ಸಾರಾಂಶ
ಕನ್ನಡಪ್ರಭ ವಾರ್ತೆ ಕಾಗವಾಡ ಪಟ್ಟಣದಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು, ಕಪಿಚೇಷ್ಟಿಯಿಂದ ಶಾಲಾ ಮಕ್ಕಳು, ಮಹಿಳೆಯರು, ವಯೋವೃದ್ಧರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದು, ಹೊರಗೆ ಬರಲು ಹೆದರುತ್ತಿದ್ದಾರೆ. ಬೆಳಗ್ಗೆ ಆಯಿತೆಂದರೆ ಕೋತಿಗಳ ಕಾಟದ್ದೇ ಚಿಂತೆ ಜನರನ್ನು ಕಾಡುತ್ತಿದೆ. ಶಾಲಾ ಮಕ್ಕಳ ಬ್ಯಾಗ್ ಕಿತ್ತುಕೊಳ್ಳಲು ಪ್ರಯತ್ನಿಸುತ್ತಿವೆ. ಹೆದರಿ ಮಕ್ಕಳು ಕಿರುತ್ತ ಓಡಿದರೆ ಅವರ ಮೇಲೆ ದಾಳಿ ನಡೆಸುತ್ತವೆ. ಪ್ರತಿನಿತ್ಯ ಮಕ್ಕಳನ್ನು ಶಾಲೆಗೆ ಬಿಡುವುದು ಮಹಿಳೆಯರಿಗೆ ದೊಡ್ಡ ಸಮಸ್ಯೆಯಾಗಿದೆ.
ಕನ್ನಡಪ್ರಭ ವಾರ್ತೆ ಕಾಗವಾಡ
ಪಟ್ಟಣದಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು, ಕಪಿಚೇಷ್ಟಿಯಿಂದ ಶಾಲಾ ಮಕ್ಕಳು, ಮಹಿಳೆಯರು, ವಯೋವೃದ್ಧರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದು, ಹೊರಗೆ ಬರಲು ಹೆದರುತ್ತಿದ್ದಾರೆ. ಬೆಳಗ್ಗೆ ಆಯಿತೆಂದರೆ ಕೋತಿಗಳ ಕಾಟದ್ದೇ ಚಿಂತೆ ಜನರನ್ನು ಕಾಡುತ್ತಿದೆ. ಶಾಲಾ ಮಕ್ಕಳ ಬ್ಯಾಗ್ ಕಿತ್ತುಕೊಳ್ಳಲು ಪ್ರಯತ್ನಿಸುತ್ತಿವೆ. ಹೆದರಿ ಮಕ್ಕಳು ಕಿರುತ್ತ ಓಡಿದರೆ ಅವರ ಮೇಲೆ ದಾಳಿ ನಡೆಸುತ್ತವೆ. ಪ್ರತಿನಿತ್ಯ ಮಕ್ಕಳನ್ನು ಶಾಲೆಗೆ ಬಿಡುವುದು ಮಹಿಳೆಯರಿಗೆ ದೊಡ್ಡ ಸಮಸ್ಯೆಯಾಗಿದೆ.ಶಾಲಾ ಮಕ್ಕಳು ಟಿಫನ್ ಹಿಡಿದುಕೊಂಡು, ಪುಟ್ಟ ಮಕ್ಕಳು ಕೈಯಲ್ಲಿ ಹಿಡಿದ ಬಿಸ್ಕಿಟ್, ಬ್ರೆಡ್, ಚಾಕಲೇಟ್ ಕಸಿದುಕೊಳ್ಳಲು ಬೆನ್ನು ಬೀಳುತ್ತವೆ. ಇದರಿಂದ ಮಕ್ಕಳು ಹೊರಗೆ ಹೋಗಲು ಹೆದರುತ್ತಿದ್ದಾರೆ.
ಕೆಲವು ಮನೆಗಳಲ್ಲಿ ಬಿಸಿಲಿಗೆ ಒಣಗಲು ಹಾಕುವ ಕೊಬ್ಬರಿ, ಕಡಲೆ ಬೇಳೆ, ಶೇಂಗಾ ಸೇರಿದಂತೆ ಮತ್ತಿತರ ಧವಸಧಾನ್ಯಗಳನ್ನು ಕೋತಿಗಳು ತಿಂದು ಹಾಳು ಮಾಡುತ್ತಿವೆ. ಮನೆಯಲ್ಲಿನ ತಟ್ಟೆ, ಪಾತ್ರೆಗಳನ್ನು ಸಹ ಕೊಂಡ್ಯೊಯುತ್ತಿದ್ದು, ಮಹಿಳೆಯರು ಗಾಬರಿಗೊಳಗಾಗಿದ್ದಾರೆ. ಜನನಿಬಿಡ ಪ್ರದೇಶಗಳು ಮಾತ್ರವಲ್ಲದೇ ಆಹಾರಕ್ಕಾಗಿ ವಾನರ ಸೈನ್ಯ ಗ್ರಾಮದ ಸುತ್ತಮುತ್ತಲಿನ ತೋಟಗಳಿಗೂ ದಾಳಿ ಇಟ್ಟು ತೆಂಗಿನಕಾಯಿ, ಬಾಳೆ, ಟೊಮೆಟೋ, ಪಪ್ಪಾಯಿ ಸೇರಿದಂತೆ ವಿವಿಧ ತರಕಾರಿಗಳನ್ನು ಹಾಳು ಮಾಡುತ್ತಿರುವುದರಿಂದ ರೈತರು ರೋಸಿ ಹೋಗಿದ್ದಾರೆ. ಒಮ್ಮೆಲೆ ಕೋತಿಗಳ ಹಿಂಡು-ಹಿಂಡಾಗಿ ಕಾಣಿಸಿಕೊಂಡು ಮನೆಗಳ ಮೇಲೆ, ಕಂಪೌಂಡ್ ಮೇಲೆ, ಮನೆಯ ಆವರಣದಲ್ಲಿರುವ ಗಿಡಗಳು, ವಿದ್ಯುತ್ ತಂತಿಗಳ ಮೇಲೆ ತಮ್ಮ ಕಪಿಚೇಷ್ಟೆ ಪ್ರದರ್ಶಿಸುವ ಮೂಲಕ ಭೀತಿ ಉಂಟು ಮಾಡುತ್ತಿರುವುದರಿಂದ ಮಕ್ಕಳು, ವೃದ್ಧರು ಮನೆಯಿಂದ ಹೊರಗೆ ಬರುವುದಕ್ಕೆ ಹೆದರುವಂತಾಗಿದೆ.ಪಟ್ಟಣದಲ್ಲಿ ಕಳೆದೆರೆಡು ದಿನಗಳಿಂದ ಕೋತಿಯೊಂದು ಸಾರ್ವಜನಿಕ ಸ್ಥಳಗಳಲ್ಲಿ ಪ್ರತ್ಯಕ್ಷವಾಗಿ, ಸಾರ್ವನಿಕರಿಗೆ ವಿಪರೀತ ಕಾಟ ನೀಡುತ್ತಿದ್ದು, ಕಂಡಕಂಡವರ ಮೇಲೆರಗಿ, ಕಚ್ಚಲು ಪ್ರಾರಂಭಿಸಿದೆ. ಕೋತಿಯ ದಾಳಿಗೆ ನಾಲ್ಕೈದು ಜನರು ಗಾಯಗೊಂಡಿದ್ದಾರೆ. ಮಂಗನನ್ನು ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹರಸಾಹಸ ಪಟ್ಟರೂ ಮಂಗ ಮಾತ್ರ ಬಲೆಗೆ ಬೀಳದೇ ತನ್ನ ಕಪಿಚೇಷ್ಠೆ ಮುಂದುವರಿಸಿದೆ.ಈ ಕುರಿತು ಅರಣ್ಯ ಇಲಾಖೆ ಅಧಿಕಾರಿ ಮಾತನಾಡಿ, ಮಂಗನನ್ನು ಹಿಡಿಯಲು ಪ್ರಯತ್ನ ಮಾಡಲಾಗುತ್ತಿದ್ದು, ಹಿಡಿಯಲು ಹೋದವರ ಮೇಲೆ ಅದು ಹಲ್ಲೆ ಮಾಡುತ್ತಿದೆ. ಹಾಗಾಗಿ ವಿಳಂಬವಾಗುತ್ತಿದೆ. ಪ್ರಯತ್ನ ಮುಂದುವರೆಸಿದ್ದೇವೆ ಎಂದರು.
------