ಶ್ರೀರಂಗಪಟ್ಟಣ:

ಪಂಚಗ್ಯಾರಂಟಿ ಹೆಸರಲ್ಲಿ ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರ ಬಡ ಮತ್ತು ಸಾಮಾನ್ಯ ಜನರ ಅಭಿವೃದ್ಧಿಯಾಗಿದೆ ಎಂದು ಸುಳ್ಳು ಹೇಳಿಕೆಗಳ ನೀಡುತ್ತಿದೆ ಎಂದು ಮಂಡಲ ಅಧ್ಯಕ್ಷ ಪೀಹಳ್ಳಿ ರಮೇಶ್ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರ್ಕಾರ ಮಾಧ್ಯಮಗಳಲ್ಲಿ ಪ್ರಚಾರಗಳಿಗಷ್ಟೇ ಸೀಮಿತವಾಗಿದೆ ಹೊರತು ವಾಸ್ತವದಲ್ಲಿ ಜನರ ಅಭಿವೃದ್ಧಿ ಸತ್ಯಕ್ಕೆ ದೂರವಾಗಿದೆ. ಪಂಚ ಗ್ಯಾರಂಟಿ ಮೂಲಕ ಅಧಿಕಾರಕ್ಕೆ ಬಂದು ಇದೀಗ, ವಿವಿಧ ಯೋಜನೆಗಳ ಸುಧಾರಣೆ ಹಾಗೂ ಪರಿಷ್ಕರಣೆ ಹೆಸರಲ್ಲಿ ಅರ್ಹರನ್ನು ಸಹ ಕಡಿತಗೊಳಿಸಿ ಅವರನ್ನು ಸೌಲಭ್ಯ ವಂಚಿತರನ್ನಾಗಿಸುತ್ತಿದೆ ಎಂದು ಖಂಡಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 3.6 ಲಕ್ಷ ವೃದ್ಧಾಪ್ಯ ವೇತನ ಪಿಂಚಣಿ ಫಲಾನುಭವಿಗಳಿದ್ದು, ಪರಿಷ್ಕರಣೆ ಹೆಸರಲ್ಲಿ ಇವರಲ್ಲಿ 60 ಸಾವಿರ ಫಲಾನುಭವಿಗಳನ್ನು ಯೋಜನೆಯಿಂದ ಏಕಾಏಕಿ ಕೈಬಿಡಲಾಗಿದೆ. ಬಡತನ ರೇಖೆಯಿಂದ ಕೆಳಗಿದ್ದ ಬಿಪಿಎಲ್ ಕಾರ್ಡ್ ಬಳಕೆದಾರರು ವಾರ್ಷಿಕ 1.20 ಲಕ್ಷ ಆದಾಯ ಪ್ರಮಾಣವಿದ್ದಲ್ಲಿ ಅವರು ಯೋಜನೆಗೆ ಅರ್ಹರು ಎಂಬುದು ನಿಗಧಿ ಪಡಿಸಲಾಗಿತ್ತು. ಆದರೆ, ಇದೀಗ ವೃದ್ಧಾಪ್ಯ ವೇತನ ಪಿಂಚಣಿಗೆ ಅರ್ಹರಾಗಲು ಕೇವಲ 30 ಸಾವಿರಗಳಷ್ಟು ಮಾತ್ರ ಆದಾಯ ಪ್ರಮಾಣ ಇರಬೇಕು, ಗರಿಷ್ಠ ಹೊಂದಿದವರು ಈ ಯೋಜನೆಗೆ ಅನರ್ಹರು ಎಂದು ನೀಡಿರುವ ಆದೇಶ ಸಂಪೂರ್ಣ ಅವೈಜ್ಞಾನಿಕ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ರೈತರ ಜಮೀನಿನಲ್ಲಿ ಕಬ್ಬು, ಭತ್ತ, ಬಾಳೆ, ತೆಂಗು ಸೇರಿದಂತೆ ಇತರೆ ಬೆಳೆಗಳು ಭಾಗಶಃ ನೀರಿಲ್ಲದೆ ಶೆ.70%ರಷ್ಟು ಒಣಗಿದ್ದು, ಅವುಗಳನ್ನು ಉಳಿಸಿಕೊಳ್ಳಲು ಸರ್ಕಾರ ತಕ್ಷಣ ಒಂದು ಕಟ್ಟು ನೀರು ಹರಿಸಬೇಕು ಎಂದು ಆಗ್ರಹಿಸಿದ್ದಾರೆ.


ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ಎಲ್ಲವನ್ನು ಕಂಡರೂ ಕಾಣದಂತೆ ಜಾಣ ಕುರುಡು ವಹಿಸಿರುವ ತಾಲೂಕು ಆಡಳಿತ ಹಾಗೂ ಪೊಲೀಸ್‌ ಅಧಿಕಾರಿಗಳು ಕೂಡಲೇ ಕ್ರಮ ವಹಿಸಸಬೇಕು ಎಂದು ಒತ್ತಾಯಿಸಿದ್ದಾರೆ.