ಸಾರಾಂಶ
ಪಾವಗಡದ ನಾಗಲಮಡಿಕೆ ಸುಬ್ರಮಣ್ಯಸ್ವಾಮಿ ಶ್ರೀ ಕ್ಷೇತ್ರ ಸಮೀಪದ (ಉತ್ತರ ಪಿನಾಕಿನಿ ನದಿ) ತುಂಬಿರುವ ಹಿನ್ನೆಲೆಯಲ್ಲಿ ಸೋಮವಾರ ಮಾಜಿ ಸಚಿವರಾದ ವೆಂಕಟರಮಣಪ್ಪ ಹಾಗೂ ಪುತ್ರ ಶಾಸಕ ಎಚ್.ವಿ.ವೆಂಕಟೇಶ್ ಅವರು ಡ್ಯಾಂ ನೀರಿಗೆ ಗಂಗಾ ಪೂಜೆ ನೆರವೇರಿಸುವ ಮೂಲಕ ಬಾಗಿನ ಅರ್ಪಿಸಿದರು.
ಕನ್ನಡಪ್ರಭ ವಾರ್ತೆ ಪಾವಗಡ
ಈ ಭಾಗದ ತಾಲೂಕಿನ ನಾಗಲಮಡಿಕೆ ಸುಬ್ರಮಣ್ಯಸ್ವಾಮಿ ಶ್ರೀ ಕ್ಷೇತ್ರ ಸಮೀಪದ (ಉತ್ತರ ಪಿನಾಕಿನಿ ನದಿ) ತುಂಬಿರುವ ಹಿನ್ನೆಲೆಯಲ್ಲಿ ಸೋಮವಾರ ಮಾಜಿ ಸಚಿವರಾದ ವೆಂಕಟರಮಣಪ್ಪ ಹಾಗೂ ಪುತ್ರ ಶಾಸಕ ಎಚ್.ವಿ.ವೆಂಕಟೇಶ್ ಅವರು ಡ್ಯಾಂ ನೀರಿಗೆ ಗಂಗಾ ಪೂಜೆ ನೆರವೇರಿಸುವ ಮೂಲಕ ಬಾಗಿನ ಅರ್ಪಿಸಿದರು.ಶ್ರೀ ಕ್ಷೇತ್ರ ನಾಗಲಮಡಿಕೆಯ ಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ತಾಲೂಕಿನ ರೈತ ಹಾಗೂ ಜನತೆಯ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ಈ ವೇಳೆ ಶಾಸಕ ಎಚ್.ವಿ.ವೆಂಕಟೇಶ್ ಮಾತನಾಡಿ, ಸತತ ಮಳೆಯಿಂದ ನಾಗಲಮಡಿಕೆ ಡ್ಯಾಮ್ (ಉತ್ತರ ಪಿನಾಕಿನಿ ನದಿ)ಗೆ ಹೆಚ್ಚು ನೀರು ಸಂಗ್ರಹವಾಗಿದ್ದು ಸಂತಸ ತಂದಿದೆ. ಶ್ರೀ ಸುಬ್ರಮಣ್ಯಸ್ವಾಮಿ ಕೃಪೆಯಿಂದ ಈ ಕ್ಷೇತ್ರ ಪ್ರಗತಿಯತ್ತ ಸಾಗುತ್ತಿದ್ದು, ಶ್ರೀ ಕ್ಷೇತ್ರ ಮುಜಾರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಯ ಸಚಿವ ಹಾಗೂ ಮೇಲಧಿಕಾರಿಗಳ ಜತೆ ಚರ್ಚಿಸಿದ್ದೇನೆ. ಸುಸಜ್ಜಿತ ಸಮುದಾಯ ಭವನ ನವೀಕರಣ ಸೇರಿದಂತೆ ದೇವಸ್ಥಾನದ ಪ್ರಗತಿಗೆ ವಿಶೇಷ ಆಸಕ್ತಿ ವಹಿಸಲಾಗಿದೆ. ಅನ್ನದಾಸೋಹ ಕಾರ್ಯಕ್ರಮ ಹಾಗೂ ದೇವಸ್ಥಾನದ ಸುತ್ತ ಕಾಂಪೌಂಡು ಹಾಗೂ ಭಕ್ತರಿಗೆ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲು ಈಗಾಗಲೇ ತಹಸೀಲ್ದಾರ್ ಇತರೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.ತಂದೆ ವೆಂಕಟರಮಣಪ್ಪ ಅವರು ಶಾಸಕರಾಗಿದ್ದ ವೇಳೆ ಇಲ್ಲಿನ ಉತ್ತರ ಪಿನಾಕಿನಿ ನದಿ ಡ್ಯಾಂ ನಿರ್ಮಾಣಕ್ಕೆ ಆಸಕ್ತಿ ವಹಿಸಿ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಿದ್ದರು. ಈ ಡ್ಯಾಂ ಭರ್ತಿಯಿಂದ ಈ ಭಾಗದ ನೀರಾವರಿ ಜಮೀನುಗಳ ಕೊಳವೆಬಾವಿ ಹಾಗೂ ಕುಡಿಯುವ ನೀರಿನ ಅಂತರ್ಜಲ ಹೆಚ್ಚಿಸಲು ಸಹಕಾರಿಯಾಗಲಿದೆ. ಇಲ್ಲಿಂದ ಪೈಪ್‌ಲೈನ್ ಮೂಲಕ ಸರಬರಾಜ್ ಕೈಗೊಂಡಿದ್ದ ಹಿನ್ನೆಲೆಯಲ್ಲಿ ಪಾವಗಡ ಪಟ್ಟಣದ ಜನತೆಗೆ ಶುದ್ಧ ಕುಡಿಯುನ ನೀರು ಕಲ್ಪಿಸಲು ಹೆಚ್ಚು ಸಹಕಾರಿ ಎಂದರು ಇದರ ಜತೆ,ಪಟ್ಟಣದಲ್ಲಿ ಜನಜಂಗುಳಿ ಹೆಚ್ಚುತ್ತಿರುವ ಹಿನ್ನೆಲೆ, ಸಂಚಾರಕ್ಕೆ ತೀವ್ರ ಅಡ್ಡಿಯಾಗುತ್ತಿದೆ. ಈಗಾಗಲೇ ಬೈಪಾಸು ರಸ್ತೆ ನಿರ್ಮಾಣಕ್ಕೆ ಡಿಪಿಆರ್ ಸಿದ್ಧಪಡಿಸಲಾಗಿದೆ. ಈ ಬಗ್ಗೆ ಸಂಬಂಧಿಸಿದ ಸಚಿವರ ಜತೆ ಚರ್ಚಿಸಿ ಮನವಿ ಮಾಡಲಾಗಿದೆ ಹೇಳಿದರು.
ಈ ವೇಳೆ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೇಶ್ ಬಾಬು, ಪುರಸಭೆ ಅಧ್ಯಕ್ಷ ಪಿ.ಎಚ್.ರಾಜೇಶ್, ಉಪಾಧ್ಯಕ್ಷ ಆರ್.ಎ. ಹನುಮಂತರಾಯಪ್ಪ, ಪುರಸಭೆಯ ಮಾಜಿ ಅಧ್ಯಕ್ಷ ಶಂಕರ್ ರೆಡ್ಡಿ, ಯುವ ಮುಖಂಡರಾದ ವೆಂಕಟಮ್ಮನಹಳ್ಳಿ ಬತ್ತೀನೇನಿ ನಾನಿ, ಶೇಷಗಿರಿಯಪ್ಪ, ಐ.ಜಿ.ನಾಗರಾಜು, ನಾಗಲಮಡಿಕೆ ಗ್ರಾಪಂ ಅಧ್ಯಕ್ಷರಾದ ಪುರುಷೋತ್ತಮ ರೆಡ್ಡಿ, ಎನ್ ರವಿ,ನಾಗಭೂಷಣ್ ರೆಡ್ಡಿ, ಜಯರಾಮ್, ಗ್ರಾಮ ಪಂಚಾಯಿತಿ ಸದಸ್ಯ ಕೆ.ಎನ್.ಮಂಜುನಾಥ್ ,ಕೆ.ಬಿ.ನಾಗರಾಜ್, ಸರ್ಫುದ್ದಿನ್, ಪೀಕನಾಯ್ಕ್, ತಿಮ್ಮಮ್ಮನಹಳ್ಳಿ ಹನುಮಂತರಾಯಪ್ಪ , ಪುರಸಭೆಯ ನೂತನ ನಾಮಿನಿ ಸದಸ್ಯರಾದ ಥಿಯೇಟರ್ ಗಂಗಾಧರ್, ಗುಟ್ಟಹಳ್ಳಿ ರಾಮಲಿಂಗಪ್ಪ ಶ್ರೀನಿವಾಸ್, ಪಿಡಿಒ ಹನುಮಂತರಾಯಪ್ಪ, ಸ್ಥಳೀಯ ಗ್ರಾಪಂ ಸದಸ್ಯರು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.