ರ ಬಳಸುವಂತೆ ಮನವರಿಕೆ ಮಾಡಿದರು.ಚನ್ನಗಿರಿ ತಾಲೂಕಿನ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿಗೆ ಭೇಟಿ ನೀಡಿದ ಸಿಇಒ, ಅಲ್ಲಿನ ಕುಡಿಯುವ ನೀರು ಪರೀಕ್ಷಾ ಪ್ರಯೋಗಾಲಯ ಪರಿಶೀಲಿಸಿದರು. ಪ್ರಯೋಗಾಲಯದ ಸಿಬ್ಬಂದಿಯಿಂದ ಪರೀಕ್ಷಾ ಪ್ರಕ್ರಿಯೆಗಳ ಕುರಿತು ಮಾಹಿತಿ ಪಡೆದು, ಪರೀಕ್ಷೆಗೆ ತರಲಾಗಿದ್ದ ನೀರಿನ ಮಾದರಿಗಳನ್ನು ಪರಿಶೀಲಿಸಿದರು.
ಸಂತೆಬೆನ್ನೂರು ಬಹುಗ್ರಾಮ ಕುಡಿಯುವ ನೀರಿನ ಘಟಕಕ್ಕೆ ಭೇಟಿ ನೀಡಿ, ಅಧಿಕಾರಿಗಳಿಗೆ ಸಲಹೆ- ಸೂಚನೆ ನಿಡಿದರು. ವಿವಿಧ ಅಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.- - -
-15HRR. 03 & 03A: