ಕಾರ್ಕಳ: ರಾಜ್ಯ ಸರ್ಕಾರವನ್ನು ‘ಆಲಿಸುವ ಸರ್ಕಾರ’ ಎಂದು ಬಣ್ಣಿಸುತ್ತಲೇ ತೂಕಡಿಸುತ್ತಿರುವ ಸರ್ಕಾರದ ಮುಖವಾಡ ಈಗ ಕಳಚಿ ಬಿದ್ದಿದೆ ಎಂದು ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ವ್ಯಂಗ್ಯವಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಗೃಹ ಸಚಿವರ ತವರು ಜಿಲ್ಲೆ ಕಲಬುರಗಿಯಲ್ಲಿ ಸಚಿವರು ಸಭೆ ನಡೆಸುತ್ತಿರುವ ಸಂದರ್ಭದಲ್ಲೇ ಜಿಲ್ಲಾಧಿಕಾರಿ, ಸಹಾಯಕ ಜಿಲ್ಲಾಧಿಕಾರಿ ಹಾಗೂ ಸಹಾಯಕ ಆಯುಕ್ತರ ವಾಹನಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ಜಪ್ತಿ ಮಾಡಿರುವ ಘಟನೆಯನ್ನು ಉಲ್ಲೇಖಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.‘ಬಹುಶಃ ಇದು ರಾಜ್ಯದ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಘಳಿಗೆ’ ಎಂದು ವ್ಯಂಗ್ಯವಾಡಿರುವ ಸುನಿಲ್ ಕುಮಾರ್, ಜಗತ್ತಿನ ಸಕಲ ಸಮಸ್ಯೆಗಳನ್ನೂ ಗುರುತಿಸಿ, ಅಧ್ಯಯನ ಮಾಡಿ, ಟೀಕಿಸಿ ನಿದ್ರಿಸುವ ‘ಆಲ್ ಪೋರ್ಟ್‌ಫೋಲಿಯೋ’ ಸಚಿವರಿಗೆ ತಮ್ಮ ಕಾಲ ಬುಡದಲ್ಲಿ ಏನಾಗುತ್ತಿದೆ ಎಂಬುದರ ಕಲ್ಪನೆಯೇ ಇಲ್ಲ ಎಂದು ಟೀಕಿಸಿದ್ದಾರೆ.ಸರ್ಕಾರ ಜನರ ಸಮಸ್ಯೆಗಳನ್ನು ಆಲಿಸುತ್ತಿದೆ ಎಂದು ಹೇಳಿಕೊಳ್ಳುತ್ತಿದ್ದರೂ, ರೈತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ ಎಂಬುದನ್ನು ಈ ಘಟನೆ ತೋರಿಸುತ್ತದೆ ಎಂದು ಸುನಿಲ್ ಕುಮಾರ್ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ.