ಕುಶಾಲನಗರ ಪುರಸಭೆ ಕಚೇರಿಯೊಳಗೆ ಮೀನು ಮಾರಾಟ ಮಾಡುವ ಮೂಲಕ ವಿನೂತನ ಪ್ರತಿಭಟನೆ ಮಾಡಿದ ಘಟನೆ ಮಂಗಳವಾರ ಬೆಳಗ್ಗೆ ನಡೆಯಿತು.
ಕುಶಾಲನಗರ: ಕುಶಾಲನಗರ ಪುರಸಭೆ ಕಚೇರಿಯೊಳಗೆ ಮೀನು ಮಾರಾಟ ಮಾಡುವ ಮೂಲಕ ವಿನೂತನ ಪ್ರತಿಭಟನೆ ಮಾಡಿದ ಘಟನೆ ಮಂಗಳವಾರ ಬೆಳಗ್ಗೆ ನಡೆಯಿತು. ಕುಶಾಲನಗರ ಪ್ರವಾಸಿ ಮಂದಿರದ ರಸ್ತೆಯಲ್ಲಿ ಬೀದಿ ಬದಿಯಲ್ಲಿ ಕೆಲವು ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದು, ಕಳೆದ ಹಲವು ಸಮಯದಿಂದ ಹಾರಂಗಿಯ ಮಂಜು ಎಂಬಾತ ಹೊಳೆ ಮೀನು ತಂದು ನೆಲದಲ್ಲಿ ಕುಳಿತು ರಸ್ತೆ ಬದಿ ಮಾರಾಟ ಮಾಡುತ್ತಿದ್ದ ವೇಳೆ ಪುರಸಭೆ ಸಿಬ್ಬಂದಿ ತೆರವುಗೊಳಿಸಿದ ಘಟನೆ ನಡೆದಿದೆ.
ಈ ಬಗ್ಗೆ ಮಾಹಿತಿ ತಿಳಿದ ಬಿಜೆಪಿ ಪ್ರಮುಖರಾದ ಭಾಸ್ಕರ್ ನಾಯಕ್ ಮತ್ತಿತರರು ಘಟನೆ ಖಂಡಿಸಿ ಬೀದಿ ಬದಿ ವ್ಯಾಪಾರಿಯ ಸಹಾಯಕ್ಕೆ ಬಂದು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ರೀತಿಯ ಸ್ಪಂದನೆ ದೊರಕಿಲ್ಲ. ಇದರಿಂದ ಆಕ್ರೋಶಗೊಂಡ ಬಿಜೆಪಿ ಪ್ರಮುಖರು ಮೀನು ವ್ಯಾಪಾರಿಯ ಬುಟ್ಟಿಯೊಂದಿಗೆ ಪುರಸಭೆ ಕಚೇರಿ ಆವರಣದಲ್ಲಿ ವ್ಯಾಪಾರ ಮಾಡಲು ತೊಡಗಿದರು.ಪುರಸಭೆ ಮುಖ್ಕಾಧಿಕಾರಿ ಅನ್ಯ ಕಾರ್ಯನಿಮಿತ್ತ ಮಡಿಕೇರಿಗೆ ತೆರಳಿದ್ದು, ಈ ಸಂದರ್ಭ ಕಚೇರಿಗೆ ಆಗಮಿಸಿದ ಕಾಂಗ್ರೆಸ್ ಪ್ರಮುಖರು ಬಿಜೆಪಿ ಕಾರ್ಯಕರ್ತರೊಂದಿಗೆ ವಾಗ್ವಾದಕ್ಕಿಳಿದು ಕಚೇರಿಯಿಂದ ಮೀನನ್ನು ತೆರವುಗೊಳಿಸುವಂತೆ ಆಗ್ರಹಿಸಿದರು.
ಬಿಜೆಪಿ ಪ್ರಮುಖ ಭಾಸ್ಕರ ನಾಯಕ್, ಅರಣ್ಯ ಇಲಾಖೆ ಕಚೇರಿ ಮುಂಭಾಗ ರಸ್ತೆ ಬದಿಯಲ್ಲಿ ಬೆಸ್ತ ಜನಾಂಗದ ಅಲೆಮಾರಿಗಳು ನದಿಗಳಲ್ಲಿ ಹಿಡಿದ ಮೀನನ್ನು ಹಲವು ವರ್ಷಗಳಿಂದ ಅದೇ ಸ್ಥಳದಲ್ಲಿ ವ್ಯಾಪಾರ ಮಾಡುತ್ತಿದ್ದು, ದಿಡೀರನೆ ಪುರಸಭೆ ಅಧಿಕಾರಿಗಳು ರಸ್ತೆಗೆ ಸಮಸ್ಯೆ ಆಗುತ್ತಿದೆ ಎಂಬ ನೆಪವೊಡ್ಡಿ ತೆರವು ಮಾಡಿಸಿದ್ದು ಬೇಸರದ ಸಂಗತಿ ಎಂದರು.ಹೊಟ್ಟೆಪಾಡಿಗಾಗಿ ದುಡಿಯುವ ಬಡ ಜನರಿಗೆ ಕಿರುಕುಳ ನೀಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು.ಈ ಹಿನ್ನೆಲೆಯಲ್ಲಿ ಬಿಜೆಪಿ ಪ್ರಮುಖರ ನೇತೃತ್ವದಲ್ಲಿ ಪುರಸಭೆ ಕಚೇರಿಯೊಳಗೆ ಮೀನು ಮಾರಾಟ ಮಾಡುವ ಮೂಲಕ ವಿನೂತನ ಪ್ರತಿಭಟನೆ ಮಾಡಲಾಯಿತು ಎಂದು ತಿಳಿಸಿದರು.
ಬಿಜೆಪಿಯ ಎಂ.ಎಂ. ಚರಣ್ ಮಧುಸೂದನ್, ಎಂ.ಡಿ. ಕೃಷ್ಣಪ್ಪ, ಪ್ರಶಾಂತ್ ಸುಮನ್, ರಾಮು ಮತ್ತಿತರರಿದ್ದರು.